Advertisement

Mangaluru: ಮಹಾಕಾಳಿಪಡ್ಪು ಕೆಳಸೇತುವೆ ಜನವರಿಯಲ್ಲಿ ಪೂರ್ಣ

12:50 AM Nov 05, 2024 | Team Udayavani |

ಮಂಗಳೂರು: ಮೋರ್ಗನ್‌ ಗೇಟ್‌- ಜಪ್ಪಿನಮೊಗರು ಕ್ರಾಸ್‌ (ರಾ.ಹೆ.66) ಸಮೀಪ ಮಹಾಕಾಳಿ ಪಡ್ಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಳ ಸೇತುವೆಗಳ (ಆರ್‌ಯುಬಿ) ಕಾಮಗಾರಿ 2025ರ ಜನವರಿಯಲ್ಲಿ ಪೂರ್ಣಗೊಳ್ಳಲಿದೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರ ಅಧ್ಯಕ್ಷತೆಯಲ್ಲಿ ಜರಗಿದ ರೈಲ್ವೆ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ದಕ್ಷಿಣ ರೈಲ್ವೆ ಅಧಿ ಕಾರಿಗಳು ಈ ಕುರಿತು ಮಾಹಿತಿ ನೀಡಿದರು.

ನಿರಂತರ ಸುರಿಯುತ್ತಿದ್ದ ಮಳೆ ಯಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆಳಸೇತುವೆಯ ಕೊನೆಯ ನಾಲ್ಕು ಬಾಕ್ಸ್‌ಗಳ ಕಾಮಗಾರಿ ಆರಂಭಿಸಲಾಗಿದೆ ಎಂದು ರೈಲ್ವೇ ಪಾಲಕ್ಕಾಡ್‌ ವಿಭಾಗದ ವಿಭಾಗೀಯ ಸಹಾಯಕ ರೈಲ್ವೇ ಪ್ರಬಂಧಕ ಅನಿಲ್‌ ಕುಮಾರ್‌ ಹೇಳಿದರು.

ಅವಳಿ ಕೆಳ ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಮಂಗಳೂರು ಸ್ಮಾರ್ಟ್‌ ಸಿಟಿ ಜತೆ ಸೇರಿ ಸಂಪರ್ಕ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಸದ ಕ್ಯಾ| ಚೌಟ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್‌ ಅವರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್‌.ಆನಂದ್‌ ಅವರಿಗೆ ಸೂಚಿಸಿದರು.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಪುನರಭಿವೃದ್ಧಿ ಕಾಮಗಾರಿಗೆ ಡಿಪಿಆರ್‌ ಸಿದ್ಧಪಡಿಸಲಾಗಿದ್ದು, ಕೇಂದ್ರ ಕಚೇರಿ ಮೂಲಕ ರೈಲ್ವೆ ಇಲಾಖೆಗೆ ಸಲ್ಲಿಸಲಾಗುವುದು. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಸ್ಟೇಬ್ಲಿಂಗ್‌ ಲೈನ್‌ ಒದಗಿಸಲಾಗುವುದು ಮತ್ತು ವರ್ಷ ದೊಳಗೆ ಕಾಮಗಾರಿಯನ್ನು ಪೂರ್ತಿ ಮಾಡಲಾಗುವುದು ಎಂದರು.

Advertisement

ಫರಂಗಿಪೇಟೆ ರೈಲು
ನಿಲ್ದಾಣ ಅಭಿವೃದ್ಧಿ
ಫರಂಗಿಪೇಟೆ ರೈಲು ನಿಲ್ದಾಣದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸಬೇಕು. ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸು ವಂತೆ ಅಧಿಕಾರಿಗಳಿಗೆ ಚೌಟರು ಸೂಚನೆ ನೀಡಿದರು.

ಪಾಂಡೇಶ್ವರ ಲೆವೆಲ್‌ ಕ್ರಾಸಿಂಗ್‌
ಪಾಂಡೇಶ್ವರ ರೈಲ್ವೇ ಗೇಟ್‌ನಲ್ಲಿ ವಾಹನ ದಟ್ಟಣೆ ತಪ್ಪಿಸಲು ರೈಲ್ವೇ ಕೆಳಸೇತುವೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಈ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ನರೇಶ್‌ ಶೆಣೈ, ಸುರತ್ಕಲ್‌ ಎನ್‌ಐಟಿಕೆಗೆ ರೈಲ್ವೇ ಕೆಳಸೇತುವೆ ಮಾಡುವ ಕಾರ್ಯಸಾಧ್ಯತಾ ವರದಿ ನೀಡಲು ತಿಳಿಸಲಾಗಿದೆ. ಅಲ್ಲಿನ ಚರಂಡಿಗಳಲ್ಲಿನ ನೀರಿನ ಮಟ್ಟ ಸಹಿತ ಪ್ರದೇಶದ 500 ಮೀ. ಸುತ್ತಳತೆಯ ಸಮೀಕ್ಷೆಯ ವರದಿಯನ್ನು ಎನ್‌ಐಟಿಕೆ ಕೇಳಿದೆ ಎಂದರು.

ಈ ಆರ್ಥಿಕ ವರ್ಷದೊಳಗೆ ಸುರತ್ಕಲ್‌ ಮತ್ತು ಮೂಲ್ಕಿ ನಿಲ್ದಾಣ ಗಳನ್ನು ಕ್ರಮವಾಗಿ 1.57 ಕೋ. ರೂ ಮತ್ತು 1.46 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು. ಪ್ಲಾಟ್‌ಫಾರ್ಮ್ ಮೇಲ್ಛಾವಣಿ ನಿರ್ಮಾಣವನ್ನು ಇದು ಒಳಗೊಂಡಿದೆ ಎಂದು ಕಾರವಾರದ ಕೊಂಕಣ ರೈಲ್ವೇ ಪ್ರಾದೇಶಿಕ ರೈಲ್ವೇ ವ್ಯವಸ್ಥಾಪಕಿ ಆಶಾ ಶೆಟ್ಟಿ ತಿಳಿಸಿದರು.

ಬಂದರಿನಲ್ಲಿರುವ ಗೂಡ್ಸ್‌ ಶೆಡ್‌ನ್ನು ಉಳ್ಳಾಲಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ಬಂದರಿನಲ್ಲಿರುವ ಹಲವು ಗೋದಾಮುಗಳು ಉಳ್ಳಾಲ ಹಾಗೂ ಪಣಂಬೂರಿಗೆ ಸ್ಥಳಾಂತರಗೊಳ್ಳ ಬೇಕಿದ್ದು, ಅದನ್ನು ತ್ವರಿತಗೊಳಿಸು ವಂತೆಯೂ ಚೌಟ ಸೂಚಿಸಿದರು.

ಅಮೃತ್‌ ಭಾರತ್‌
ಸ್ಟೇಷನ್‌ ಕಾಮಗಾರಿ: ಅತೃಪ್ತಿ
ನೈಋತ್ಯ ರೈಲ್ವೆ ವ್ಯಾಪ್ತಿಯ ಸುಬ್ರಹ್ಮಣ್ಯ ರೋಡ್‌ ಮತ್ತು ಬಂಟ್ವಾಳ ನಿಲ್ದಾಣ ಮತ್ತು ದಕ್ಷಿಣ ರೈಲ್ವೇ ವ್ಯಾಪ್ತಿಯ ಮಂಗಳೂರು ಜಂಕ್ಷನ್‌ನಲ್ಲಿ ಅಮೃತ್‌ ಭಾರತ್‌ ಸ್ಟೇಷನ್‌ (ಎಬಿಎಸ್‌ಎಸ್‌) ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

ಬೈಕಂಪಾಡಿ ಲೆವಲ್‌ ಕ್ರಾಸಿಂಗ್‌ ಪರಿಶೀಲನೆಗೆ ಸೂಚನೆ
ಬೈಕಂಪಾಡಿ ಪೇಟೆಯಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗುವ ರೈಲ್ವೇ ಲೆವಲ್‌ ಕ್ರಾಸಿಂಗ್‌ ಅನ್ನು 30 ವರ್ಷಗಳ ಹಿಂದೆ ಮುಚ್ಚಲಾಗಿದೆ. ಇದರಿಂದ ಕೈಗಾರಿಕಾ ಪ್ರದೇಶಕ್ಕೆ ಹೋಗುವ ವಾಹನಗಳು ಸುತ್ತಿ ಬಳಸಿ ಹೋಗಬೇಕಾಗಿದೆ. ಅಲ್ಲದೆ ಇತ್ತೀಚೆಗೆ ರೈಲ್ವೇ ಇಲಾಖೆಯು ಇಲ್ಲಿ ಸಾರ್ವಜನಿಕರು ಹಳಿ ದಾಟದಂತೆ ತಡೆಗೋಡೆ ನಿರ್ಮಿಸಿದ್ದು, ಇದರಿಂದ ತೀವ್ರ ತೊಂದರೆಯಾಗಿದೆ. ಈ ರೈಲ್ವೇ ಗೇಟನ್ನು ಮತ್ತೆ ತೆರೆಯಬೇಕು ಎಂದು ಸಾರ್ವಜನಿಕರು ಮತ್ತು ಕೈಗಾರಿಕಾ ಸಂಘಟನೆಗಳಿಂದ ತೀವ್ರ ಒತ್ತಡವಿದೆ ಆದ್ದರಿಂದ ಇಲ್ಲಿ ಲೆವಲ್‌ ಕ್ರಾಸಿಂಗ್‌ ಮತ್ತೆ ತೆರೆಯಬೇಕು ಎಂದು ಶಾಸಕ ಡಾ| ಭರತ್‌ ಶೆಟ್ಟಿ ಆಗ್ರಹಿಸಿದರು.

ಶಾಸಕ ಉಮಾನಾಥ ಕೋಟ್ಯಾನ್‌, ಮೇಯರ್‌ ಮನೋಜ್‌ ಕೋಡಿಕಲ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ, ಡಿಸಿಪಿ ದಿನೇಶ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next