ಮಂಗಳೂರು: ನಗರ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಗುಡ್ಡ ಕುಸಿತ ಉಂಟಾಗುತ್ತಿರುವ ಪ್ರದೇಶಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ ನೀಡಿ ಪರಿಶೀಲಿಸಿದರು.
ಸಂಭಾವ್ಯ ಪ್ರಾಕೃತಿಕ ದುರಂತ ತಡೆಗೆ ಕಂದಾಯ, ಮಹಾನಗರ ಪಾಲಿಕೆ, ಕುಡ್ಸೆಂಪ್ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ (ಎನ್‌ಎಚ್‌ಎಐ)ದ ಜತೆ ಸಭೆ ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಮೊದಲಿಗೆ ಗುಡ್ಡದ ಮೇಲ್ಭಾಗದ ಜನವಸತಿ ಪ್ರದೇಶಗಳಿಗೆ ಭೇಟಿ ನೀಡಿ, ಅಪಾಯದಲ್ಲಿರುವ ಮನೆಗಳು, ಒಳಚರಂಡಿ ವೆಟ್‌ವೆಲ್ ಬಳಿ ಪರಿಶೀಲಿಸಿದ್ದು, ಸ್ಥಳೀಯರು ಕಾಮಗಾರಿ ಕುರಿತು ಆಕ್ರೋಶ ಹೊರ ಹಾಕಿದರು. ಬೇಸಗೆಯಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸಿದ್ದು, ಭಾರೀ ಪ್ರಮಾಣದಲ್ಲಿ ಕುಸಿತ ಉಂಟಾಗಿ ಹಾನಿ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಬಳಿಕ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ಗುಡ್ಡದ ಕೆಳಭಾಗಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು. ಜಿಲ್ಲಾಡಳಿತ ದೊಂದಿಗೆ ಸಮನ್ವಯದೊಂದಿಗೆ ಕಾಮಗಾರಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸಂಸದರು ಸೂಚಿಸಿದೆ. ಹೆಚ್ಚು ಅಪಾಯ ಇರುವಲ್ಲಿ ಕಾಮಗಾರಿ ನಡೆಸುವಾಗ ಸ್ಥಳೀಯ ನಿವಾಸಿಗಳು, ಜನಪ್ರತಿನಿಧಿಗಳ ಜತೆ ಚರ್ಚೆ ನಡೆಸಿ ಬಳಿಕ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕೆತ್ತಿಕಲ್ ಬಗ್ಗೆ ಜಿಲ್ಲಾಡಳಿತ ತಜ್ಞರ ತಂಡ ನಿರ್ದೇಶನದಂತೆ ಕ್ರಮ ಕೈಗೊಳ್ಳಬೇಕು.ಸೋಮವಾರವೇ ಇಲಾಖೆಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ತ್ವರಿತ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಝಿ¾, ಮನಪಾ ಸದಸ್ಯರಾದ ಹೇಮಲತಾ, ಸಂಗೀತಾ ನಾಯಕ್, ಕುಡ್ಸೆಂಪ್, ಮನಪಾ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.
ರಾಜ್ಯ ಸರಕಾರ ಪರಿಹಾರ ಬಿಡುಗಡೆ ಮಾಡಲಿ
ದ.ಕ. ಜಿಲ್ಲೆಯ ಹಲವೆಡೆಗಳಲ್ಲಿ ಪ್ರಾಕೃತಿಕ ದುರಂತ ಸಂಭವಿಸಿ, ಅಪಾರ ಹಾನಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಧ್ಯಯನ ನಡೆಸಿ ಸರಕಾರಕ್ಕೆ ಕೂಡಲೇ ವರದಿ ಸಲ್ಲಿಸಬೇಕು. ಜಿಲ್ಲೆಗೆ ದೊಡ್ಡ ಮೊತ್ತದ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಸರಕಾರವನ್ನು ಆಗ್ರಹಿಸಬೇಕು ಎಂದು ಸಂಸದ ಚೌಟ ಹೇಳಿದರು.
ಉಸ್ತುವಾರಿ ಸಚಿವರು ಜಿಲ್ಲೆಗೆ ಕಾಟಾಚಾರಕ್ಕೆ ಬಂದು ಪ್ರಾಕೃತಿಕ ದುರಂತ ಸ್ಥಳಗಳನ್ನು ವೀಕ್ಷಿಸಿದರೆ ಪ್ರಯೋಜನವಿಲ್ಲ. ಅವರು ಪರಿಹಾರ ಬಿಡುಗಡೆ ಮಾಡಿಸಲಿ. ಕೇಂದ್ರ ಸರಕಾರದ ಎನ್‌ಡಿಆರ್‌ಎಫ್ ನಿಧಿ ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅದು ಬಿಟ್ಟು ಎನ್‌ಡಿಆರ್‌ಎಫ್ ಅನುದಾನ ನೀಡಿಲ್ಲ ಎಂದು ಆರೋಪಿಸುವುದಲ್ಲಿ ಅರ್ಥವಿಲ್ಲ. ಬಿಜೆಪಿ ಸರಕಾರದ ಅವ ಧಿಯಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದಾಗ ಕೇಂದ್ರದ ಎನ್‌ಡಿಆರ್‌ಎಫ್ ನಿಧಿ ಗೆ ಕಾಯದೆ ರಾಜ್ಯ ದಿಂದಲೇ ನೇರವಾಗಿ ಪರಿಹಾರ ಬಿಡುಗಡೆ ಮಾಡಲಾಗಿತ್ತು ಎಂದರು.