Advertisement
ವಕೀಲ ಗಂಗಾಧರ ಎಚ್., ಕುಸುಮ ಕೆ. ಸುವರ್ಣ, ನೀರಜಾಕ್ಷಿ ಅಗರ್‌ವಾಲ್ ಮತ್ತು ಇತರ 11 ಮಂದಿ ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಸುರತ್ಕಲ್ ಮುಂಚೂರಿನ ಕೆ.ರುಕ್ಕಯ್ಯ ಶೆಟ್ಟಿ ದೂರು ನೀಡಿದವರು.
ಕೆ.ರುಕ್ಕಯ್ಯ ಶೆಟ್ಟಿ ಕಟ್ಟಡ ನಿರ್ಮಾಣ ಮತ್ತು ಜಾಗದ ವ್ಯವಹಾರಗಳನ್ನು ನಡೆಸಿಕೊಂಡು ಬರುತ್ತಿದ್ದರು. ಈ ಜಾಗದ ವ್ಯವಹಾರವನ್ನು ಆಪ್ತಸ್ನೇಹಿತನಾದ ಗಂಗಾಧರ ಎಚ್. ಮೂಲಕ ಮಾಡಿಸುತ್ತಿದ್ದರು. ರುಕ್ಕಯ್ಯ ಶೆಟ್ಟಿ ಅವರು 2018ರಲ್ಲಿ ಕುಸುಮ ಕೆ.ಸುವರ್ಣ, ವಾರಿಜಾ ವಿ.ಬಂಗೇರ (ಈಗ ಮೃತರು) ಮತ್ತು ಆಕೆಯ ಪುತ್ರಿ ನೀರಜಾಕ್ಷಿ ಅಗರ್‌ವಾಲ್ ಅವರಿಂದ ಹೊಸಬೆಟ್ಟು ಗ್ರಾಮದಲ್ಲಿ 60.45 ಲಕ್ಷ ರೂ.ಗಳಿಗೆ ಜಾಗ ಖರೀದಿಸುವ ಬಗ್ಗೆ ಒಪ್ಪಂದ ಮಾಡಿಕೊಂಡು 20 ಲಕ್ಷ ರೂ ಮುಂಗಡ ಹಣ ಪಾವತಿಸಿದ್ದರು. ಆ ಜಾಗದಲ್ಲಿ ಕೆಲವು ಸೆಂಟ್ಸ್‌ಗಳನ್ನು ನವೀನ್ ಸಾಲ್ಯಾನ್ ಮತ್ತು ಕೇತನ್ ಕುಮಾರ್ ಅವರಿಗೆ ಮಾರಾಟ ಮಾಡುವ ಬಗ್ಗೆಯೂ ಒಪ್ಪಂದ ಮಾಡಿಕೊಂಡು ಅವರಿಂದ ಮುಂಗಡ ಹಣವನ್ನು ಕೂಡ ಪಡೆದಿದ್ದರು. ರುಕ್ಕಯ್ಯ ಶೆಟ್ಟಿ ಖರೀದಿಸಲು ಒಪ್ಪಂದ ಮಾಡಿಕೊಂಡಿದ್ದ ಜಾಗದ ಅಭಿವೃದ್ಧಿ, ದಾಖಲೆಪತ್ರಗಳನ್ನು ಕ್ರಮಬದ್ಧಗೊಳಿಸುವ ಕೆಲಸ ಮಾಡುತ್ತಿದ್ದರು. 2020ರಲ್ಲಿ ರುಕ್ಕಯ್ಯ ಶೆಟ್ಟಿ ಅವರು ನರಸಂಬಂಧಿ ರೋಗಕ್ಕೆ ಒಳಗಾಗಿ ಸ್ಮರಣಶಕ್ತಿ ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕುಟುಂಬವು ಈ ಜಾಗದ ವ್ಯವಹಾರಕ್ಕೆ ಗಂಗಾಧರ್ ಎಚ್. ಅವರನ್ನೇ ಅವಲಂಬಿಸಿತ್ತು. ಆದರೆ ರುಕ್ಕಯ್ಯ ಶೆಟ್ಟಿ ಅವರು ಚೇತರಿಸಿಕೊಂಡ ಅನಂತರ ಅವರಿಗೆ ಗಂಗಾಧರ ಎಚ್. ಇತರ ಆರೋಪಿಗಳೊಂದಿಗೆ ಸೇರಿ ವಂಚನೆ ಮಾಡಿರುವುದು ಗಮನಕ್ಕೆ ಬಂದಿದೆ. ರುಕ್ಕಯ್ಯ ಶೆಟ್ಟಿ ಅವರು ಖರೀದಿಸಲು ಒಪ್ಪಂದ ಮಾಡಿಕೊಂಡ ಜಾಗವನ್ನು ಅವರ ಗಮನಕ್ಕೆ ತಾರದೆಯೇ ಗಂಗಾಧರ ಎಚ್. ಇತರ ಆರೋಪಿಗಳಾದ ಕುಸುಮ ಸುವರ್ಣ ಮತ್ತು ನೀರಜಾಕ್ಷಿ ಅಗರ್‌ವಾಲ್ ಅವರೊಂದಿಗೆ ಸೇರಿಕೊಂಡು ಹಲವರಿಗೆ ಮಾರಾಟ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.