Advertisement

Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ

03:15 PM Dec 28, 2024 | Team Udayavani |

ಮಹಾನಗರ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಕಡಲನಗರಿ ಸಜ್ಜಾಗುತ್ತಿದೆ. ‘ಹೆಲಿ ಟೂರಿಸಂ’ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಸಾರ್ವಜನಿಕರು ಮಂಗಳೂರಿನ ಸೌಂದರ್ಯವನ್ನು ಸವಿಯಲಿ ಎಂಬ ಉದ್ದೇಶದಿಂದ ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತ ದಿಂದ ಇದೇ ಮೊದಲ ಬಾರಿಗೆ ‘ಕುಡ್ಲ ಹೈ’ ಎಂಬ ಹೆಲಿಕಾಪ್ಟರ್‌ ದರ್ಶನ ಸೇವೆ ನಡೆಯುತ್ತಿದೆ. ಅಡ್ಯಾರ್‌ನಿಂದ ಆರಂಭವಾಗಿ ಮಂಗಳೂರು ನಗರದ ಸೌಂದರ್ಯ, ಕಡಲ ಕಿನಾರೆಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಇದೆ. ಸಾರ್ವಜನಿಕರಿಂದ ಇನ್ನಷ್ಟು ಸ್ಪಂದನೆಯ ಭರವಸೆ ಇದ್ದು, ಇದರ ಮುಂದುವರಿದ ಭಾಗವಾಗಿ ಹೆಲಿಟೂರಿಸಂಗೆ ಉತ್ತೇಜನ ನೀಡಲು ರೂಪರೇಖೆ ತಯಾರಾಗುತ್ತಿದೆ.

ನಗರದಲ್ಲಿ ಹೆಲಿ ಟೂರಿಸಂ ಆರಂಭದ ಬಗ್ಗೆ ನಾಲ್ಕೈದು ವರ್ಷಗಳ ಹಿಂದೆಯೇ ಪ್ರಸ್ತಾವ ಇತ್ತು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಕದ್ರಿ ಪಾರ್ಕ್‌ ಬಳಿಯ ಸ್ಕೇಟಿಂಗ್‌ ರಿಂಕ್‌ ಸಮೀಪ ‘ಹೆಲಿ ಟೂರಿಸಂ’ ಆರಂಭಿಸುವ ನಿಟ್ಟಿನಲ್ಲಿ ಸ್ಥಳ ವೀಕ್ಷಣೆ ನಡೆದಿತ್ತು. ಬಳಿಕ ತಜ್ಞರ ತಂಡ ಮಂಗಳೂರಿಗೆ ಆಗಮಿಸಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಈ ಭಾಗದಲ್ಲಿ ಆಕಾಶವಾಣಿ ಕೇಂದ್ರ ಸಹಿತ ವಿದ್ಯುತ್‌ ತಂತಿಗಳು ಹಾದು ಹೋಗುವ ಕಾರಣ ಆ ಪ್ರದೇಶ ಅಷ್ಟೊಂದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಆ ಪ್ರಸ್ತಾವನೆಯನ್ನು ಕೈ ಬಿಡಲಾಗಿತ್ತು. ಮೇರಿಹಿಲ್‌ನಲ್ಲಿ ಈಗಾಗಲೇ ಹೆಲಿಪ್ಯಾಡ್‌ ಇರುವ ಕಾರಣ ಅದನ್ನೇ ಅಭಿವೃದ್ಧಿಪಡಿಸಿ, ಅನುಮತಿ ಪಡೆದು ಇಲ್ಲಿಂದಲೇ ಆರಂಭಿಸುವ ಸಾಧ್ಯತೆ ಇದೆ.

ಹೆಲಿಟೂರಿಸಂ ಅಭಿವೃದ್ಧಿಗೆ ಚಿಂತನೆ
ಜಿಲ್ಲೆಯಲ್ಲಿ ಹೆಲಿಟೂರಿಸಂ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ. ಅದರಂತೆ ಕರಾವಳಿ ಉತ್ಸವದ ಅಂಗವಾಗಿ ಕುಡ್ಲ ಹೈ ಎಂಬ ಹೆಲಿಕಾಫ್ಟರ್‌ ದರ್ಶನ ವ್ಯವಸ್ಥೆ ಕಲ್ಪಿಸಿದ್ದೇವೆ. ಇದು ಯಶಸ್ಸು ಗಳಿಸಿದರೆ ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಶಾಶ್ವತವಾಗಿಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಇದರಿಂದ ನಗರದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಕ್ಕಂತಾಗುತ್ತದೆ.
– ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ

ಏನೇನು ಅನುಕೂಲ?
ದಕ್ಷಿಣ ಕನ್ನಡ, ಕೇರಳ, ಉತ್ತರ ಕನ್ನಡ, ಮಲೆನಾಡು ಭಾಗದಲ್ಲಿ ಹಲವು ಧಾರ್ಮಿಕ ಕ್ಷೇತ್ರಗಳಿವೆ. ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಕೆಲವು ಮಂದಿ ಸ್ವದೇಶಿಗರು, ವಿದೇಶಿಗರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಟ್ಯಾಕ್ಸಿ ಮುಖೇನ ಪ್ರವಾಸಿ ಕ್ಷೇತ್ರ ದರ್ಶನ ಮಾಡುತ್ತಾರೆ. ಇನ್ನು ಕ್ರೂಸ್‌ ಮೂಲಕವೂ ಪ್ರವಾಸಿಗರು ಆಗಮಿಸುತ್ತಿದ್ದು, ಹೆಲಿ ಟೂರಿಸಂ ಅಭಿವೃದ್ಧಿಗೊಂಡರೆ, ಈ ಭಾಗಕ್ಕೆ ಹೆಲಿಕಾಪ್ಟರ್‌ ಮುಖೇನ ತೆರಳಬಹುದು. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೂ ಹೆಲಿ ಟೂರಿಸಂ ಆರಂಭದಿಂದ ಅನುಕೂಲವಾಗಲಿದೆ.

Advertisement

ಹೆಲ್ತ್‌ ಟೂರಿಸಂಗೂ ಅನುಕೂಲ
ಹೆಲಿಕಾಫ್ಟರ್‌ ವ್ಯವಸ್ಥೆಯಿಂದ ಹೆಲ್ತ್‌ ಟೂರಿಸಂಗೂ ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮದ ಜೊತೆ ಆರೋಗ್ಯ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಆಸ್ಪತ್ರೆಗಳು, ಮೆಡಿಕಲ್‌ ಕಾಲೇಜುಗಳು ಇವೆ. ದೇಶದ ಹಲವು ಕಡೆಗಳಿಂದ ರೋಗಿಗಳು ಆಗಮಿಸುತ್ತಾರೆ. ಒಂದೊಮ್ಮೆ ಅತ್ಯಗತ್ಯ ಸಂದರ್ಭದಲ್ಲಿ ರೋಗಿಗಳನ್ನು ಒಂದು ಕಡೆಯಿಂದ ಮತ್ತೂಂದು ಕಡೆ ಸ್ಥಳಾಂತರ ಸಹಿತ ತ್ವರಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದು ನೆರವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next