Advertisement

Mangaluru: 8 ಕೆಜಿ ಮುಡಿ ಹಾರಿಸುವ 8ರ ಕಿನ್ನಿಪಿಲಿ!

03:14 PM Oct 10, 2024 | Team Udayavani |

ಮಹಾನಗರ: ನವರಾತ್ರಿ ಸಂದರ್ಭದಲ್ಲಿ ಹುಲಿ ಕುಣಿತದ ತಾಸೆ ಪೆಟ್ಟು ಎಂಥವರನ್ನಾದರೂ ಹುಚ್ಚೆಬ್ಬಿಸುತ್ತದೆ. ಮಕ್ಕಳಿಂದ ಹಿಡಿದು ಮಹಿಳೆಯರಾದಿಯಾಗಿ ಹಿರಿಯ ರವರೆಗೆ ಎಲ್ಲರೂ ಮರುಳಾಗುತ್ತಾರೆ.

Advertisement

ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳು ಹುಲಿ ವೇಷ, ಅದರ ಕಸರತ್ತುಗಳಲ್ಲಿ ಪಳಗುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಉಡುಪಿಯ ಆದ್ಯಾ ಎಂಬ 8 ವರ್ಷದ ಬಾಲಕಿ 8 ಕೆಜಿ 800 ಗ್ರಾಂ ತೂಕದ ಮುಡಿಯನ್ನು ಬಾಯಿಯಿಂದ ಎತ್ತಿ ಎಸೆಯುವ ಸಾಹಸ ಮಾಡುತ್ತಿರುವುದು ಭಾರಿ ಸುದ್ದಿಯಾಗುತ್ತಿದೆ. ವಯಸ್ಸಿಗೆ ಮೀರಿದ ಈಕೆಯ ಸಾಹಸ ಸಾಕಷ್ಟು ಚರ್ಚೆಗಳಿಗೂ ಕಾರಣವಾಗಿದ್ದು, ಈ ಮಗುವಿನಿಂದ ಅಷ್ಟು ಭಾರದ ಮುಡಿ ಎತ್ತಿ ಹೊಡೆಯಲು ಸಾಧ್ಯವೇ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಆಕೆಯ ಹೆತ್ತವರಾದ ಉಡುಪಿಯ ಉದ್ಯಾ ವರ ನಿವಾಸಿ ಅಶೋಕ್‌ ಮತ್ತು ಅಕ್ಷತಾ ದಂಪತಿ ಯಾರು ಬೇಕಾದರೂ ಎಂಟು ಕೆಜಿಗಿಂತಲೂ ಹೆಚ್ಚು ತೂಕದ ಅಕ್ಕಿ ಮುಡಿ ತಂದಿಟ್ಟು ಸವಾಲು ಹಾಕಬಹುದು ಎಂದು ಹೇಳುತ್ತಿದ್ದಾರೆ.

ಹಲವು ತಂಡಗಳಲ್ಲಿ ಭಾಗಿ
ಅಶೋಕ್‌ ಮತ್ತು ಅಕ್ಷತಾ ಪುತ್ರಿ ಆದ್ಯ ಈಗಿನ್ನೂ ಶಾಲೆಗೆ ಹೋಗುವ ಬಾಲಕಿಯಾ ಗಿದ್ದು, ಆಗಲೇ ತನ್ನ ಹುಲಿ ನೃತ್ಯ ಮತ್ತು ಸಾಹಸದ ಕಾರಣಕ್ಕಾಗಿ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ಹುಲಿ ತಂಡಗಳ ಪ್ರದರ್ಶನ ಗಳಲ್ಲಿ ಭಾಗವಹಿಸುತ್ತಿದ್ದಾಳೆ.

ಮಂಗಳೂರು, ಪುತ್ತೂರು, ಬಂಟ್ವಾಳ, ಉಡುಪಿಯಲ್ಲಿ ಈಗಾಗಲೇ ಈಕೆಯ ಕುಣಿತ ನಡೆದಿದೆ. ತಾಸೆಯ ಒಂದೊಂದು ಪೆಟ್ಟಿಗೆ ಆದ್ಯ ಇಡುವ ಪ್ರತೀ ಹೆಜ್ಜೆಗಳು ಕೂಡ ಮನಸೂರೆಗೊಳ್ಳುತ್ತಿವೆ. ಆಕೆಯ ಹುಲಿ ಕುಣಿತ ನೋಡಿದವರು ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ.

ರೋಮಾಂಚನಕಾರಿ ಹೆಜ್ಜೆಗಳು
ಮುಳಿಹಿತ್ಲುವಿನಲ್ಲಿ ಇತ್ತೀಚೆಗೆ ನಡೆದ ಹುಲಿ ಕುಣಿತದಲ್ಲಿ ತಾಸೆಯ ಸದ್ದಿಗೆ ಆದ್ಯಳ ನರ್ತನ ಕಂಡಾಗ ಹುಲಿ ಕುಣಿತವೆಂಬುವುದು ಆಕೆಯ ರಕ್ತದಲ್ಲೇ ಇದೇ ಎನ್ನುವಂತೆ ಭಾಸವಾಗುತ್ತದೆ. ಯಾವುದೇ ಹಿರಿಯ ಹುಲಿ ಕುಣಿತಗಾರರಿಗೆ ಕಮ್ಮಿ ಇಲ್ಲದಂತೆ ಆಕೆ ಹೆಜ್ಜೆ ಹಾಕುತ್ತಾಳೆ. ತನ್ನ ವಯಸ್ಸಿಗೆ ಮೀರಿದ ಹೆಜ್ಜೆಗಾರಿಕೆ ಆತ್ಮವಿಶ್ವಾಸ ಆಕೆಯದು.

Advertisement

ಆಕೆಗೆ ಬಾಲ್ಯದಿಂದಲೇ ಹುಲಿ ಕುಣಿತದ ಆಸಕ್ತಿ ಇತ್ತು. ಆಕೆಗೆ ಸಂಪೂರ್ಣ ಸಹಕಾರವನ್ನು ನೀಡಿದ್ದೇವೆ. ಆಕೆಯ ಸ್ವಂತ ಸಾಮರ್ಥ್ಯದಿಂದ ಕಲಿತುಕೊಂಡಿದ್ದು, ಆಕೆಯ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಹೆಚ್ಚಿನ ಸಾಧನೆಗೆ ನಿರಂತರ ಬೆಂಬಲ ನೀಡಲಾಗುವುದು.
-ಅಶೋಕ್‌ ಉದ್ಯಾವರ್‌, ಬಾಲಕಿಯ ತಂದೆ

ಮುಡಿ ಎತ್ತುವ ಸಾಮರ್ಥ್ಯ ಬೆಳೆದ ಬಗೆ!
ಮುಳಿಹಿತ್ಲು ಫ್ರೆಂಡ್ಸ್‌ ಸರ್ಕಲ್‌ನ ಜಗದಂಬಾ ಹುಲಿ ತಂಡದ ಊದು ಪೂಜೆಯ ವೇಳೆ ಬಾಲಕಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ ಆಕೆ 8 ಕೆ.ಜಿ. 800 ಗ್ರಾಂನ ಅಕ್ಕಿ ಮುಡಿಯನ್ನು ಎತ್ತಿ ಎಸೆದಿದ್ದಾಳೆ. ಆದ್ಯ ಕಳೆದ ಎರಡು ವರ್ಷಗಳಿಂದ ಇದರ ಅಭ್ಯಾಸ ನಡೆಸುತ್ತಿದ್ದು, ಎರಡು ಕೆ.ಜಿ.ಯಿಂದ ಹಂತ ಹಂತವಾಗಿ ಪಳಗಿ ಈ ಹಂತಕ್ಕೆ ತಲುಪಿದ್ದಾಳೆ ಎಂದು ತಂದೆ ಅಶೋಕ್‌ ತಿಳಿಸಿದ್ದಾರೆ.

2 ವರ್ಷದಿಂದಲೇ ಹುಲಿ ಕುಣಿತ ಶುರು
ಆದ್ಯ 2 ವರ್ಷ ಪ್ರಾಯದವಳಿದ್ದಾಗಲೇ ಹುಲಿ ಕುಣಿತದತ್ತ ಆಕರ್ಷಿತಳಾಗಿದ್ದಳು. ಸ್ಥಳೀಯ ಭಜನಾ ಮಂದಿರದಲ್ಲಿ ಅಕ್ಕನೊಂದಿಗೆ ತೆರಳಿ ಅಭ್ಯಾಸ ಆರಂಭಿಸಿ ಇದೀಗ ವಿವಿಧ ಹೆಜ್ಜೆಗಳಲ್ಲಿ ಪರಿಣತಳಾಗಿದ್ದಾಳೆ. ನಿರಂತರವಾಗಿ ಅಭ್ಯಾಸ ಮಾಡಿದ ಕಾರಣ ಇಂದು ಎಲ್ಲರ ನೆಚ್ಚಿನ ಹುಲಿಯಾಗಿದ್ದಾಳೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ನೇಪಾಲದಲ್ಲಿ ಹೆಜ್ಜೆ ಹಾಕಲಿರುವ ಆದ್ಯಾ
ಕರಾವಳಿಯಲ್ಲಿ ಹವಾ ಎಬ್ಬಿಸಿರುವ ಆದ್ಯ ಆಗಲೇ ಗುಜರಾತ್‌ನಲ್ಲಿ ಪ್ರದರ್ಶನ ನೀಡಿದ್ದಾಳೆ. ದೀಪಾವಳಿ ಸಂದರ್ಭದಲ್ಲಿ ನೇಪಾಲದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು, ಇದಕ್ಕೆ ತಯಾರಿಗಳು ನಡೆಸಲಾಗುತ್ತಿದೆ ಎಂದು ಹೆತ್ತವರು ತಿಳಿಸಿದ್ದಾರೆ.

ಅನಾರೋಗ್ಯದಲ್ಲಿರುವ ಮಗುವಿಗೆ ನೆರವು
ಹುಲಿ ಕುಣಿತದಲ್ಲಿ ಸಂಗ್ರಹವಾಗುವ ಹಣವನ್ನು ಅನಾರೋಗ್ಯದಲ್ಲಿರುವ ಮಗುವಿನ ಚಿಕಿತ್ಸೆಗೆ ನೀಡೋಣ ಎಂದು ಆದ್ಯ ಹೆತ್ತವರಿಗೆ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಹುಲಿ ಕುಣಿತದ ವೇಳೆ ಸಂಗ್ರಹವಾಗುವ ಹಣವನ್ನು ಕೂಡಿಡುತ್ತಿದ್ದು, ಪರ್ಕಳದ ಅನಾರೋಗ್ಯದಲ್ಲಿರುವ ಮುಗುವಿನ ಚಿಕಿತ್ಸೆಗೆ ನೀಡುವ ನಿರ್ಧಾರವಾಗಿದೆ.

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next