ಪೊಲೀಸರಿಗೆ ಸುಮಾರು 1.75 ರೂ. ಪತ್ತೆಯಾಗಿದ್ದು, ಹೀಗಾಗಿ, ದರೋಡೆ ದೂರು ನೀಡಿದ್ದ ಸಿಬಂದಿ ಮತ್ತು ಉದ್ಯಮಿಯೇ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
Advertisement
ತನಿಖೆ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಅವರಿಂದ ಒಟ್ಟು 1.75 ಕೋ. ರೂ. ವಶಪಡಿಸಿಕೊಂಡಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಮತ್ತಷ್ಟು ಹಣದ ವ್ಯವಹಾರ ನಡೆದಿರುವ ಸಂಶಯ ಪೊಲೀಸರಿಗೆ ಮೂಡಿದ್ದು, ಸುಮಾರು 2.35 ಕೋ. ರೂ.ಗಳ ವ್ಯವಹಾರ ಇದಾಗಿತ್ತು ಎನ್ನುವ ಸುಳಿವು ಕೂಡ ಸಿಕ್ಕಿದೆ. ಹೀಗಾಗಿ, ಚಿನ್ನ ಸಾಗಾಟ ಸಿಬಂದಿ ಅಪಹರಣ ಹಾಗೂ 15 ಲ.ರೂ. ದರೋಡೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ದೂರುದಾರರೇ ಪೊಲೀಸರ ತನಿಖೆ ಎದುರಿಸುವಂತಾಗಿದೆ. ಈ ಪ್ರಕರಣದಲ್ಲಿ ಬಹುಕೋಟಿ ರೂ. ವಿನಿಮಯ ಆಗಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ತಿಳಿಸಲು ನಿರ್ಧರಿಸಿದ್ದಾರೆ.
ಮಂಜುನಾಥ ಗಣಪತಿ ಪಾಲಂಕರ್ ಅವರು ಅ.23ರಂದು ಮಧ್ಯಾಹ್ನ 12.20ಕ್ಕೆ ಮುಂಬಯಿಯಿಂದ ಖಾಸಗಿ ಬಸ್ಸಿನಲ್ಲಿ ಬಂದು ನಗರದ ಲೇಡಿಹಿಲ್ ಬಸ್‌ಸ್ಟಾಪ್‌ನಲ್ಲಿ ಇಳಿದು ಕಾರ್‌ಸ್ಟ್ರೀಟ್‌ಗೆ ತೆರಳಲೆಂದು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಅವರನ್ನು ತಡೆದು ನಿಲ್ಲಿಸಿ ಸಮೀಪದಲ್ಲಿದ್ದ ಇನ್ನೋವಾ ಕಾರಿನಲ್ಲಿ ಅಪಹರಿಸಿ ಕುಂಟಿಕಾನ ಕಾವೂರು ಮೂಲಕ ಬಜಪೆ ಪೇಟೆಯಿಂದ ಸುಮಾರು 1ಕಿ.ಮೀ. ಮುಂದೆ ಕರೆದೊಯ್ದರು. ಅಲ್ಲಿನ ಜನಸಂಚಾರವಿಲ್ಲದ ಸ್ಥಳದಲ್ಲಿ ಅವರಿಂದ 15 ಲ.ರೂ. ಹಾಗೂ 2 ಮೊಬೈಲ್ ಫೋನ್‌ಗಳಿದ್ದ ಬ್ಯಾಗನ್ನು ಕಸಿದು ಕಾರಿನಿಂದ ಕೆಳಗೆ ದೂಡಿ ಪರಾರಿಯಾಗಿದ್ದರು. ಈ ಬಗ್ಗೆ ಉರ್ವ ಠಾಣೆಯಲ್ಲಿ ಅ. 26ರಂದು ಪ್ರಕರಣ ದಾಖಲಾಗಿತ್ತು.
ಎಸಿಪಿ ಎಂದು ಬೆದರಿಸಿದ್ದರು
ಲೇಡಿಹಿಲ್‌ನಿಂದ ಅಪಹರಿಸಿ ಕೊಂಡು ಹೋಗುವಾಗ ಕಾರಿನಲ್ಲಿ ಒಟ್ಟು 6 ಮಂದಿ ಇದ್ದರು. ಅವರು ಮಂಜುನಾಥ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ “ಅವರು ಎಸಿಪಿ ಮಂಜುನಾಥ ಶೆಟ್ಟಿ. ಅವರು ಏನು ಮಾಡ್ತಾರೆ ನೋಡಿ’ ಎಂದು ಬೆದರಿಸಿದ್ದರು. ವಿಶೇಷ ತನಿಖಾ ತಂಡ ರಚನೆ
ಪ್ರಕರಣದ ಪತ್ತೆಗಾಗಿ ಎರಡು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಇವು ಇಬ್ಬರನ್ನು ಬಂಧಿಸಿ 1.75 ಕೋ.ರೂ. ಮತ್ತು ಇನ್ನೋವಾ ಕಾರನ್ನು ವಶಪಡಿಸಿಕೊಂಡಿದೆ ಎಂದು ಕಮಿಷನರ್ ಟಿ. ಆರ್. ಸುರೇಶ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಉಪಸ್ಥಿತರಿದ್ದರು.
Related Articles
ವಶಪಡಿಸಿಕೊಂಡಿರುವ ಹಣವು ಮಂಗಳೂರಿನ ಕಾರ್ ಸ್ಟ್ರೀಟ್‌ನ ವೈಷ್ಣವಿ ಜುವೆಲರಿ ಮಾಲಕ ಸಂತೋಷ್ ಅವರಿಗೆ ಸೇರಿದ್ದಾಗಿರುತ್ತದೆ. ವೈಷ್ಣವಿ ಜುವೆಲರಿಗೆ ಮುಂಬಯಿಯಲ್ಲೂ ಒಂದು ಶಾಖೆಯಿದೆ. ಕಾರ್‌ಸ್ಟ್ರೀಟ್ ಮಳಿಗೆಯಿಂದ ಮುಂಬಯಿ ಶಾಖೆಗೆ ಚಿನ್ನಾಭರಣಗಳನ್ನು ಕೊಂಡೊಯ್ದು ಅಲ್ಲಿಂದ ಮಂಗಳೂರಿಗೆ ನಗದು ಹಣ ಸಾಗಿಸಲು ಕೆಲವರನ್ನು ನೇಮಿಸಿದ್ದು, ಅವರಲ್ಲಿ ಮಂಜುನಾಥ ಗಣಪತಿ ಪಾಲಂಕರ್ ಒಬ್ಬರಾಗಿದ್ದಾರೆ.
Advertisement
ವೈಷ್ಣವಿ ಜುವೆಲರಿಯ ಉದ್ಯೋಗಿ ಮಂಜುನಾಥ ಗಣಪತಿ ಪಾಲಂಕರ್ ಮುಂಬಯಿಯಿಂದ ಹಣವನ್ನು ತೆಗೆದುಕೊಂಡು ಬರುತ್ತಿದ್ದಾರೆ ಎಂಬ ಮಾಹಿತಿ ಪಡೆದ ಆರೋಪಿಗಳು ಲೇಡಿಹಿಲ್‌ನಲ್ಲಿ ಕಾದು ನಿಂತು ಸುಲಿಗೆ ಮಾಡಿದ್ದಾರೆ ಎಂದು ಟಿ.ಆರ್.ಸುರೇಶ್ ವಿವರಿಸಿದರು.
ಐಟಿ ಇಲಾಖೆಗೆ ಮಾಹಿತಿವೈಷ್ಣವಿ ಜುವೆಲರಿ ನಡೆಸುತ್ತಿರುವ ಈ ವ್ಯವಹಾರದ ತನಿಖೆ ಮುಂದು ವರಿಯಲಿದೆ. ಇದು ಅಧಿಕೃತ ವ್ಯವಹಾರವೇ ಅಥವಾ ಅನಧಿಕೃತವೇ ಎಂದು ತನಿಖೆ ನಡೆಸಬೇಕಾಗಿದೆ. ಮಂಜುನಾಥ ಪಾಲಂಕರ್‌ಗೆ ತಾನು ಸಾಗಿಸುತ್ತಿದ್ದ ಹಣದಲ್ಲಿ ಎಷ್ಟು ಹಣ ಇದೆ ಎಂಬುದು ತಿಳಿದಿರಲಿಲ್ಲವೇ ಎಂಬ ಸಂಶಯವೂ ಇದೆ. ಆದ್ದರಿಂದ ಒಟ್ಟು ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು. ಹೊಸ ತಿರುವು
ಆರೋಪಿಗಳನ್ನು ವಿಚಾರಿಸಿದಾಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಂಜುನಾಥ ಗಣಪತಿ ಪಾಲಂಕರ್ ನೀಡಿದ್ದ ದೂರಿನಲ್ಲಿ 15 ಲ.ರೂ. ಮತ್ತು ಮೊಬೈಲ್ ಫೋನ್ ಮಾತ್ರ ಸುಲಿಗೆ ಮಾಡಲಾಗಿತ್ತು ಎಂಬುದಾಗಿ ತಿಳಿಸಿದ್ದರು. ಅಲ್ಲದೆ ಅಪಹರಣ ಮತ್ತು ಸುಲಿಗೆ ನಡೆದದ್ದು ಅ. 23 ರಂದು. ಪೊಲೀಸರಿಗೆ ದೂರು ನೀಡಿದ್ದು ಅ. 26ರಂದು. ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ತಮ್ಮ ಜತೆ ಇನ್ನೂ ನಾಲ್ವರು ಸಹಚರರಿದ್ದರು ಎಂಬುದಾಗಿ ಬಾಯ್ಬಿಟ್ಟಿದ್ದಾರೆ. ಸುಲಿಗೆಗೆ ಒಳಗಾದ ವ್ಯಕ್ತಿಯ ಬ್ಯಾಗಿನಲ್ಲಿ ಒಟ್ಟು 2.35 ಕೋ. ರೂ.ಗಳಿದ್ದವು. ಈ ಪೈಕಿ 1.75 ಕೋ.ರೂ. ತಮ್ಮ ಬಳಿ ಇದ್ದು ಇನ್ನುಳಿದ ಹಣ (60 ಲ. ರೂ.) ಆ ನಾಲ್ವರ ಬಳಿಯಿದೆ ಎಂದು ತಿಳಿ ಸಿದ್ದಾರೆ. ಹಾಗಾಗಿ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಕಮಿಷನರ್ ವಿವರಿಸಿದರು. ತನಿಖಾ ತಂಡದ ವಿವರ
ವಿಶೇಷ ತನಿಖಾ ತಂಡದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಾಂತಾರಾಂ, ಪಿಎಸ್‌ಐ ಶ್ಯಾಮ್ ಸುಂದರ್, ಸಿಬಂದಿ ಚಂದ್ರಶೇಖರ್, ರಾಮಣ್ಣ, ರಾಜ, ಚಂದ್ರ ಅಡೂರು, ಚಂದ್ರಹಾಸ ಸನಿಲ್, ಸೀನಪ್ಪ ಪೂಜಾರಿ, ರಾಜೇಂದ್ರ; ಉರ್ವ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ಎಸ್. ನಾಯಕ್ ಹಾಗೂ ಸಿಬಂದಿ ಇದ್ದರು. ಬಂಧಿತರು
ಬಿ.ಸಿ. ರೋಡ್ ಸಮೀಪದ ತಲಪಾಡಿ ಕೆ.ಬಿ.ರಸ್ತೆಯ ಅಬ್ದುಲ್ ಮನ್ನಾನ್ (29) ಮತ್ತು ಮಂಗಳೂರಿನ ಪಡೀಲ್ ಅಳಪೆ ಬಸ್ ನಿಲ್ದಾಣ ಬಳಿಯ ರಾಝಿ (26) ಬಂಧಿತರು. ಅಬ್ದುಲ್ ಮನ್ನಾನ್ ಹಳೆ ಆರೋಪಿಯಾಗಿದ್ದು, ಉಳ್ಳಾಲ ಠಾಣೆಯಲ್ಲಿ 7 ಹಾಗೂ ಕೊಣಾಜೆ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಈ ಪೈಕಿ 3 ಕೊಲೆ ಪ್ರಕರಣಗಳಾಗಿವೆ. ಟಾರ್ಗೆಟ್ ಗ್ರೂಪ್‌ನ ತದ್ರೂಪ
ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ನಡೆಸುತ್ತಿದ್ದ ವ್ಯವಹಾರದ ಮಾದರಿಯಲ್ಲೇ ಇಲ್ಲಿ ವ್ಯವಹಾರ ನಡೆಯುತ್ತಿತ್ತು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕಮಿಷನರ್ ಹೇಳಿದರು. ವಶಪಡಿಸಿದ ಹಣದಲ್ಲಿ 2 ಸಾ. ರೂ. ಮುಖ ಬೆಲೆಯ 7,250 ನೋಟುಗಳು (1.45 ಕೋ. ರೂ.) ಮತ್ತು 500 ರೂ.ಮುಖ ಬೆಲೆಯ 6,000 ನೋಟುಗಳು (30 ಲಕ್ಷ ರೂ.) ಇವೆ.