ಮಂಗಳೂರು: ಭಯೋತ್ಪಾದನೆಗೆ ಧರ್ಮ ಇಲ್ಲ ಎನ್ನುವ ಕಾಂಗ್ರೆಸಿಗರು ಈಗ ರಾಹುಲ್ ಗಾಂಧಿ ವಿರುದ್ಧ ತೀರ್ಪು ಬಂದಾಗ ಇಡೀ ನ್ಯಾಯಾಧೀಶರ ಸಮುದಾಯವನ್ನೇ ಭ್ರಷ್ಟರಂತೆ ಬಿಂಬಿಸುತ್ತಿರುವುದು ಆತಂಕಕಾರಿ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯ ಸಭಾ ಸದಸ್ಯ ಸುಧಾಂಶು ತ್ರಿವೇದಿ ಹೇಳಿದ್ದಾರೆ.
ರಾಹುಲ್ ಗಾಂಧಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಇದು ಮೊದಲಲ್ಲ. ಕಾಂಗ್ರೆಸ್ ನೈತಿಕವಾಗಿ, ರಾಜಕೀಯವಾಗಿ ಮಾತ್ರವಲ್ಲ, ಈಗ ಕಾನೂನುರೀತ್ಯಾ ಕೂಡ ಸೋತಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಶೇ. 85 ಕಮಿಷನ್ ಕಾಂಗ್ರೆಸ್
ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೇ ಸರಕಾರ ಕೊಡುವ 1 ರೂ. ಪರಿಹಾರದಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ಹೋಗುತ್ತದೆ ಎಂದಿದ್ದರು. ಇದರಿಂದ ಶೇ 85 ಅವರ ಕಮಿಷನ್ ಆದಂತಾಗಲಿಲ್ಲವೇ ಎಂದು ತ್ರಿವೇದಿ ಪ್ರಶ್ನಿಸಿದರು. ಲೋಕಾಯುಕ್ತವನ್ನು ಬಲಗುಂದಿಸಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು.
ಮೋದಿ ಸರಕಾರ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐಗಳನ್ನು ದುರುಪಯೋಗ ಮಾಡುತ್ತಿಲ್ಲ. ಭ್ರಷ್ಟಾಚಾರದ ಪ್ರಕರಣಗಳು ಹಿಂದಿನಿಂದಲೂ ಇದ್ದವು ಎಂದು ತ್ರಿವೇದಿ ಹೇಳಿದರು.
Related Articles
ಬೊಮ್ಮಾಯಿ ಉತ್ತಮ ಕೆಲಸ ಮಾಡಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರೇ ಸಿಎಂ ಅಭ್ಯರ್ಥಿ ಎಂದರು. ಕಾಂಗ್ರೆಸ್ ಹಲವು ಉಚಿತ ಯೋಜನೆಗಳನ್ನು ಘೋಷಿಸಿರಬಹುದು, ಆದರೆ ಹೇಳಿದ್ದನ್ನು ಯಾವತ್ತಿಗೂ ಈಡೇರಿಸಿಲ್ಲ. ರಾಜಸ್ಥಾನ, ಛತ್ತೀಸಗಢದಲ್ಲೂ ಹೇಳಿದ್ದನ್ನು ಪಾಲಿಸಿಲ್ಲ ಎಂದರು. ರಾಜ್ಯ ವಕ್ತಾರ ಕ್ಯಾ| ಗಣೇಶ್ ಕಾರ್ಣಿಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ರವಿಶಂಕರ ಮಿಜಾರ್, ಜಗದೀಶ್ ಶೇಣವ ಉಪಸ್ಥಿತರಿದ್ದರು.