Advertisement

ನೀರಿಲ್ಲದೆ ಸೊರಗುತ್ತಿದೆ ಹೂವಿನಗಿಡ

10:08 AM May 22, 2019 | Naveen |

ಮಹಾನಗರ: ನಗರದ ಅತೀ ದೊಡ್ಡ ಪಾರ್ಕ್‌ಗಳಲ್ಲಿ ಒಂದಾದ ಕದ್ರಿ ಪಾರ್ಕ್‌ ಈ ಹಿಂದೆ ಹೂವುಗಳಿಂದ ನಳನಳಿಸುತ್ತಿತ್ತು. ಆದರೆ ಕೆಲವು ದಿನಗಳಿಂದ ಪಾರ್ಕ್‌ ಸೊರಗಿದ್ದು, ಗಿಡಗಳಿಗೆ ನೀರಿನ ಅಭಾವ ಉಂಟಾಗಿದೆ.

Advertisement

ಈಗ ಈ ಉದ್ಯಾನವನಕ್ಕೆ ಹಾಯಿಸಲು ನೀರು ಸಾಲುತ್ತಿಲ್ಲ. ಇದೀಗ ಕದ್ರಿ ಉದ್ಯಾನವನ ಮತ್ತು ಅಲ್ಲೇ ಪಕ್ಕದಲ್ಲಿರುವ ಕದ್ರಿ ಜಿಂಕೆ ಉದ್ಯಾನವನಕ್ಕೆ ನೀರಿನ ಸಮಸ್ಯೆ ತಲೆದೋರಿದೆ. ಬಳಕೆ ಮಾಡಿದ ನೀರನ್ನು ಬೆಂದೂರ್‌ವೆಲ್ನಲ್ಲಿ ಸಂಸ್ಕರಿಸಿ, ಬಳಿಕ ಕದ್ರಿ ಪಾರ್ಕ್‌ನಲ್ಲಿರುವ ಗಿಡಗಳಿಗೆ ಹಾಯಿಸಲು ಉಪಯೋಗಿಸಲಾಗುತ್ತಿತ್ತು. ಇದರಿಂದಾಗಿ ಈವರೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ಇದೀಗ ನಗರದೆಲ್ಲೆಡೆ ನೀರಿನ ಅಭಾವವಿದ್ದು, ಕದ್ರಿ ಪಾರ್ಕ್‌ಗೂ ಪ್ರತಿ ದಿನ ಹಾಯಿಸಲು ನೀರು ಸಿಗುತ್ತಿಲ್ಲ. ನಗರದಲ್ಲಿ ರೇಷನಿಂಗ್‌ ಆರಂಭವಾದಾಗ ಪಾರ್ಕ್‌ಗಳಿಗೆ ಹಾಯಿಸುವುವ ನೀರನ್ನು ಸ್ಥಗಿತಗೊಳಿಸಲಾಗಿದೆ.

ನೀರಿನ ಬಳಕೆ ಹೆಚ್ಚಳ
ಕದ್ರಿ ಪಾರ್ಕ್‌ ಸುಮಾರು 16 ಎಕ್ರೆ ಪ್ರದೆಶದಲ್ಲಿದ್ದು, 2 ವರ್ಷಗಳ ಹಿಂದೆ ಪಕ್ಕದಲ್ಲಿದ್ದ 4 ಎಕ್ರೆ ಪ್ರದೇಶದ ಜಿಂಕೆ ಉದ್ಯಾನವನಕ್ಕೆ ಪುನರುಜ್ಜೀವನ ಕಲ್ಪಿಸಲಾಗಿದೆ. ಇದರಿಂದಾಗಿ ನೀರಿನ ಬಳಕೆ ಹೆಚ್ಚಾಗಿದ್ದು, ಜಿಂಕೆ ಉದ್ಯಾನ ವನದಲ್ಲಿರುವ ಗಿಡಗಳಿಗೆ ಪ್ರತಿದಿನ ಸುಮಾರು 10,000 ಲೀಟರ್‌ನಷ್ಟು ನೀರು ಬೇಕಾಗುತ್ತದೆ. ಅದೇ ರೀತಿ ಪಕ್ಕದಲ್ಲಿ ರುವ ಕದ್ರಿ ಉದ್ಯಾನವನಕ್ಕೆ ಸುಮಾರು 50,000ಕ್ಕೂ ಹೆಚ್ಚಿನ ಲೀಟರ್‌ ನೀರು ಬೇಕಾಗುತ್ತದೆ. ಇದೀಗ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಪ್ರತೀ ದಿನ ಹಾಯಿಸುವಷ್ಟು ನೀರು ಬರುತ್ತಿಲ್ಲ. ಬಿಸಿಲಿನ ತಾಪವೂ ಹೆಚ್ಚಾಗುತ್ತಿದ್ದು, ಪಾರ್ಕ್‌ ನಲ್ಲಿ ಗಿಡಗಳು ಬಾಡಿ ಹೋಗಿವೆ.

ನಗರದಲ್ಲಿ ರವಿವಾರ ರಾತ್ರಿ ಹಗುರ ಮಳೆ ಬಂತಾದರೂ, ಬಳಿಕ ಸುರಿಯ ಲಿಲ್ಲ. ಹಾಗಾಗಿ ನೀರಿನ ಕೊರತೆ ಮುಂದುವರಿದಿದೆ. ನಗರದಲ್ಲಿ ಅನೇಕ ವೃತ್ತಗಳಿದ್ದು, ಅದನ್ನು ಅಭಿವೃದ್ಧಿಪಡಿಸಿ ಅವುಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಆದರೆ ನೀರಿನ ಸಮಸ್ಯೆ, ಸಮರ್ಪಕ ನಿರ್ವಹಣೆ ಯಿಲ್ಲದೆ ಸೊರಗುತ್ತಿವೆ. ನಗರದ ಡಿವೈಡರ್‌ಗಳ ನಡುವೆ ನೆಟ್ಟಂತಹ ಗಿಡಗಳಿಗೂ ದಿನಂಪ್ರತಿ ನೀರು ಹಾಯಿಸಲಾಗುತ್ತಿಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಗಿಡಗಳನ್ನು ಈಗಾಗಲೇ ಬಾಡಿ ಹೋಗಿವೆ.

ಸಂಗೀತ ಕಾರಂಜಿಗೆ ನೀರಿನ ಸಮಸ್ಯೆಯಿಲ್ಲ
ಕದ್ರಿ ಜಿಂಕೆ ಪಾರ್ಕ್‌ನಲ್ಲಿರುವ ಸಂಗೀತ ಕಾರಂಜಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಬೆಂದೂರ್‌ವೆಲ್ನಿಂದ ಪೈಪ್‌ ಮುಖೇನ ಪಾರ್ಕ್‌ಗೆ ನೀರು ಬರುತ್ತಿದೆ. ಕಾರಂಜಿಗೆ ಬಳಸಿದ ನೀರು ಪೋಲಾಗುವುದಿಲ್ಲ. ಒಂದು ಬಾರಿ ಬಳಸಿದರೆ ಪುನಃ ಅದೇ ನೀರು ಉಪಯೋಗಿಸಲಾಗುತ್ತದೆ. ಇದೇ ಕಾರಣಕ್ಕೆ ನೀರಿನ ಸಮಸ್ಯೆ ಉಂಟಾಗಲಿಲ್ಲ.

ನೀರಿನ ಅಭಾವ

ಕದ್ರಿ ಪಾರ್ಕ್‌ ಮತ್ತು ಜಿಂಕೆ ಉದ್ಯಾನವನಕ್ಕೆ ನೀರಿನ ಅಭಾವವಿದೆ. ಪಾರ್ಕ್‌ನಲ್ಲಿರುವ ಗಿಡಗಳಲ್ಲಿ ಪ್ರತೀನಿತ್ಯ ನೀರು ಹಾಯಿಸುವಷ್ಟು ನೀರಿಲ್ಲ. ಜಿಂಕೆ ಉದ್ಯಾನವನದಲ್ಲಿನ ಸಂಗೀತ ಕಾರಂಜಿಗೆ ಅದೇ ನೀರು ಪುನಃ ಬಳಕೆ ಮಾಡುವುದರಿಂದ ಸುಸೂತ್ರವಾಗಿ ಸಾಗುತ್ತಿದೆ.
– ಜಾನಕಿ,
ಹಿರಿಯ ಸಹಾಯಕಿ, ತೋಟಗಾರಿಕಾ ಇಲಾಖೆ
ವಿಶೇಷ ವರದಿ
Advertisement
Advertisement

Udayavani is now on Telegram. Click here to join our channel and stay updated with the latest news.

Next