Advertisement
ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿಯವರು ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು, ತ್ರಿಶಾ ಕಾಲೇಜಿನ ಕ್ಯಾಂಪಸ್‌ನೊಳಗೆ ಕಾಲಿರಿಸುತ್ತಿದ್ದಂತೆ ಮನಸ್ಸಿಗೆ ಆಹ್ಲಾದಕರ ಭಾವನೆ ಮೂಡಿದೆ. ತರಗತಿ ಕೊಠಡಿಗಳಿಗೆ ಇಟ್ಟಿರುವ ಮುನಿಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು, ನಮ್ಮ ಪರಂಪರೆ, ಆಧ್ಯಾತ್ಮಿಕತೆ ಮುಂದುವರಿಯುವ ಸಂಕೇತವಾಗಿದೆ. ಸಂಸ್ಥೆಯ ಶಿಕ್ಷಣದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಶಿಕ್ಷಣದಿಂದ ಮನುಷ್ಯತ್ವ ನಿರ್ಮಾಣವಾಗಬೇಕು. ಶೈಕ್ಷಣಿಕ ಫಲಿತಾಂಶಕ್ಕಿಂತ ಸಾಮಾಜಿಕವಾಗಿ ಉತ್ತಮ ಫಲಿತಾಂಶ ಮುಖ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ, ತರಗತಿಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಬಲಿಷ್ಠವಾದರೆ ದೇಶ ಬಲಿಷ್ಠವಾಗಲು ಸಾಧ್ಯ. ಇದಕ್ಕೆ ಪೂರಕವಾದ ಶಿಕ್ಷಣವನ್ನು ತ್ರಿಶಾ ಸಂಸ್ಥೆ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣ ಜತೆ ವ್ಯಕ್ತಿತ್ವ ರೂಪಿಸುವ ಕೆಲಸ ಆಗಬೇಕು. ಜೀವನದಲ್ಲಿ ಯಶಸ್ವಿಯಾಗಲು ಮಾನವೀಯತೆ, ಕರುಣೆ ಮೊದಲಾದ ಗುಣಗಳನ್ನು ಹೊಂದಿರುವುದು ಅಗತ್ಯ. ಸಂಸ್ಥೆ ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ತ್ರಿಶಾ ಸಮೂಹ ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ, ತ್ರಿಶಾ ಶಿಕ್ಷಣ ಸಮೂಹದ ಮಂಗಳೂರಿನ ಹೊಸ ಕ್ಯಾಂಪಸ್ ವಿದ್ಯಾರ್ಥಿಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೌಲ್ಯಾಧಾರಿತ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ತ್ರಿಶಾ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಶಿಕ್ಷಣದ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸುವ ಕೆಲಸವೂ ನಡೆಯಲಿದೆ. ಆ ಮೂಲಕ ಭವಿಷ್ಯದ ಭಾರತದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಆದ್ಯತೆ ನೀಡಲಾಗುವುದು ಎಂದರು.
Related Articles
ಮಂಗಳೂರಿನ ಅಳಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿಶಾ ಪದವಿ ಕಾಲೇಜಿನ ನೂತನ ಕಟ್ಟಡವು ಕೊಟ್ಟಾರದ ಬಂಗ್ರಕೂಳೂರಿನ ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್ ಬಳಿಯ ಗಣೇಶ್ ಬಾಗ್ ಲೇಔಟ್‌ನ ವಿದ್ಯಾರ್ಥಿ ಗ್ರಾಮಕ್ಕೆ ಸ್ಥಳಾಂತರ ಗೊಂಡಿದೆ. 1.2 ಎಕರೆ ಜಾಗದಲ್ಲಿ ಸುಸಜ್ಜಿತ ಕ್ಯಾಂಪಸ್ ನಿಮಿರ್ಸಸಲಾಗಿದೆ. ನೂತನ ಕಟ್ಟಡವು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕವಾದ ವಾತಾವರಣ, ವಿದ್ಯಾರ್ಥಿ ಸ್ನೇಹಿ ಕ್ಯಾಂಪಸ್ ಹಾಗೂ ನುರಿತ ಅಧ್ಯಾಪಕ ವೃಂದ ಹಾಸ್ಟೆಲ್ ಸೌಲಭ್ಯವನ್ನು ಹೊಂದಿದೆ. ಮುಂದಿನ ವರ್ಷದಿಂದ ಪಿಯು ಕಾಲೇಜು (ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಆರಂಭಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಇಚ್ಛಿಸಿದೆ.
Advertisement
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ ವೈ., ಡಿ.ವೇದವ್ಯಾಸ ಕಾಮತ್, ಮೈಸೂರು ಎಂಜಿಬಿ ವಕನ ಪ್ರಮೋಟರ್ ಗೋವಿಂದ ಜಗನಾಥ ಶೆಣೈ, ದೀಕ್ಷಾ ಸಂಸ್ಥೆಯ ಸ್ಥಾಪಕ ಡಾಣ ಶ್ರೀಧರ್ ಜಿ., ಐಸಿಎಐನ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ಅಧ್ಯಕ್ಷ ಗೌತಮ್ ಪೈ ಡಿ., ಕೆ೨ ಲರ್ನಿಂಗ್ ಸಂಸ್ಥಾಪಕ ಶ್ರೀಪಾಲ್ ಜೈನ್, ಐಸಿಐಸಿಐ ಬ್ಯಾಂಕ್‌ನ ವಲಯ ಮುಖ್ಯಸ್ಥ ಶಶಿಕುಮಾರ್ ಎನ್., ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ್ ಕಾಯರ್‌ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳದ ಜ್ಞಾನಸುಧಾ ಸಂಸ್ಥಾಪಕ ಡಾ. ಸುಧಾಕರ್ ಶೆಟ್ಟಿ, ಪ್ರಮುಖರಾದ ನರಸಿಂಹ ಶೆಣೈ, ಸಿದ್ಧಾಂತ ಫೌಂಡೇಶನ್‌ನ ಆಡಳಿತ ಟ್ರಸ್ಟಿ ರಾಮ್ ಪ್ರಭು, ತ್ರಿಶಾ ಕಾಲೇಜಿನ ಪ್ರಾಂಶುಪಾಲ ಟ್ರಸ್ಟಿ ನಮಿತಾ ಗೋಪಾಲಕೃಷ್ಣ ಭಟ್, ಪ್ರಾಂಶುಪಾಲ ಮಂಜುನಾಥ ಕಾಮತ್ ಎಂ. ತ್ರಿಶಾ ಕ್ಲಾಸಸ್ ಮಂಗಳೂರು ಸೆಂಟರ್ ಹೆಡ್ ಯಶಸ್ವಿನಿ ಯಶ್‌ಪಾಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ. ಸಹನಾ ಶೆಟ್ಟಿ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಪ್ರೊ. ಸುಪ್ರಭಾ ಎಂ. ಸ್ವಾಗತಿಸಿದರು.