Advertisement

Mangaluru:ಡೆಡ್‌ ಎಂಡಲ್ಲಿ ನಿವೇಶನವಿದ್ದರೆ,ಕಾಲುದಾರಿ ಅಗಲ ಇಲ್ಲದಿದ್ದರೆ ಅರ್ಜಿ ತಿರಸ್ಕೃತ!

01:29 PM Aug 15, 2024 | Team Udayavani |

ಮಹಾನಗರ: ನಗರದ ಹಲವೆಡೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ನಿವೇಶನ ವಿನ್ಯಾಸ ಅನುಮೋದನೆಗೆ ಕಳೆದ ಕೆಲವು ತಿಂಗಳುಗಳಿಂದ ಅಡ್ಡಿಯಾಗುತ್ತಿದೆ.

Advertisement

ಸಾಮಾನ್ಯವಾಗಿ ರಸ್ತೆಯೊಂದರ ಕೊನೆಯಲ್ಲಿ ನಿವೇಶನವಿದ್ದಾಗ ಅದಕ್ಕೆ ಅಗಲ ರಸ್ತೆ ಇಲ್ಲದೆ ಕನಿಷ್ಠ ಅಗಲದ ಕಾಲು ದಾರಿ ಇರುವ ಅನೇಕ ಪ್ರಕರಣಗಳು ನಗರದಲ್ಲಿವೆ. ಅಂತಹ ನಿವೇಶನಗಳನ್ನು ಯಾರಾದರೂ ಖರೀದಿಸಿ ಮನೆ ನಿರ್ಮಿಸಲು ಮುಂದಾಗುವಾಗ ಅದಕ್ಕೆ ಏಕ ನಿವೇಶನ ವಿನ್ಯಾಸ ಅನುಮೋದನೆ ಬೇಕಾಗುತ್ತದೆ.

ಹಿಂದೆ ಇಂತಹ ಸಂದರ್ಭಗಳಲ್ಲಿ ಮುಡಾ ಅಧಿಕಾರಿಗಳು ಅನುಮೋದನೆ ಕೊಡುತ್ತಿದ್ದರು. ಆದರೆ ಈಗಿನ ಆಯುಕ್ತರು ಇದಕ್ಕೆ ತಡೆಯೊಡ್ಡಿದ್ದಾರೆ, ಇದರಿಂದ ಮನೆಗೆಂದು ಸೈಟ್‌ ಖರೀದಿಸಿದವರು ನಿವೇಶನ ಅಭಿವೃದ್ಧಿ ಮಾಡಲಾಗದೆ ಕಂಗಾಲಾಗಿದ್ದಾರೆ. ಅವರು ಏಕನಿವೇಶನ ವಿನ್ಯಾಸ ಅನುಮೋದನೆ ಪಡೆಯದೆ ಬ್ಯಾಂಕ್‌ ಸಾಲ ಮಾಡುವಂತಿಲ್ಲ, ಮನೆ ನಿರ್ಮಾಣದ ಪರವಾನಿಗೆಯನ್ನೂ ಪಡೆಯಲಾಗದು.

ಮನೆಗೆಂದು ಜಾಗ ಖರೀದಿಸಿದವರು, ಕುಟುಂಬದ ಪಾಲಿನಲ್ಲಿ ನಿವೇಶನ ಪಡೆದವರು, ಇಂತಹ ಇಕ್ಕಟ್ಟಿನ ಜಾಗದಲ್ಲಿದ್ದರೆ ಅವರೆಲ್ಲರೂ ಈ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕಡ್ಡಾಯ ನಿಯಮವಿಲ್ಲ

Advertisement

ಪ್ರಸ್ತುತ ಅರ್ಜಿದಾರರಿಗೆ 1 ಮೀಟರ್‌ ಅಗಲದ ಕಾಲುದಾರಿ ಇರುವಲ್ಲಿ ಏಕ ನಿವೇಶನ ವಿನ್ಯಾಸ ಅನುಮೋದನೆ ಕೊಡಲಾಗದು ಎನ್ನುವ ಹಿಂಬರಹ ನೀಡಿ ಕಳುಹಿಸಲಾಗುತ್ತಿದೆ.

ಲಭ್ಯ ಮಾಹಿತಿ ಪ್ರಕಾರ ಮುಡಾದಲ್ಲಿ ಎಲ್ಲೂ ಈ ರೀತಿಯ ನಿಯಮವಿಲ್ಲ, ಕನಿಷ್ಠ 3 ಮೀಟರ್‌ ರಸ್ತೆ ಇರಬೇಕು ಎನ್ನುವ ಅಂಶವನ್ನೇ ಹಿಡಿದುಕೊಂಡು ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ.

ಹಿಂದೆ ಇಂತಹ ಸನ್ನಿವೇಶಗಳಲ್ಲಿ ಎಲ್ಲೂ ಅರ್ಜಿ ತಿರಸ್ಕರಿಸುತ್ತಿರಲಿಲ್ಲ. ರಾಜ್ಯದ ಇತರ ಕಡೆಗಳಿಂತ ಮಂಗಳೂರಿನ ಭೂವ್ಯವಸ್ಥೆ ಭಿನ್ನ, ಇಲ್ಲಿಗೆ ಬೆಂಗಳೂರಿನ ಮಾದರಿ ನಿಯಮಗಳನ್ನು ಅನ್ವಯಿಸುವುದಕ್ಕಾಗದು, ಈಗ ಕೆಲವು ತಿಂಗಳಿಂದ ಮಂಗಳೂರಿನಲ್ಲಿ ಬದಲಾಗಿರುವ ವ್ಯವಸ್ಥೆ ನಾಗರಿಕರಿಗೆ ಸಮಸ್ಯೆಯಾಗಿದೆ ಎಂದು ನಾಗರಿಕ ಹಿತರಕ್ಷಣ ವೇದಿಕೆಯ ಸಂಚಾಲಕ ಹನುಮಂತ ಕಾಮತ್‌ ಹೇಳುತ್ತಾರೆ.

ಆಯುಕ್ತರು ಎಲ್ಲಿ ಕಾನೂನು ಬಿಗಿಗೊಳಿಸಬೇಕೋ ಅದನ್ನು ಮಾಡಲಿ, ಅದಕ್ಕೆ ಆಕ್ಷೇಪವಿಲ್ಲ, ಬದಲು ಈ ರೀತಿ ಯಾವುದೇ ನಿಯಮದಲ್ಲಿ ಇಲ್ಲದಿರುವ ಅಂಶವನ್ನು ಹೇರಿದರೆ ಜನರಿಗೆ ವಿನಾಕಾರಣ ಸಂಕಷ್ಟ ಎನ್ನುತ್ತಾರೆ.

ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ

ರಸ್ತೆ ಅಗಲವಿಲ್ಲ ಎಂದು ಮುಡಾದವರು ಏಕನಿವೇಶನ ವಿನ್ಯಾಸ ಅನುಮೋದನೆ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ, ಮಂಗಳೂರಿನ ಭೂಲಕ್ಷಣಗಳೇ ಬೇರೆ ಇವೆ, ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
-ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next