Advertisement

Mangaluru ವಸತಿ ಯೋಜನೆ: 4 ವರ್ಷಗಳಿಂದ ದ.ಕ.ಕ್ಕೆ ಮನೆಯೇ ಸಿಕ್ಕಿಲ್ಲ!

12:36 AM Jul 06, 2024 | Team Udayavani |

ಮಂಗಳೂರು: ನಾಲ್ಕು ವರ್ಷಗಳಿಂದ ವಸತಿ ಯೋಜನೆಯಡಿ ದ.ಕ. ಜಿಲ್ಲೆಗೆ ಒಂದೇ ಒಂದು ಮನೆಯೂ ಮಂಜೂರಾಗಿಲ್ಲ. ಈ ಕುರಿತು ಜಿಲ್ಲೆಯಿಂದ ಅಧಿಕಾರಿಗಳು ರಾಜ್ಯಮಟ್ಟದಲ್ಲಿ ಬೇಡಿಕೆಯನ್ನೇ ಸಲ್ಲಿಸಿಲ್ಲ ಎನ್ನುವ ವಿಷಯ ಬಹಿರಂಗಗೊಂಡಿದೆ.

Advertisement

ಶುಕ್ರವಾರ ದ.ಕ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜರಗಿದ ತ್ತೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಈ ವಿಷಯ ಬಹಿರಂಗವಾಯಿತು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯಿಸಿ, ನಾಲ್ಕು ವರ್ಷಗಳಿಂದ ರಾಜ್ಯದ ಬೇರೆ ಜಿಲ್ಲೆಗಳಿಗೆ ವಸತಿ ಯೋಜನೆಗಳು ಮಂಜೂರಾದರೂ ನಮಗೆ ಸಿಗದಿರುವುದು ಅಕ್ಷಮ್ಯ. ಇದಕ್ಕೆ ಸಂಬಂಧಿಸಿದ ದ.ಕ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ಜಿಲ್ಲೆಯ ವಸತಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಮಾತನಾಡಿದ ಶಾಸಕ ಅಶೋಕ್‌ ಕುಮಾರ್‌ ರೈ, ರಾಜೀವ್‌ ಗಾಂಧಿ ವಸತಿ ನಿಗಮದಡಿ ಮನೆಗೆ ಸಲ್ಲಿಸಿದ ಅರ್ಜಿಗಳು ತಲುಪದೆ ಬಾಕಿಯಾಗಿವೆ. ಈ ಬಗ್ಗೆ ನಿಗಮದ ಬೆಂಗಳೂರು ಕಚೇರಿ ಸಿಬಂದಿ ತಿಳಿಸಿದ್ದಾರೆ. ಈ ರೀತಿಯಾದರೆ ಬಡವರಿಗೆ ಮನೆ ಸಿಗುವುದು ಹೇಗೆ? ಒಂದೂವರೆ ವರ್ಷ ಹಿಂದೆ ಸಲ್ಲಿಸಿದ ಅರ್ಜಿ ನಿಗಮಕ್ಕೆ ತಲುಪಿಯೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ತಾಂತ್ರಿಕ ಸಮಸ್ಯೆಯಾಗಿದ್ದರೆ ಅದನ್ನು ಸರಿಪಡಿಸ ಬೇಕು, ಅಧಿಕಾರಿಗಳ ಕೆಲಸವನ್ನೂ ಶಾಸಕರು ಹೋಗಿ ಮಾಡಬೇಕಾ? ಅಧಿಕಾರಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಸಚಿವರು, ಕಳುಹಿಸಿದ ಕಡತಗಳು ಏನಾಗಿವೆ ಎಂದು ಬೆನ್ನು ಹಿಡಿಯುವ ಕೆಲಸವನ್ನೂ ಮಾಡುತ್ತಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಜಿಪಂ ಸಿಇಒ ಡಾ| ಆನಂದ್‌ ಮಾತನಾಡಿ, 2018ರಲ್ಲಿ ಮಾಡಿದ ಸರ್ವೇ ಪ್ರಕಾರ ಜಿಲ್ಲೆ ಯಲ್ಲಿ ಆ ಕಾಲದಲ್ಲೇ 49 ಸಾವಿರಕ್ಕೂ ಅಧಿಕ ವಸತಿ ರಹಿತರಿ ದ್ದರು ಎಂದರು. ಇದು ಗಂಭೀರ ಸಂಗತಿಯಾಗಿದ್ದು, ಸರಕಾರದ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ ಆಗ್ರಹಿಸಿದರು.

ಜಿಲ್ಲೆಯಲ್ಲಿ ವಸತಿ ಯೋಜನೆಯಡಿ ನಿರ್ಮಾಣ ವಾಗುತ್ತಿರುವ ಮನೆಗಳು 2010ರಿಂದ 2020ರ ವರೆಗೆ ಮಂಜೂರಾಗಿರುವಂಥದ್ದು. ಈ ಹತ್ತು ವರ್ಷಗಳಲ್ಲಿ ಒಟ್ಟು 64,123 ಫ‌ಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 48,252 ಮನೆಗಳು ಪೂರ್ಣಗೊಂಡಿವೆ. 4,898 ಮನೆಗಳು ಪ್ರಗತಿಯ ಲ್ಲಿದ್ದು, 1,111 ಮನೆಗಳ ನಿರ್ಮಾಣ ಇನ್ನೂ ಆರಂಭ ವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಪ್ಲಾಟಿಂಗ್‌ಗೆ ವಿಶೇಷ ಅಭಿಯಾನ
ಹಲವು ವರ್ಷಗಳಿಂದ ಭೂಮಿಯ ಪ್ಲಾಟಿಂಗ್‌ ಮಾಡಲು ಅರ್ಜಿ ಹಾಕಿ ಕಾಯುತ್ತಿರುವವರಿಗಾಗಿ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಜಲಜೀವನ ಮಿಷನ್‌ ವಿಳಂಬ
ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ಕುಡಿ ಯುವ ನೀರಿನ ಪೂರೈಕೆಯ ಜಲಜೀವನ್‌ ಮಿಶನ್‌ ಎರಡು ವರ್ಷಗಳ ಹಿಂದೆ ಮುಕ್ತಾಯಗೊಳ್ಳಬೇಕಾಗಿ ದ್ದರೂ, ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಶೇ. 45ರಷ್ಟು ಮಾತ್ರವೇ ಕಾಮಗಾರಿ ಪೂರ್ಣವಾಗಿದ್ದು, ಉಳಿದ ಕಾಮಗಾರಿಯನ್ನು 2025 ಮಾರ್ಚ್‌ನೊಳಗೆ ಮುಗಿಸುವುದಾದರೂ ಹೇಗೆ ಎಂದು ಗುಂಡೂರಾವ್‌ ಪ್ರಶ್ನಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಕಾರಿ ಎಂಜಿನಿಯರ್‌ ಮಾಹಿತಿ ನೀಡಿ,ಯೋಜನೆಯಡಿ 90,388 ನಳ್ಳಿ ನೀರಿನ ಸಂಪರ್ಕವನ್ನು ಪ್ರಸ್ತಾವಿಸಲಾಗಿದ್ದು, 53,297 ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 37,091 ನಳ್ಳಿ ನೀರಿನ ಸಂಪರ್ಕವನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದರು.

ಈಗಾಗಲೇ ಒದಗಿಸಿರುವ ಸಂಪರ್ಕಗಳಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಪುತ್ತೂರು ಶಾಸಕ ಅಶೋಕ್‌ ರೈ ದೂರಿದರು. ಬೆಳ್ತಂಗಡಿಯ ಬೆಳಾಲಿನಲ್ಲಿ ಟ್ಯಾಂಕ್‌ ಹಾಗೂ ಬೋರ್‌ವೆಲ್‌ ನಿರ್ಮಾಣವಾಗಿ ವರ್ಷ ಕಳೆದರೂ ಸಂಪರ್ಕ ಕಲ್ಪಿಸಿಲ್ಲ. ಗುತ್ತಿಗೆದಾರರು ಕೈಕೊಟ್ಟಿದ್ದಾರೆ ಎಂಬ ಮಾಹಿತಿಯೂ ಸಭೆಯಲ್ಲಿ ಕೇಳಿಬಂತು.

ಅಕ್ರಮ ಮರಳುಗಾರಿಕೆಗೆ ಕಡಿವಾಣ: ಸೂಚನೆ
ಜಿಲ್ಲೆಯ ಸಿಆರ್‌ಝಡ್‌ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರಿಗೆ ನಿರ್ದೇಶಿಸಿದರು.

ಪಾವೂರು ಉಳಿಯ ದ್ವೀಪದಲ್ಲಿ ಮರಳುಗಾರಿಕೆಯಿಂದ ದ್ವೀಪವೇ ನಾಶವಾಗುತ್ತಿದೆ, ಜನರಿಗೆ ಸಮಸ್ಯೆಯಾಗುತ್ತಿದೆ ಎನ್ನುವ ವಿಚಾರವನ್ನು ಸದಸ್ಯ ಐವನ್‌ ಪ್ರಸ್ತಾವಿಸಿದ್ದು, ಇದನ್ನು ಗಂಭೀರ ವಾಗಿ ಪರಿಗಣಿಸಲು ಸಚಿವರು ತಿಳಿಸಿದರು.

ವಿದ್ಯುದಾಘಾತ ಸಾವು, ಕ್ರಮಕ್ಕೆ ಸೂಚನೆ
ಜಿಲ್ಲೆಯಲ್ಲಿ ವಿದ್ಯುತ್‌ ಆಘಾತದಿಂದ ಮೂವರು ಸಾವನ್ನಪ್ಪಿರುವ ಪ್ರಕರಣಗಳ ಕುರಿತು ಚರ್ಚೆಯ ವೇಳೆ, ಸಂಸದ ಕ್ಯಾ|ಬ್ರಿಜೇಶ್‌ ಚೌಟರವರು ಶಿಬಾಜೆಯಲ್ಲಿ ವಿದ್ಯುದಾಘಾತದಿಂದ ಮಹಿಳೆ ಮೃತಪಟ್ಟ ಪ್ರಕರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಟ್ರಾನ್ಸ್‌ಫಾರ್ಮರ್‌ ಸಮಸ್ಯೆ ಬಗ್ಗೆ ಮೂರು ಬಾರಿ ಸ್ಥಳೀಯರು ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದೇ ಸಾವಿಗೆ ಕಾರಣವಾಗಿದ್ದು, ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಸಚಿವರು ಪ್ರತಿಕ್ರಿಯಿಸಿ, ವಿದ್ಯುತ್‌ ಅವಘಡದಿಂದ ಅಮಾಯಕರ ಸಾವು ನೋವಿನ ಸಂಗತಿ. ಇದರ ಹೊಣೆಗಾರಿಕೆ ಮೆಸ್ಕಾಂನದ್ದು. ಶಿಬಾಜೆ ಪ್ರಕರಣದಲ್ಲಿ ತನಿಖೆ ನಡೆಸಿ 10 ದಿನಗಳಲ್ಲಿ ವರದಿ ನೀಡಬೇಕು. ಮೆಸ್ಕಾಂ ವತಿಯಿಂದ ನಿರ್ಲಕ್ಷ್ಯ ಆಗಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಹೆದ್ದಾರಿ ನಿರ್ವಹಣೆಗೆ ಸೂಚನೆ
ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ, ಮಾಣಿ ಉಪ್ಪಿನಂಗಡಿ ಭಾಗದಲ್ಲಿ ಸಂಚಾರಕ್ಕೆ ತೀರಾ ಕಷ್ಟವಾ ಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಆಗಿಂದಾಗ್ಗೆ ನಿರ್ವಹಿಸುತ್ತಿರಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಜಿಲ್ಲಾ ಎಸ್ಪಿ ಯತೀಶ್‌, ಮೆಸ್ಕಾಂ ವ್ಯವಸ್ಥಾಪಕಿ ಪದ್ಮಾವತಿ, ಉಪ ಅರಣ್ಯ ಸಂರಕ್ಷಣಾ ಧಿಕಾರಿ ಆಂಟೊನಿ ಮರಿಯಪ್ಪ ಉಪಸ್ಥಿತರಿದ್ದರು.

ಅಡಿಕೆಗೆ ಪ್ರತ್ಯೇಕ
ಪರಿಹಾರ ನೀಡಲಿ: ಚೌಟ
ಅಡಿಕೆಗೆ ಬೆಳೆವಿಮೆ ನೆರವು ಪಡೆದುಕೊಳ್ಳಬಹುದಾದರೂ ಅದು ಕೃಷಿಕರಿಗೆ ಸಾಕಾಗುವುದಿಲ್ಲ, ಎಲೆ ಚುಕ್ಕಿರೋಗ, ಹಳದಿ ರೋಗದಿಂದ ಕಂಗೆಟ್ಟಿರುವ ಕಾರಣ ರಾಜ್ಯ ಸರಕಾರವೂ ಬೆಳೆಗಾರರಿಗೆ ಆಗಿರುವ ಹಾನಿಗೆ ಪರಿಹಾರ ಒದಗಿಸಲು ಮುಂದಾಗುವುದು ಉತ್ತಮ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next