ಮಂಗಳೂರು: ನಗರದ ಜುವೆಲರಿ ಅಂಗಡಿಯ ಸೇಲ್ಸ್‌ಮ್ಯಾನ್‌ನ್ನು ಹತ್ಯೆಗೈದ ಆರೋಪಿ ಶಿಫಾಸ್(30)ನನ್ನು ನ್ಯಾಯಾಲಯವು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದು, ಆರೋಪಿ ಚಿನ್ನಾಭರಣ ದರೋಡೆ ನಡೆಸುವ ಉದ್ದೇಶದಿಂದಲೇ ಸೇಲ್ಸ್ ಮ್ಯಾನ್‌ನ್ನು ಕೊಲೆಗೈದಿರುವುದು ಗೊತ್ತಾಗಿದೆ.
ಸೇಲ್ಸ್‌ಮ್ಯಾನ್ ಅಂಗಡಿಯಲ್ಲಿ ಓರ್ವರೇ ಇದ್ದಾಗ ನುಗ್ಗಿದ್ದ ಆರೋಪಿ ಚೂರಿಯಿಂದ ಇರಿದು ಹತ್ಯೆಗೈದಿದ್ದ. ಊಟಕ್ಕೆ ತೆರಳಿದ್ದ ಅಂಗಡಿ ಮಾಲಕರು ವಾಪಸ್ ಬಂದಾಗ ಪರಾರಿಯಾಗಿದ್ದ.
ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಆರೋಪಿ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಬಿ.ಇ ಡಿಪ್ಲೊಮಾ ವಿದ್ಯಾಭ್ಯಾಸ ಪಡೆದು ಎರಡೇ ವರ್ಷದಲ್ಲಿ ಕಾಲೇಜು ತೊರೆದಿದ್ದ. ಕೋಝಿಕೋಡ್ ಚೆಮ್ಮಂಚೇರಿ ನಿವಾಸಿಯಾದ ಈತ 2014ರಿಂದ 2019ರವರೆಗೆ ದುಬೈನಲ್ಲಿದ್ದ. ಬಳಿಕ ಊರಿಗೆ ವಾಪಸಾಗಿ ಎಸ್‌ಎಎನ್‌ಎನ್ ಗ್ಲೋಬಲ… ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುತು ತಪ್ಪಿಸಲು ಹಲವು ತಂತ್ರ
ಆರೋಪಿ ಕಾಸರಗೋಡು ಸೇರಿದಂತೆ ಕೆಲವೆಡೆ ಇದೇ ರೀತಿಯ ಕೃತ್ಯ ನಡೆಸಿರುವ ಅಥವಾ ನಡೆಸಲು ಯತ್ನಿಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿ ಗುರುವಾರ ಕಾಸರಗೋಡಿನಲ್ಲಿ ಇದೇ ರೀತಿಯ ಕೃತ್ಯ ಮಾಡುವ ಉದ್ದೇಶದಿಂದ ಬಂದಿದ್ದ. ಆತನನ್ನು ವಶಕ್ಕೆ ಪಡೆದಾಗ ಆತ ಒಂದರ ಮೇಲೆ ಒಂದು ಬಟ್ಟೆಗಳನ್ನು ಧರಿಸಿರುವುದು ಗೊತ್ತಾಗಿದೆ. ಮೈಮೇಲೆ ಒಂದೊಂದು ಕಡೆ ಒಂದೊಂದು ರೀತಿಯ ಬಟ್ಟೆ ಇರುವಂತೆ ಮಾಡಿ ಗುರುತು ಎಲ್ಲಿಯೂ ಸರಿಯಾಗಿ ದಾಖಲಾಗದಂತೆ ತಂತ್ರ ಮಾಡಿದ್ದ. ಫೆ.3ರಂದು ಮಂಗಳೂರಿನಲ್ಲಿ ಹತ್ಯೆ ಮಾಡುವಾಗ ಆರೋಪಿ ಮಾಸ್ಕ್, ಟೋಪಿ ಧರಿಸಿದ್ದ.
Related Articles
ಗೂಗಲ್ ಸರ್ಚ್ ಮಾಡಿದ್ದ
ಮಂಗಳೂರಿನಲ್ಲಿ ಚಿನ್ನದ ಅಂಗಡಿ ದರೋಡೆ ಮಾಡಬೇಕೆಂದು ನಿರ್ಧರಿಸಿದ್ದ ಆರೋಪಿ ಶಿಫಾಸ್ ಗೂಗಲ್‌ನಲ್ಲಿ ಅಂಗಡಿಯನ್ನು ಸರ್ಚ್ ಮಾಡಿದ್ದಾನೆ. ಆಗ ಮಂಗಳೂರು ಜುವೆಲ್ಲರ್ಸ್ ಹೆಸರಿನ ಅಂಗಡಿಯೇ ಸಿಕ್ಕಿದೆ. ಫೆ. 3ರಂದು ಬೆಳಗ್ಗೆ ಅಂಗಡಿ ಬಳಿ ಬಂದಾಗ ಅಂಗಡಿ ಮುಚ್ಚಿತ್ತು. ಅನಂತರ ಮಧ್ಯಾಹ್ನ ಅಂಗಡಿಯಲ್ಲಿ ಸೇಲ್ಸ… ಮ್ಯಾನ್ ಒಬ್ಬನೇ ಇದ್ದಾಗ ಅಂಗಡಿಗೆ ನುಗ್ಗಿ ಸಿಬಂದಿಯನ್ನು ಹತ್ಯೆಗೈದು 12 ಪವನ್ ಚಿನ್ನದೊಂದಿಗೆ ರಿಕ್ಷಾದಲ್ಲಿ ಪರಾರಿಯಾಗಿದ್ದ.
ವ್ಯಕ್ತಿಯೊಬ್ಬರಿಂದ ಮಾಹಿತಿ
ಪೊಲೀಸರು ಆರೋಪಿಯ ಚಹರೆಯ ಚಿತ್ರ, ಸಿಸಿ ಕೆಮರಾ ದೃಶ್ಯವನ್ನು ಮಾಧ್ಯಮ, ಸಾಮಾಜಿಕ ಜಾಲತಾಣ, ಸಾರ್ವಜನಿಕ ಸ್ಥಳದಲ್ಲಿ ಹಾಕಿ ಸಾರ್ವಜನಿಕರಿಂದ ಮಾಹಿತಿ ಕೋರಿದ್ದರು. ಇದನ್ನು ಗಮನಿಸಿ ವ್ಯಕ್ತಿಯೋರ್ವರು ಆರೋಪಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ತಂಡಕ್ಕೆ ಬಹುಮಾನ
ಈ ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ, ಮಾಹಿತಿ ನೀಡಿದ ವ್ಯಕ್ತಿಗೆ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಅವರು ತಿಳಿಸಿದ್ದಾರೆ.