ಮಂಗಳೂರು: ಗಿರಿಗಿಟ್ ಚಿತ್ರದಲ್ಲಿ ವಕೀಲರನ್ನು ಉದ್ದೇಶ ಪೂರ್ವಕವಾಗಿ ನಾವು ತಮಾಷೆ ಮಾಡಿಲ್ಲ. ಈ ಎಲ್ಲಾ ಪಾತ್ರಗಳು ಕಾಲ್ಪನಿಕ ಮತ್ತು ಮನರಂಜನೆಗಷ್ಟೇ ಸೀಮಿತವಾಗಿರುತ್ತದೆ. ಇದರಿಂದ ವಕೀಲರಿಗೆ ನೋವಾಗಿರುವುದರಿಂದ ಈ ಬಗ್ಗೆ ನಾವು ವಿಷಾದಿಸುತ್ತೇವೆ. ಅದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ, ಇದು ಬಗೆಹರಿಯುತ್ತದೆ ಎಂಬ ವಿಶ್ವಾಸವೂ ನಮಗೆ ಇದೆ ಎಂದು ಗಿರಿಗಿಟ್ ಚಿತ್ರದ ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಹೇಳಿದರು.
ವಕೀಲ ಸಂಘ ಗಿರಿಗಿಟ್ ಚಿತ್ರ ಪ್ರದರ್ಶನಕ್ಕೆ ತಡಯಾಜ್ಞೆ ನೀಡಿದ ವಿಚಾರದ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗಿರಿಗಿಟ್ ಚಿತ್ರ ವಿಶ್ವದಾದ್ಯಂತ ಯಶಸ್ವಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಜನರು ನಮ್ಮ ಸಿನೆಮಾವನ್ನು ಮೆಚ್ಚಿಕೊಂಡು ಗೆಲ್ಲಿಸಿದ್ದಾರೆ. ಆದರೆ ಕೋರ್ಟ್ ಆದೇಶಕ್ಕೆ ಚಿತ್ರ ತಂಡ ಬದ್ಧವಾಗಿರುತ್ತದೆ ಎಂದರು.
ಗಿರಿಗಿಟ್ ಚಿತ್ರದಲ್ಲಿ ನ್ಯಾಯಾಂಗ ಮತ್ತು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿತ್ತು.
ಸುದ್ದಿಗೋಷ್ಠಿಯಲ್ಲಿ ಗಿರಿಗಿಟ್ ಚಿತ್ರದ ನಿರ್ಮಾಪಕ ಮಂಜುನಾಥ್ ಶೆಟ್ಟಿ, ನೃತ್ಯ ಸಂಯೋಜಕ ನವೀನ್ ಶೆಟ್ಟಿ ಉಪಸ್ಥಿತರಿದ್ದರು.