Advertisement

Mangaluru: ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ; ಕರಾವಳಿಯ ಅನಾವರಣ

01:18 PM Jan 15, 2025 | Team Udayavani |

ಮಹಾನಗರ: ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಕರಾವಳಿಯ ಕಲೆ ಸಂಸ್ಕೃತಿ ಅನಾವರಣಗೊಳಿಸಲು ತಯಾರಿಗಳಾಗುತ್ತಿವೆ. ಯಕ್ಷಗಾನ, ಕಂಬಳ, ಮೀನುಗಾರಿಕೆ ಯನ್ನು ಸಿರಿಧಾನ್ಯ ಬಳಸಿ ವಿಭಿನ್ನವಾಗಿ ಚಿತ್ರಿಸುವುದು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ.

Advertisement

ಜ. 23ರಿಂದ 26ರ ವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಬಹುತೇಕ ಸಿದ್ಧತೆಗಳು ಆರಂಭ ಗೊಂಡಿದ್ದು, ಪ್ರದರ್ಶನಕ್ಕೆ ಅಗತ್ಯವಾಗಿರುವ ವಿವಿಧ ಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಈಗಾಗಲೇ ಗಿಡಗಳು ಹೂ ಬಿಟ್ಟಿದ್ದು, ಮುಂದಿನ ಒಂದು ವಾರದಲ್ಲಿ ಉತ್ತಮ ರೀತಿಯಲ್ಲಿ ಬೆಳೆದು ನಿಲ್ಲಲಿದೆ.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತೋಟಗಾರಿಕೆ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ದಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ.

30 ಜಾತಿಯ ಹೂವುಗಳು
ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್‌, ಆಸ್ಟರ್‌, ವಿಂಕಾ ರೋಸಿಯಾ, ಕಾಕ್ಸ್‌ ಕೋಂಬ್‌, ಡೇಲಿಯಾ, ಪೆಟೂನಿಯಾ, ಟೊರಿನೋ ಮುಂತಾದ ಹೂವುಗಳನ್ನು ಕುಂಡಗಳಲ್ಲಿ ಬೆಳೆಸಲಾಗಿದೆ. 20 ಸಾವಿರದಷ್ಟು 30 ಜಾತಿಯ ಹೂವುಗಳು ಜನಾಕರ್ಷಣೆಗೆ ತಯಾರಾಗುತ್ತಿವೆ. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್‌ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಆಯೋಜಿಸಲಾಗಿದೆ.

ಸಸ್ಯ ಸಂತೆ ಮೂಲಕ ರೈತರಿಗೆ ಆಧ್ಯತೆ
ರೈತರು ಬೆಳೆದಿರುವಂತಹ ವಿಶಿಷ್ಠ ಬಗೆಯ ಹಣ್ಣು, ತರಕಾರಿ, ತೋಟದ ಬೆಳೆಗಳು, ಸಾಂಬಾರ ಬೆಳೆಗಳ ಪ್ರದರ್ಶಿಕೆಗಳು, ತೋಟಗಾರಿಕೆ ಕರಕುಶ ಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆಂಥೋರಿಯಂ ಗಿಡಗಳು, ಇತರೇ ಆಕರ್ಷಣೀಯ ವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ. ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟ ಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋ ಪಕರಣಗಳ ಮಾರಾಟಗಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುತ್ತದೆ.

Advertisement

ಮಕ್ಕಳ ಮನೋರಂಜನೆಗೆ ವ್ಯವಸ್ಥೆ
ಮಕ್ಕಳಿಗೆ ಮನೋರಂಜನೆಗೆ ವಿಶೇಷ ಒತ್ತು ನೀಡಲಾಗಿದೆ. ಅದಕ್ಕೆ ಪೂರಕವಾಗಿ ಹೂವುಗಳಿಂದ ಅಲಂಕರಿಸಿದ ಪೋಟೋ ಪ್ರೇಮ್‌, ಸೆಲ್ಫಿಧೀ ಜೋನ್‌ ಮಾದರಿಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಮನ ಸೆಳೆಯಲಿದೆ ಫ್ರಾನ್ಸ್‌ನ ಐಫೆಲ್‌ ಟವರ್‌
ಬಣ್ಣ ಬಣ್ಣದ ಹೂವುಗಳನ್ನು ಬಳಸಿಕೊಂಡು ವಿವಿಧ ಆಕೃತಿಗಳು ರಚಿಸಲು ಮುಂದಾಗಿದ್ದು, ಇದರಲ್ಲಿ ಫ್ರಾನ್ಸ್‌ ದೇಶದ ಐಫೆಲ್‌ ಟವರ್‌ ಗಮನ ಸೆಳೆಯಲಿದೆ. ಅವುಗಳ ಜತೆ ತರಕಾರಿ ಹಾಗೂ ಹಣ್ಣು ಹಂಪಲನ್ನು ಬಳಸಿಕೊಂಡು ಸಾಹಿತಿಗಳು, ಗಣ್ಯರ ಕಲಾಕೃತಿಗಳನ್ನು ರಚಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಮಂಗಳೂರು ಹಾಗೂ ಸುತ್ತ ಮುತ್ತಲಿನ ಜನರನ್ನು ಆಕರ್ಷಿಸಲು ಸೊಪ್ಪು, ತರಕಾರಿ ಮತ್ತು ಹೂಗಳು ಸೇರಿದಂತೆ 20 ಸಾವಿರ ಗಿಡಗಳನ್ನು ತಯಾರಿಸಲಾಗಿದೆ. ಎಲ್ಲಾ ವರ್ಗದ ಜನರಿಗೂ ಖುಷಿ ನೀಡಬಹುದಾದ ಗಿಡಗಳನ್ನು ಒಳಗೊಂಡಿದೆ. ರೈತರ ಮನೆಗಳಿಂದ ತರಕಾರಿ ಗಿಡಗಳನ್ನು ತಂದು ಪ್ರದರ್ಶನಕ್ಕಿಡಲು ಅವಕಾಶವಿದೆ.
-ಪ್ರಮೋದ್‌ ಹಿ.ಸ., ನಿರ್ದೇಶಕರು ತೋಟಗಾರಿಕೆ ಇಲಾಖೆ ಮಂಗಳೂರು

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.