Advertisement

Mangaluru: ಚಡ್ಡಿಗ್ಯಾಂಗ್‌ ಸಿಕ್ಕಿಬಿದ್ದರೂ ತಪ್ಪದ ಕಳ್ಳರ ಭೀತಿ!

01:45 PM Jul 28, 2024 | Team Udayavani |

ಮಹಾನಗರ: ನಗರದಲ್ಲಿ ಇತ್ತೀಚೆಗೆ ದರೋಡೆ, ಕಳ್ಳತನಗಳನ್ನು ನಡೆಸಿ ಆತಂಕ ಮೂಡಿಸಿದ್ದ “ಚಡ್ಡಿಗ್ಯಾಂಗ್‌’ನ  ಬಂಧನವಾಗಿದ್ದರೂ ಕಳ್ಳರ ಕುರಿತಾದ ಆತಂಕ ಪೂರ್ಣ ದೂರವಾಗಿಲ್ಲ. ಚಡ್ಡಿಗ್ಯಾಂಗ್‌ನ ನಾಲ್ವರು ಸದಸ್ಯರು ಹಾಗೂ ಇತರ ನಾಲ್ವರು ಕಳ್ಳರ ಬಂಧನವಾದ ಬಳಿಕವೂ ಎರಡು ಕಡೆ ಕಳವು ಯತ್ನ, ಒಂದು ಕಡೆ ಕಳವು ಪ್ರಕರಣ ನಡೆದಿದ್ದು ಅದನ್ನು ಭೇದಿಸುವುದು ಸಾಧ್ಯವಾಗಿಲ್ಲ.

Advertisement

ಮನೆ ಕಳವು ಪ್ರಕರಣ
ಬಿಜೈ ನ್ಯೂರೋಡ್‌ ಮನೆಯೊಂದರಲ್ಲಿ ಮನೆಯವರು ಇಲ್ಲದ ಸಮಯ ಕಳ್ಳತನ ನಡೆದಿತ್ತು. ಇದು ಜು. 14ರಂದು ಗೊತ್ತಾಗಿತ್ತು. ಪೊಲೀಸರ ಪ್ರಕಾರ ಇಲ್ಲಿನ ಕೃತ್ಯಕ್ಕೂ ಚಡ್ಡಿಗ್ಯಾಂಗ್‌ ಇತರ ಕೆಲವೆಡೆ ಕೃತ್ಯಕ್ಕೂ ಸಾಮ್ಯತೆ ಇರಲಿಲ್ಲ. ಈ ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ.

ಎರಡು ಕಡೆ ಕಳವು ಯತ್ನ
ಜು. 20ರ ತಡರಾತ್ರಿ ಪದವಿನಂಗಡಿ ಸಮೀಪದ ಮನೆಯೊಂದರಲ್ಲಿ ಮನೆಯವರು ಒಳಗೆ ಮಲಗಿದ್ದಾಗ ಕಳ್ಳರ ತಂಡ ಬಾಗಿಲು ಒಡೆಯಲು ಯತ್ನಿಸಿತ್ತು. ಅದೇ ದಿನ ಪದವಿನಂಗಡಿ ಪೆರ್ಲಗುರಿಯಲ್ಲಿ ದೇವಸ್ಥಾನದ ಪರಿಸರದಲ್ಲಿ ಕಳ್ಳರ ತಂಡ ಕಳವಿಗೆ ಹೊಂಚು ಹಾಕುತ್ತಿರುವುದನ್ನು ಸಾರ್ವಜನಿಕರು ನೋಡಿದ್ದರು.

ಉಳಾಯಿಬೆಟ್ಟು ಪ್ರಕರಣ: ಬಾಕಿ ಉಳಾಯಿಬೆಟ್ಟಿನ ಪೆರ್ಮಂಕಿಯಲ್ಲಿ ಉದ್ಯಮಿಯ ಮನೆಯಲ್ಲಿ ನಡೆದಿದ್ದ ದರೋಡೆ
ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆ ಕೃತ್ಯದಲ್ಲಿ ಮತ್ತಷ್ಟು ಮಂದಿ ಪಾಲ್ಗೊಂಡಿದ್ದರು ಎಂಬುದು
ತನಿಖೆ ವೇಳೆ ಗೊತ್ತಾಗಿತ್ತು. ಕನಿಷ್ಠ 5 ಮಂದಿ ಆರೋಪಿಗಳ ಬಂಧನ ಇನ್ನೂ ಬಾಕಿ ಇದೆ.

Advertisement

ಚಡ್ಡಿ ಗ್ಯಾಂಗ್‌ ಹೆಸರಲ್ಲಿ ಬೇರೆ ಕಳ್ಳರ ಕೃತ್ಯ?
ಚಡ್ಡಿಗ್ಯಾಂಗ್‌ನ ನಾಲ್ಕು ಮಂದಿಯನ್ನು ಬಂಧಿಸಿದಾಗ ಆ ಗ್ಯಾಂಗ್‌ನಲ್ಲಿ ಇನ್ನಷ್ಟು ಸದಸ್ಯರಿರುವ ಬಗ್ಗೆ ಗುಮಾನಿ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಚಡ್ಡಿಗ್ಯಾಂಗ್‌ ಕೋಡಿಕಲ್‌ನಲ್ಲಿ ನಡೆಸಿದ್ದ ಕೃತ್ಯದಲ್ಲಿ 5 ಮಂದಿ ಪಾಲ್ಗೊಂಡಿದ್ದು, ಸಿಸಿ ಕೆಮರಾ ದೃಶ್ಯದಲ್ಲಿ ಸೆರೆಯಾಗಿತ್ತು. ಆದರೆ ಅನಂತರ 5ನೇ ವ್ಯಕ್ತಿಯಾಗಲಿ, ಚಡ್ಡಿಗ್ಯಾಂಗ್‌ನ ಇತರ ಸದಸ್ಯರು ಅಥವಾ ಬೇರೊಂದು ತಂಡದ ಪತ್ತೆಯಾಗಿಲ್ಲ.

ಬಂಧಿತವಾಗಿರುವ ಚಡ್ಡಿಗ್ಯಾಂಗ್‌ನ ಇತರ ಸದಸ್ಯರು ಮತ್ತಷ್ಟು ಕೃತ್ಯಗಳನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆಯೇ ಅಥವಾ ಚಡ್ಡಿಗ್ಯಾಂಗ್‌ನ ಇನ್ನೊಂದು ತಂಡ ಕಳವು ಕೃತ್ಯಗಳನ್ನು ಮುಂದುವರಿಸುತ್ತಿದೆಯೇ? ಚಡ್ಡಿಗ್ಯಾಂಗ್‌ ಮೇಲೆ ಪೊಲೀಸರು, ಜನರು ಗಮನ ಕೇಂದ್ರೀಕರಿಸುತ್ತಿರುವ ಈ ಸಂದರ್ಭವನ್ನು ಬಳಸಿಕೊಂಡು ಇತರ ತಂಡಗಳು ಕಳವಿಗೆ ಯತ್ನಿಸುತ್ತಿವೆಯೇ ಎಂಬ ಸಂಶಯಗಳು ಕೂಡ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next