Advertisement

Mangaluru: ಈ ಬಾರಿ ಜನಾಕರ್ಷಣೆಯ ಕರಾವಳಿ ಉತ್ಸವಕ್ಕೆ ಒತ್ತು ನೀಡಿ: ಸಚಿವ ದಿನೇಶ್, ಖಾದರ್‌

12:56 AM Dec 14, 2024 | Team Udayavani |

ಮಂಗಳೂರು: ಈ ವರ್ಷ ನಡೆಯಲಿರುವ ಕರಾವಳಿ ಉತ್ಸವವನ್ನು ಜನಾಕರ್ಷಣೆಯ ಕಾರ್ಯಕ್ರಮವನ್ನಾಗಿ ಮಾಡಲು ಹೆಚ್ಚು ಒತ್ತು ನೀಡುವಂತೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.

Advertisement

ಅವರು ಕರಾವಳಿ ಉತ್ಸವ ಸಿದ್ಧತೆಗಳ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿ, ಕರಾವಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಸಾಂಸ್ಕೃತಿಕ ಕಲಾಪ್ರಕಾರಗಳು ಸೇರಿದಂತೆ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿರುವ ವಿವಿಧ ಭಾಷಾ ಅಕಾಡೆಮಿಗಳ ಸಂಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸ್ಪೀಕರ್‌ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಹಲವು ವರ್ಷಗಳ ಬಳಿಕ ಕರಾವಳಿ ಉತ್ಸವ ನಡೆಯುತ್ತಿರುವುದರಿಂದ ವಿವಿಧ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಆಕರ್ಷಣೀಯ ಕಾರ್ಯಕ್ರಮಗಳನ್ನು ನಡೆಸಬೇಕು. ಕರಾವಳಿ ಉತ್ಸವ ನಡೆಸಲು ಅಗತ್ಯ ಸಂಪನ್ಮೂಲಗಳನ್ನು ಸ್ಥಳೀಯವಾಗಿ ಕ್ರೋಢೀಕರಿಸಲು ಪ್ರಯತ್ನಿಸಬೇಕು. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನವನ್ನು ಮಂಜೂರು ಮಾಡಲು ಗಮನ ಹರಿಸುವುದಾಗಿ ತಿಳಿಸಿದರು. ಶಾಸಕ ಅಶೋಕ್‌ ಕುಮಾರ್‌ ರೈ ಇದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್‌ ಕೆ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್‌. ಆನಂದ್‌, ಅಪರ ಜಿಲ್ಲಾಧಿಕಾರಿ ಡಾ| ಜಿ. ಸಂತೋಷ್‌ ಕುಮಾರ್‌, ಮುಡಾ ಆಯುಕ್ತ ನೂರ್‌ಜಹಾನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next