Advertisement

Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ

01:17 PM Nov 19, 2024 | Team Udayavani |

ಮಹಾನಗರ: ರಾಜ್ಯದ 2ನೇ ಐಟಿ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ ಯಾಗಲು ಎಲ್ಲಾ ಅವಕಾಶಗಳಿವೆ. ಒಂದೊಮ್ಮೆ ದೇಶದಲ್ಲಿ ಬೆಂಗಳೂರು, ಪುಣೆ ಬಿಟ್ಟರೆ ಮಂಗಳೂರು ಐಟಿ ಕಂಪೆನಿ ಗಳ ಮೆಚ್ಚಿನ ತಾಣವಾಗಿ ಕೂಡಾ ಪರಿಗಣಿ ಸಲ್ಪಟ್ಟಿತ್ತು. ಜತೆಗೆ ಸರಕಾರ 2ನೇ ಹಂತದ ನಗರಗಳಲ್ಲಿ ಐಟಿ ಅಭಿವೃದ್ದಿಗೆ ಮಂಗಳೂರನ್ನು ಮೊದಲ ಆದ್ಯತೆಯಾಗಿ ಗುರುತಿಸಿದೆ. ಕೆಲವು ಕಂಪೆನಿಗಳು ಮಂಗಳೂರಿನಲ್ಲಿ ತನ್ನ ಕಾರ್ಯಕ್ಷೇತ್ರ ಹೊಂದಿದೆಯಾದರೂ, ಐಟಿ ಹಬ್‌ ಸ್ವರೂಪ ಪಡೆಯಲು ಮಂಗಳೂರಿಗೆ ಇನ್ನೂ ಸಾಧ್ಯವಾಗಿಲ್ಲ. ಸರಕಾರದ ನಿರ್ಲಕ್ಷ್ಯದಿಂದಾಗಿ ಐಟಿ ಕನಸು ಮಂಗಳೂರಿಗೆ ಕೈಗೂಡದ ಪರಿಸ್ಥಿತಿ!

Advertisement

ಪ್ರಸ್ತುತ ಐಟಿ ಉದ್ಯಮಗಳು ಬೆಂಗಳೂರಿ ನಲ್ಲಿ ಕೇಂದ್ರೀಕೃತವಾಗಿವೆ. ಮಂಗಳೂರಿನಲ್ಲಿ ಪ್ರಸಕ್ತ ದೊಡ್ಡಮಟ್ಟದ ಹಾಗೂ ಸಣ್ಣಗಾತ್ರಗಳ ಉದ್ಯಮಗಳು ಸೇರಿದಂತೆ ಒಟ್ಟು 250ಕ್ಕೂ ಅಧಿಕ ಕಂಪೆನಿಗಳಿವೆ. ಇನ್ಫೋಸಿಸ್‌, ಎಂಪಾಸಿಸ್‌, ಕಾಗ್ನಿಜೆಂಟ್‌ ಗ್ಲೋಬಲ್‌ ಸರ್ವಿಸಸ್‌, ದಿಯಾ ಸಿಸ್ಟಮ್ಸ್‌ ಸಹಿತ ಹಲವು ಕಂಪೆನಿಗಳಿವೆ. ಸುಮಾರು 17 ಸಾವಿರಕ್ಕೂ ಅಧಿಕ ಐಟಿ ಉದ್ಯೋಗಿಗಳಿದ್ದಾರೆ.

ರಾಜ್ಯದಲ್ಲಿ 2ನೇ ಹಂತದ ನಗರಗಳನ್ನು ಐಟಿ ಕೇಂದ್ರಗಳಾಗಿ ರೂಪಿಸಲಾಗುವುದು ಎಂಬುದಾಗಿ ಸುಮಾರು 10-15 ವರ್ಷ ಗಳಿಂದ ಸರಕಾರಗಳು ಹೇಳುತ್ತಲೇ ಬಂದಿವೆ. ಬಿಯಾಂಡ್‌ ಬೆಂಗಳೂರು ಹೇಳಿಕೆಗಳು ಆಗಾಗ ಕೇಳಿಬರುತ್ತಲೇ ಇದೆ. ಸಚಿವರು, ಅಧಿಕಾರಿಗಳಿಗೆ ಇದು ಅಭ್ಯಾಸವಾಗಿದೆ. ಆದರೆ ಇದು ಯಾವುದೂ ಐಟಿ ಕ್ಷೇತ್ರಕ್ಕೆ ಯೋಜನೆಗಳಾಗಿ ಪರಿವರ್ತಿತವಾಗಿಲ್ಲ.

ಮೂಲೆ ಸೇರಿದ ಐಟಿ ಪಾರ್ಕ್‌!
ಕರಾವಳಿಯಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆ ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಹು ವರ್ಷದ ಬೇಡಿಕೆಯಾಗಿರುವ ‘ಮಂಗಳೂರು ಐಟಿ ಪಾರ್ಕ್‌’ ನಿರ್ಮಾಣ ಮೂಲೆ ಸೇರಿದೆ. ಮಂಗಳೂರಿನ ದೇರೆಬೈಲ್‌ನಲ್ಲಿ ಕಿಯೋನಿಕ್ಸ್‌ ಸಂಸ್ಥೆಗೆ ಸೇರಿದ 4 ಎಕ್ರೆ ಜಮೀನಿನಲ್ಲಿ ಐಟಿ ಪಾರ್ಕ್‌ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್‌) ಸಂಸ್ಥೆಯು ಮುಂದಾಗಿತ್ತು. ಇದರಲ್ಲಿ ಶೇ.40ರಷ್ಟು ಪ್ರದೇಶವು ಐಟಿ ಕಾರ್ಯಸ್ಥಳವಾಗಿರಲಿದ್ದು, ಉಳಿದ ಶೇ.60ರಷ್ಟು ಸ್ಥಳವನ್ನು ವಾಣಿಜ್ಯ, ವಸತಿ ಹಾಗೂ ಸಮಾಜಕ್ಕೆ ಆವಶ್ಯ ಮೂಲ ಸೌಕರ್ಯಗಳಿಗಾಗಿ ಮೀಸಲಿಡಲಾಗುತ್ತದೆ ಎಂದು ಹೇಳಲಾಗಿತ್ತು. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಹಲವು ಬಾರಿ ಘೋಷಣೆಯೂ ಆಗಿತ್ತು. ಆದರೆ ಯಾವುದೂ ಇಲ್ಲಿಯವರೆಗೆ ಕೈಗೂಡಿಲ್ಲ!

ಐಟಿ ಅವಲೋಕನಕ್ಕೆ ಚಿಂತನೆ
‘ಮಂಗಳೂರಿಗೆ ಐಟಿ ಕಂಪೆನಿಯನ್ನು ಆಕರ್ಷಿಸಬೇಕಾಗಿದೆ. ಅದಕ್ಕಾಗಿ ಮೂಲ ಸೌಕರ್ಯ ಒದಗಿಸಿ, ಐಟಿ ಕಂಪೆನಿಗಳನ್ನು ಸೆಳೆಯುವ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಐಟಿ ಹಬ್‌ ಆಗಿ ಹೊರಹೊಮ್ಮಲು ಇರುವ ಕೊರತೆಗಳೇನು? ಅವುಗಳನ್ನು ನಿವಾರಿಸುವ ಬಗೆ ಹೇಗೆ? ಎಂಬ ಬಗ್ಗೆ ನಿಖರ ತಿಳುವಳಿಕೆಯೊಂದಿಗೆ ಹೆಜ್ಜೆ ಹಾಕಬೇಕು. ಮುಡಿಪುವಿನ ಇನ್ಫೋಸಿಸ್‌ ಕೇಂದ್ರದಲ್ಲಿ 10 ಸಾವಿರ ಉದ್ಯೋಗಿಗಳು ಬಳಸುವಷ್ಟು ಸೌಕರ್ಯವಿದ್ದರೂ 4 ಸಾವಿರ ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಲ್ಲಿಗೆ ವಿಶೇಷ ಆದ್ಯತೆ ನೀಡುವ ಕೆಲಸವಾಗಬೇಕು’ ಎಂಬಿತ್ಯಾದಿ ವಿಚಾರದ ಬಗ್ಗೆ ಅವಲೋಕನ ನಡೆಸುವ ಅಗತ್ಯತೆ ಇದೆ’ ಎಂದು ಇತ್ತೀಚೆಗೆ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ. ಇದರ ಫಾಲೊಅಪ್‌ ಹಾಗೂ ಅನುಷ್ಠಾನವೂ ಸಾಧ್ಯವಾದರೆ ಐಟಿ ಕ್ಷೇತ್ರದಲ್ಲಿ ಆಶಾಭಾವ ಮೂಡಲು ಸಾಧ್ಯ.

Advertisement

ಮಂಗಳೂರು ‘ಐಟಿ ಸಿಟಿ’ಯಾಗಲು ಹಲವು ಅವಕಾಶ
ರೈಲ್ವೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸುಸಜ್ಜಿತ ರಾಷ್ಟ್ರೀ ಯ ಹೆದ್ದಾರಿಗಳು, ಉತ್ತಮ ಸಂವಹನ ಸಂಪರ್ಕ, ನವಮಂಗಳೂರು ಬಂದರು ಸೇರಿದಂತೆ ಮೂಲಭೂತ ಸೌಲಭ್ಯಗಳು ಮಂಗಳೂರಿಗೆ ಇವೆ. ಬೆಂಗಳೂರಿಗೆ ಹೋಲಿಸಿದರೆ ಜಾಗದ ಮೌಲ್ಯವು ಸುಮಾರು ಶೇ.20ರಷ್ಟು ಕಡಿಮೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ 25ಕ್ಕೂ ಅಧಿಕ ಎಂಜಿನಿಯರಿಂಗ್‌ ಕಾಲೇಜಿನಿಂದ ವರ್ಷಕ್ಕೆ 12 ಸಾವಿರ ಎಂಜಿನಿಯರ್‌ಗಳು, ಸುಮಾರು 150ಕ್ಕೂ ಹೆಚ್ಚು ಕಾಲೇಜಿನಿಂದ 40 ಸಾವಿರಕ್ಕೂ ಹೆಚ್ಚು ಪದವೀಧರರು ಪ್ರತೀ ವರ್ಷ ಹೊರಬರುತ್ತಾರೆ. ಕಂಪೆನಿಗಳಿದ್ದರೆ ಇವರಿಗೆ ಉದ್ಯೋಗ ಸುಲಭ. 50ಕ್ಕೂ ಹೆಚ್ಚು ಇನ್‌ಕ್ಯಮಂಗಳೂರಿನ ಐಟಿ ಆದ್ಯತೆ ಮರೆತ ಸರಕಾರ!
ಬೇಷನ್‌ ಕೇಂದ್ರಗಳು ಇಲ್ಲಿವೆ. 250ಕ್ಕೂ ಹೆಚ್ಚು ಐಟಿ ಕಂಪೆನಿಗಳು ಇಲ್ಲಿ ಕಚೇರಿ ಹೊಂದಿವೆ. ಇಲ್ಲಿನ ಐಟಿ ಕಂಪೆನಿಗಳು ವರ್ಷದಲ್ಲಿ ಸುಮಾರು 5 ಸಾವಿರ ಕೋ.ರೂ. ವಹಿವಾಟು ನಡೆಯುತ್ತಿದೆ.

ಬೆಂಗಳೂರಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಮಾನವ ಸಂಪನ್ಮೂಲ ವೆಚ್ಚ ಕಡಿಮೆ. ಅತ್ಯಾಧುನಿಕ ಟೆಲಿಕಾಂ ಸೌಲಭ್ಯಗಳು, ಡಾಟಾ ಕಮ್ಯೂನಿಕೇಶನ್‌ ಸೌಲಭ್ಯಗಳಿವೆ. ಇತರ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಕಡಿಮೆ ನಿರ್ವಹಣಾ ವೆಚ್ಚ, ಕಡಿಮೆ ಹೂಡಿಕೆ ವೆಚ್ಚ ಇದೆ. ಐಟಿ ಉದ್ಯಮಗಳಿಗೆ ಉತ್ತೇಜನ ನೀಡಲು ಎಸ್‌ಟಿಪಿಐ ಕೇಂದ್ರ ಕಾರ್ಯಾಚರಿಸುತ್ತಿದೆ.

ಮಂಗಳೂರಿನ ಐಟಿ ವಲಯದ ನಿರೀಕ್ಷೆಯೇನು?
- ಮಂಗಳೂರು ಕೇಂದ್ರಿತವಾಗಿ ಐಟಿ ಕಂಪೆನಿಗೆ ಸರಕಾರದ ಸಬ್ಸಿಡಿ ಅಗತ್ಯ
- ಸರಕಾರದ ನೇತೃತ್ವದಲ್ಲಿಯೇ ಐಟಿ ಪಾರ್ಕ್‌ ನಿರ್ಮಿಸಿ ಬೆಂಬಲ
- ದೊಡ್ಡ ಐಟಿ ಕಂಪೆನಿಗಳನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಸರಕಾರದ ಪ್ರೋತ್ಸಾಹ
- ಬಿಯಾಂಡ್‌ ಬೆಂಗಳೂರು ಪರಿಕಲ್ಪನೆಗೆ ವಿಶೇಷ ಆದ್ಯತೆ ನೀಡಬೇಕು.
- ಐಟಿ ಪಾಲಿಸಿ ಅನುಷ್ಠಾನಿಸಿ ಮಂಗಳೂರು ಕೇಂದ್ರಿತವಾಗಿರುವ ಕಂಪೆನಿಗಳಿಗೆ ರಿಯಾಯಿತಿ
- ಐಟಿ ನೋಡಲ್‌ ಆಫೀಸರ್‌ ಕಚೇರಿ ಮಂಗಳೂರಿನಲ್ಲಿ ತೆರೆಯಬೇಕು
- ಸ್ಟಾರ್ಟ್‌ಅಪ್‌ ಕುರಿತಂತೆ ಯುವ ಜನತೆಗೆ ಅರಿವು ಹಾಗೂ ನಿಯಮ ಗಳ ಸರಳೀಕರಣ ಮಾಡಬೇಕು

ಐಟಿ ಕ್ಷೇತ್ರದ ದೊಡ್ಡ ಉದ್ದಿಮೆಗಳಲ್ಲಿ ಕೆಲಸ ಮಾಡುವ ಶೇ.95ರಷ್ಟು ಮಂದಿಗೆ ಕೆಲವೊಂದು ಆವಶ್ಯಕತೆ ಪೂರೈಸಿದರೆ ಮಂಗಳೂರಿನಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ. ಖಾಸಗಿ ಐಟಿ ಕಂಪೆನಿಗಳನ್ನು ಈಗಾಗಲೇ ಮಂಗಳೂರಿನಲ್ಲಿ ಸ್ಥಾಪನೆಯಾಗುತ್ತಿದೆ. ಆದರೆ, ಸರಕಾರದ ನೆಲೆಯಲ್ಲಿ ಐಟಿ ಕ್ಷೇತ್ರಕ್ಕೆ ವಿಶೇಷ ಆದ್ಯತೆ ಸಿಕ್ಕಿಲ್ಲ. ಹೀಗಾಗಿ ಐಟಿ ಪಾರ್ಕ್‌, ನೋಟಲ್‌ ಆಫೀಸರ್‌ ಕಚೇರಿ ಮಂಗಳೂರಿನಲ್ಲಿ ಸ್ಥಾಪಿಸುವ ಮೂಲಕ ಬೆಂಬಲ ನೀಡಬೇಕು.
-ಆಶಿತ್‌ ಹೆಗ್ಡೆ, ನಿರ್ದೇಶಕರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ಮಂಗಳೂರು ಕೇಂದ್ರಿತವಾಗಿ ಐಟಿ ಕ್ಷೇತ್ರಕ್ಕೆ ಖಾಸಗಿ ಕಂಪೆನಿ ಆದಿಯಾಗಿ ಬಹಳಷ್ಟು ಅವಕಾಶಗಳು ಈಗಾಗಲೇ ತೆರೆದುಕೊಂಡಿದೆ. ಇನ್ನೂ ಹೆಚ್ಚಿನ ಶಕ್ತಿ ಐಟಿ ಕ್ಷೇತ್ರಕ್ಕೆ ದೊರೆಯಬೇಕಾದರೆ ಸರಕಾರದ ಪ್ರೋತ್ಸಾಹ ಅತೀ ಅಗತ್ಯ. ಐಟಿ ಪಾರ್ಕ್‌ ಆರಂಭದ ಬಗ್ಗೆ ಚಿಂತನೆ ನಡೆಯಿತಾದರೂ ತಾಂತ್ರಿಕ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ಭೂಮಿ ಲಭ್ಯತೆ, ಮೂಲಸೌಕರ್ಯ ವ್ಯವಸ್ಥೆ ಸುಧಾರಣೆಯನ್ನು ಸರಕಾರ ನಿರ್ವಹಿಸಿದರೆ ಐಟಿ ಕ್ಷೇತ್ರದ ಅಭಿವೃದ್ದಿ ಸುಲಭವಾಗಲಿದೆ. ಇಂತಹ ಸಾಧ್ಯತೆಗಳ ಬಗ್ಗೆ ಸರಕಾರ ಹೆಚ್ಚಿನ ಗಮನ ನೀಡಬೇಕಿದೆ.
– ಆನಂದ್‌ ಜಿ. ಪೈ, ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next