ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ತಣ್ಣೀರುಬಾವಿ ಬೀಚ್‌ನಲ್ಲಿ ಡಿ. 28 ಮತ್ತು 29ರಂದು ಬೀಚ್ ಉತ್ಸವ ನಡೆಯಲಿದೆ.
ಸ್ಥಳೀಯ ಕಲಾವಿದರ ಕಲಾ ಪ್ರದರ್ಶನದೊಂದಿಗೆ ಉತ್ಸವ ಆರಂಭವಾಗಲಿದೆ.
ಡಿ. 28ರಂದು ಸಂಜೆ 6.30ಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉತ್ಸವ ಉದ್ಘಾಟಿಸುವರು. 7.30ರಿಂದ ಮಣಿಕಾಂತ್ ಕದ್ರಿ ಅವರಿಂದ ಸಂಗೀತ ಕಾರ್ಯಕ್ರಮವಿದ್ದು, ವಿವಿಧ ರೀತಿಯ ಜಲಸಾಹಸ ಕ್ರೀಡೆಗಳು ಹಾಗೂ ಆಹಾರ ಮಳಿಗೆಗಳು ಇರಲಿವೆ. ಡಿ. 29ರಂದು ಸಂಜೆ 7.30ರಿಂದ ರಘು ದೀಕ್ಷಿತ್ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾತನಾಡಿ, ಉತ್ಸವದ ಹಿನ್ನೆಲೆಯಲ್ಲಿ ತಣ್ಣೀರುಬಾವಿ ರಸ್ತೆಯುದ್ದಕ್ಕೂ ಘನವಾಹನಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತಿಲ್ಲ. ಬೀಚ್‌ನ ದಾರಿಯಲ್ಲಿ ಐದಾರು ಕಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಉತ್ಸವದ ದಿನಗಳಲ್ಲಿ ಫೆರ್ರಿ ಸೇವೆ ಹೆಚ್ಚಿಸುವುದಾಗಿ ತಿಳಿಸಿದರು.
ಮುಡಾ ಆಯುಕ್ತೆ ನೂರ್ ಜಹರಾ ಖಾನಂ, ವಾರ್ತಾಧಿಕಾರಿ ಖಾದರ್ ಷಾ, ಬೀಚ್ ಉತ್ಸವದ ಪ್ರಾಯೋ ಜಕರಾದ ರೋಹನ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಉಪಸ್ಥಿತರಿದ್ದರು.