ಪಣಂಬೂರು/ಮಲ್ಪೆ: ಕ್ರಿಸ್ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಪಣಂಬೂರು, ತಣ್ಣೀರುಬಾವಿ ಬೀಚ್, ಮಲ್ಪೆಯ ಬೀಚ್ – ಸೀವಾಕ್‌ನಲ್ಲಿ ಜನಸಂದಣಿ ಕಂಡು ಬಂದಿದೆ.
ಪಣಂಬೂರಿನಲ್ಲಿ ತೇಲುವ ಸೇತುವೆ, ಬೋಟಿಂಗ್, ಟಾಂಗಾ, ಒಂಟೆ ಸವಾರಿ, ಕುದುರೆ ಸವಾರಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡು ಕುಟುಂಬ ಸಹಿತವಾಗಿ ಕುಳಿತು ಸಂಭ್ರಮಿಸುತ್ತಿರುವುದು ಕಂಡು ಬಂತು. ಮಕ್ಕಳು ಗಾಳಿಪಟ ಹಾರಾಟದಲ್ಲಿ ಮಗ್ನರಾದರೆ, ಯುವಕ-ಯುವತಿಯರು ನೀರಾಟದಲ್ಲಿ ಸಂಭ್ರಮಿಸಿದರು.
ಸುರಕ್ಷಾ ಕ್ರಮ: ಪ್ರವಾಸಿಗರ ಆಗಮನ ಹೆಚ್ಚುತ್ತಿರುವಂತೆಯೇ ಗೃಹರಕ್ಷಕ ದಳ, ಬೀಚ್ ಮ್ಯಾನೇಜ್ ಮೆಂಟ್‌ನ ಕಾವಲು ಸಿಬಂದಿ ಸುರಕ್ಷೆಗೆ ಆದ್ಯತೆ ನೀಡಿದ್ದಾರೆ. ಹೆಚ್ಚಿನ ಆಳ ಪ್ರದೇಶದಲ್ಲಿ ಈಜದಂತೆ ಎಚ್ಚರಿಕೆ ನೀಡಿ ದಡಕ್ಕೆ ಕಳಿಸುತ್ತಿರುವುದು ಕಂಡು ಬಂದಿತು.
ಮಲ್ಪೆ ಬೀಚ್: ಮಲ್ಪೆ ಬೀಚ್‌ಗೆ ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಹೊರಜಿಲ್ಲೆಯ ಪ್ರವಾಸಿಗರು ಲಗ್ಗೆ ಇಡುತ್ತಿದ್ದು ಹೊರ ರಾಜ್ಯದಿಂದ ನೂರಾರು ವಾಹನಗಳು ಮಲ್ಪೆ ಕಡೆಗೆ ಆಗಮಿಸುತ್ತಿದೆ. ಕಳೆದ ಒಂದು ತಿಂಗಳಿನಿಂದ ಶಾಲಾ ಮಕ್ಕಳ ಪ್ರವಾಸದ ಬಸ್‌ಗಳು ಆಗಮಿಸುತ್ತಿದ್ದು ಇದೀಗ ಸಂಖ್ಯೆ ಇನ್ನಷ್ಟು ಹೆಚ್ಚಳಗೊಂಡಿದೆ. ಎಲ್ಲಡೆ ಮಕ್ಕಳ ಕಲರವ ಕೇಳಿ ಬರುತ್ತಿದೆ. ಇತ್ತ ಸೈಂಟ್‌ಮೇರಿಸ್ ದ್ವೀಪಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಬೀಚ್‌ನಲ್ಲಿ ವಾಹನಗಳ ಸಂಖ್ಯೆ ಹೆಚ್ಚಿ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ.
ಬಹುತೇಕ ಎಲ್ಲ ಹೊಟೇಲ್, ಲಾಡ್ಜ್ ಗಳು, ಹೋಂಸ್ಟೇಗಳು ತುಂಬಿದ್ದು, ಬಾಡಿಗೆ ದರ ಕೂಡ ದುಪ್ಪಟ್ಟಾಗಿದೆ. ವಾರಗಳ ಹಿಂದೆಯೇ ಕೊಠಡಿಗಳು ಬುಕ್ಕಿಂಗ್ ಆಗಿರುವ ಕಾರಣ ನೇರವಾಗಿ ಬರುವ ಪ್ರವಾಸಿಗರು ವಾಸ್ತವ್ಯಕ್ಕೆ ಜಾಗ ಸಿಗದೇ ಪರದಾಡುತ್ತಿದ್ದಾರೆ.