Advertisement

ಮಂಗಳೂರು ದಸರಾ: ಸಿದ್ಧವಾಗಲಿದೆ ಮಹಾನಗರ

10:44 AM Jul 25, 2022 | Team Udayavani |

ಮಹಾನಗರ: ಕರಾವಳಿಯೇ ಸಂಭ್ರಮ ಪಡುವ, ಜಗತ್ತಿನ ಕಣ್ಮನ ಸೆಳೆಯುವ ಅತ್ಯಾಕರ್ಷಕ ಹಾಗೂ ಲಕ್ಷಾಂತರ ಜನ ಸಮ್ಮಿಲನದ “ಮಂಗಳೂರು ದಸರಾ’ವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

Advertisement

ಮೈಸೂರು ದಸರಾವನ್ನು ಈ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಇತ್ತೀಚೆಗೆ ತೀರ್ಮಾನಿಸಿದ ಬೆನ್ನಿಗೆ, ಇದೀಗ ಮಂಗಳೂರು ದಸರಾವನ್ನು ಕೂಡ ಅದ್ದೂರಿ ಆಚರಣೆಗೆ ಕೇಂದ್ರದ ಮಾಜಿ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಮಿತಿ ನಿರ್ಧರಿಸಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ನೆಪದಿಂದ ಸಾಂಕೇತಿಕವಾಗಿ ಆಚರಣೆಯಾಗುತ್ತಿದ್ದ ದಸರಾವನ್ನು ಈ ಬಾರಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಹೊಸ ಚೇತರಿಕೆ ಹಾಗೂ ಲಕ್ಷಾಂತರ ಮಂದಿಗೆ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಲಿದೆ.

ಸೆಪ್ಟಂಬರ್‌ ತಿಂಗಳಿನಲ್ಲಿ 10 ದಿನಗಳ ಪರ್ಯಂತ ವಿಶೇಷ ಹಾಗೂ ವಿಭಿನ್ನ ಕಾರ್ಯ ಕಲಾಪಗಳ ಮೂಲಕವಾಗಿ ದಸರಾ ಸಡಗರಕ್ಕೆ ಮಂಗಳೂರು ರೆಡಿಯಾಗಲಿದೆ. ಆಕರ್ಷಕ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಕುದ್ರೋಳಿ ಹಾಗೂ ಮಂಗಳೂರು ಜಗಮಗಿಸಲಿದೆ.

“ಚೌತಿಯಂದು ಮೂರ್ತಿ ರಚನೆ’

Advertisement

“ನವರಾತ್ರಿ ವೇಳೆಯಲ್ಲಿ ಪೂಜಿಸಲ್ಪಡುವ ಶ್ರೀ ಶಾರದಾ ಮಾತೆ ಹಾಗೂ ನವದು ರ್ಗೆಯರ ಮೂರ್ತಿಗಳ ರಚನೆ ಕೆಲಸಗಳು ಗಣೇಶೋತ್ಸವ ದಿನದಂದು ಮುಹೂರ್ತ ಕಾಣಲಿದೆ.

ಜತೆಗೆ ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಕಲಾತ್ಮಕವಾಗಿ ವಿನ್ಯಾಸದ ಸ್ವರ್ಣರೂಪದ ಕಲಾ ಮಂಟಪ ತಯಾರಿಯೂ ನಡೆಯಲಿದೆ’ ಎನ್ನುತ್ತಾರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕಾರ್ಯದರ್ಶಿ ಮಾಧವ ಸುವರ್ಣ.

“ಈ ಬಾರಿ ವರ್ಣಮಯ ದಸರಾ ಮೆರವಣಿಗೆ’

ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಶ್ರೀ ದೇವಿಯನ್ನು ಅಂಬಾರಿಯ ಮೇಲೆ ಹೊತ್ತು ಮೆರವಣಿಗೆಯಿಂದ ಒಯ್ದರೆ, ಮಂಗಳೂರಿನ ದಸರಾದಲ್ಲಿ ಶಾರದಾಂಬೆಯ ಉತ್ಸವ ಮೂರ್ತಿಯೊಂದಿಗೆ ನವ ದುರ್ಗೆ ಯರು, ಗಣಪತಿ ವಿಗ್ರಹವನ್ನು ವಾಹನದ ಮೂಲಕ ಶೋಭಾಯಾತ್ರೆ ನಡೆಸಲಾಗುತ್ತದೆ. ಎರಡು ವರ್ಷದಿಂದ ಶೋಭಾಯಾತ್ರೆ ಆಗಿರಲಿಲ್ಲ. ಈ ಬಾರಿ ವರ್ಣಮಯ ದಸರಾ ಮೆರವಣಿಗೆಯ ಸಂಕಲ್ಪವಿದೆ. ಲಕ್ಷಾಂತರ ಜನಸಾಗರ ಸೇರುವ ನಿರೀಕ್ಷೆಯೂ ಇದೆ’ ಎನ್ನುತ್ತಾರೆ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌.

ಹುಲಿ ಕುಣಿತದ ಸೊಬಗು-ಬೆಳಕಿನ ಶೃಂಗಾರ!

ಸಾಂಪ್ರದಾಯಿಕ ಆಚರಣೆಗಳ ಮೂಲಕ ಜಗತ್ತಿನ ಕಣ್ಮನ ಸೆಳೆದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿಯೂ ಈ ಬಾರಿ ದಸರಾ ಸಡಗರ ಮೇಳೈಸಲಿದೆ. ಬಹುಭಕ್ತರ ಸಮ್ಮಿಲನಕ್ಕೆ ಕಾರಣವಾಗುವ ಮಾದರಿಯಲ್ಲಿ ಎಲ್ಲ ಕ್ಷೇತ್ರಗಳ ದಸರಾ ಆಚರಣೆಯನ್ನು ವೈಭವದಿಂದ ಆಚರಿಸಲು ಈಗಾಗಲೇ ಪ್ರಾರಂಭಿಕ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಶೃಂಗಾರಗೊಳ್ಳುವ ಮಂಗಳೂರು ನಗರ, ವಿದ್ಯುತ್‌ ದೀಪಾಲಂಕಾರ, ನಾಲ್ಕು ದಿಕ್ಕುಗಳಿಂದಲೂ ಕೇಳುವ ಹುಲಿ ಕುಣಿತದ ತಾಸೆಯ ಶಬ್ದವು ಉತ್ಸವದುದ್ದಕ್ಕೂ ನಗರವನ್ನು ಹಬ್ಬದ ಮನೆಯನ್ನಾಗಿಸಲಿದೆ.

“ಅದ್ದೂರಿ ದಸರಾ ಆಚರಣೆ’: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಸಂಭ್ರಮವನ್ನು ಮಂಗಳೂರು ದಸರಾ ಸ್ವರೂಪದಲ್ಲಿ ಆಚರಿಸಲಾಗುತ್ತದೆ. ಕಳೆದ 2 ವರ್ಷ ಕೊರೊನಾ ಕಾರಣದಿಂದ ವಿಜೃಂಭಣೆಯಿಂದ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಬಹು ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸ್ಥಳೀಯ ಆರ್ಥಿಕತೆಗೂ ಹುರುಪು ದೊರೆಯಲು ಸಾಧ್ಯ. – ಎಚ್‌.ಎಸ್‌.ಸಾಯಿರಾಂ, ಅಧ್ಯಕ್ಷರು, ಆಡಳಿತ ಸಮಿತಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next