Advertisement

Mangaluru; ಸಿಸಿಬಿ ಪೊಲೀಸರಿಂದ ಕುಖ್ಯಾತ ಸರಗಳ್ಳ ಡಾರ್ಲಿಂಗ್ ಚಂದ್ರ ಅರೆಸ್ಟ್

08:36 PM Nov 04, 2023 | Team Udayavani |

ಮಂಗಳೂರು:  ಸಿಸಿಬಿ ಪೊಲೀಸರು ಕುಖ್ಯಾತ ಸರಗಳ್ಳನನ್ನು ಶನಿವಾರ(ನ 4)ರಂದು ಬಂಧಿಸಿ 2,41,000 ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತ ಆರೋಪಿ ಚಂದ್ರಶೇಖರ ಅಲಿಯಾಸ್ ಡಾರ್ಲಿಂಗ್ ಚಂದ್ರ(29) ಎಂಬಾತನಾಗಿದ್ದಾನೆ. ಈತ ರಾಮನಗರ ಜಿಲ್ಲೆಯ ಬಿಡದಿಯ ಕಣಮಿನಿಕೆ ಗೇಟ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಮೇಲೆ ಈ ಹಿಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆ, ಕುಂಬ್ಳಗೋಡು, ಬಿಡದಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ ಪೇಟೆ ಹಾಗೂ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಕೊಲೆ, ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣಗಳು ದಾಖಲಾಗಿವೆ.

ಅಕ್ಟೋಬರ್ 21 ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಚರ್ಚ್ ಮೈನ್ ರೋಡ್ ನಲ್ಲಿ ಬೆಳಗಿನ ಜಾವ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದಾಗ ಇಬ್ಬರು ಅಪರಿಚಿತ ಯುವಕರು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಸುಲಿಗೆ ಮಾಡಿದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಪತ್ತೆಯ ಬಗ್ಗೆ ಮಂಗಳೂರು ಸಿಸಿಬಿ ಘಟಕದಿಂದ ವಿಶೇಷ ತಂಡವನ್ನು ರಚಿಸಿ ಈ ದಿನ ಆರೋಪಿಯನ್ನು ದಸ್ತಗಿರಿ ಮಾಡಿ ಲಕ್ಷಾಂತರ ರೂ ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಮಂಗಳೂರು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಧ್ಯಾಹ್ನ ಬಂಗ್ರ ಕೂಳೂರು ಬಳಿಯಿಂದ ಬಂಧಿಸಿದ್ದಾರೆ. ಸುಲಿಗೆ ಮಾಡಿದ್ದ 21.300 ಗ್ರಾಂ ತೂಕದ ತುಂಡಾದ ಚಿನ್ನದ ಕರಿಮಣಿ ಸರವನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ಮತ್ತು ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Advertisement

ಕಾರ್ಯಾಚರಣೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬಂದಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next