ಮಂಗಳೂರು: ಕರ್ತವ್ಯನಿರತ ಪೊಲೀಸರ ಕೊಲೆಗೆ ಯತ್ನಿಸಿದ ಘಟನೆ ಅರ್ಕುಲ ಗ್ರಾಮದ ತುಪ್ಪೆಕಲ್ಲು ಎಂಬಲ್ಲಿ ಸಂಭವಿಸಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಮಲ್ಲಿಕಾರ್ಜುನ ಅಂಗಡಿ ಮತ್ತು ಪ್ರದೀಪ್ ನಾಗನಗೌಡ ಅವರು ಜ.19ರಂದು ರಾತ್ರಿ ಗಸ್ತು ಕರ್ತವ್ಯಕ್ಕೆಂದು ತೆರಳಿದ್ದರು.
ಮುಂಜಾವ 2 ಗಂಟೆಗೆ ತುಪ್ಪೆಕಲ್ಲಿನ ಕಾಂಕ್ರೀಟ್ ರಸ್ತೆ ಬಳಿ ತಲುಪಿದಾಗ ಅಲ್ಲಿ ಕಾರಿನ ಬಳಿ ಇಬ್ಬರು ಅಪರಿಚಿತರು ನಿಂತಿದ್ದರು. ಕಾರಿನೊಳಗಡೆ ಮೂವರಿದ್ದರು. ಅವರನ್ನು ಪ್ರಶ್ನಿಸಿದಾಗ ಏಕಾಏಕಿ ಅಲ್ಲಿದ್ದ ಕಲ್ಲುಗಳನ್ನು ಎಸೆದರು. ಅಲ್ಲದೆ ಕಾರನ್ನು ಪೊಲೀಸರ ಮೇಲೆ ಹಾಯಿಸಲು ಯತ್ನಿಸಿದರು. ಪೊಲೀಸರು ಪಕ್ಕಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಕೊಲೆಗೆ ಯತ್ನಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.