Advertisement

ಟಿಪ್ಪರ್‌ ಚಾಲಕನ ಕೊಲೆ ಪ್ರಕರಣ: ಆರೋಪ ಸಾಬೀತು

11:11 PM Oct 29, 2022 | Team Udayavani |

ಮಂಗಳೂರು : ಟಿಪ್ಪರ್‌ ಚಾಲಕರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪವು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಯನ್ನು ದೋಷಿ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ಮೊಡಂತ್ಯಡ್ಕ ನ್ಯಾಯತರ್ಪು ಗ್ರಾಮದ ದಿನೇಶ್‌ (32) ಪ್ರಕರಣದ ಆರೋಪಿ. ದಿನೇಶ್‌ ಗುರವಾಯನಕೆರೆಯ ಕುವೆಟ್ಟುಗ್ರಾಮ ಶಿವಾಜಿನಗರದ ಪ್ರದೀಪ್‌ (36) ಅವರನ್ನು ಕೊಲೆಗೈದಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿವರ
ಆರೋಪಿ ದಿನೇಶ್‌, ಹರೀಶ್‌ ಮತ್ತು ಕೊಲೆಯಾದ ಪ್ರದೀಪ್‌ ಒಂದೇ ಸಂಸ್ಥೆಯಲ್ಲಿ ಟಿಪ್ಪರ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. 2017ರ ನ. 24ರಂದು ಹರೀಶ್‌ ಮತ್ತು ಪ್ರದೀಪ್‌ ಜತೆಯಲ್ಲಿದ್ದಾಗ ಹರೀಶನಿಗೆ ದಿನೇಶ್‌ ಕರೆ ಮಾಡಿ ಕೆಲಸದ ವಿಚಾರದಲ್ಲಿ ಬೈದಿದ್ದ. ಹರೀಶ್‌ ಮೊಬೈಲ್‌ನ ಸ್ಪೀಕರ್‌ ಆನ್‌ ಮಾಡಿ ಅದನ್ನು ತನ್ನ ಪಕ್ಕದಲ್ಲಿದ್ದ ಪ್ರದೀಪ್‌ಗ್ೂ ಕೇಳಿಸಿದ್ದರು. ಪ್ರದೀಪ್‌ ಅವರು ದಿನೇಶನಲ್ಲಿ “ಯಾಕೆ ಬೈಯುತ್ತಿರುವೆ?’

ಎಂಬುದಾಗಿ ಪ್ರಶ್ನಿಸಿದ್ದರು. ಆಗ ದಿನೇಶ್‌ “ನಿನಗೆ ಗತಿ ಕಾಣಿಸುತ್ತೇನೆ’ ಎಂದಿದ್ದ. ಅಂದು ಮಧ್ಯಾಹ್ನ 1.30ರ ವೇಳೆಗೆ ಹರೀಶ ಮತ್ತು ಪ್ರದೀಪ್‌ ಕಳಿಯಾ ಗ್ರಾಮದ ರೇಶೆ¾ ರೋಡ್‌ ಬಳಿ ರಿಕ್ಷಾದಲ್ಲಿದ್ದಾಗ ಅಲ್ಲಿಗೆ ಟಿಪ್ಪರ್‌ನಲ್ಲಿ ಬಂದಿದ್ದ ದಿನೇಶ, ಪ್ರದೀಪ್‌ ಅವರನ್ನು ಕರೆದು ಗಲಾಟೆ ಆರಂಭಿಸಿದ್ದ. ಬಳಿಕ ದಿನೇಶ್‌ ತನ್ನ ಟಿಪ್ಪರ್‌ನಲ್ಲಿದ್ದ ಲಿವರ್‌ ರಾಡ್‌ನ‌ಲ್ಲಿ ಪ್ರದೀಪ್‌ ಅವರ ತಲೆಗೆ ಹೊಡೆದಿದ್ದ. ಗಂಭೀರ ಗಾಯಗೊಂಡಿದ್ದ ಪ್ರದೀಪ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ಪ್ರದೀಪ್‌ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರು.

ಅ. 31ಕ್ಕೆ ಶಿಕ್ಷೆಯ ಪ್ರಮಾಣ ಪ್ರಕಟ
ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 25 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿತ್ತು. ವಿಚಾರಣೆ ನಡೆಸಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ಅ. 29ರಂದು ಆರೋಪಿ ದಿನೇಶ್‌ ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣ ಪ್ರಕಟ ದಿನಾಂಕವನ್ನು ಅ. 31ಕ್ಕೆ ನಿಗದಿಗೊಳಿಸಿದ್ದಾರೆ. ಈ ಹಿಂದೆ ಸಾರ್ವಜನಿಕ ಅಭಿಯೋಜಕರಾಗಿದ್ದ ಶೇಖರ ಶೆಟ್ಟಿ ಅವರು ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಬಳಿಕ ಸರಕಾರಿ ಅಭಿಯೋಜಕಿ ಜುಡಿತ್‌ ಒ.ಎಂ. ಕ್ರಾಸ್ತ ಅವರು ವಾದ ಮಂಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next