ಮಹಾನಗರ : ಜಿಲ್ಲೆಗೆ ಸಂಬಂಧಿಸಿದಂತೆ ಹತ್ತಾರು ಸಮಸ್ಯೆಗಳು ಜಿಲ್ಲೆಯ ಜನತೆಯನ್ನು ಬಾಧಿಸುತ್ತಿದ್ದರೂ ಎರಡು ಅವಧಿಗಳಲ್ಲಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಅವರು ಎಳ್ಳಷ್ಟೂ ಕಾಳಜಿ ತೋರದೆ ಬೇಜವಾಬ್ದಾರಿಯಿಂದ ವರ್ತಿ ಸುತ್ತಿದ್ದಾರೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲೆಯ ಹಿರಿಯ ಮುಖಂಡ ಕೆ.ಆರ್. ಶ್ರೀಯಾನ್ ಟೀಕಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು ಅವರ ಕಾರ್ಯನಿರ್ವಹಣೆಯನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಡೆದ ಪ್ರತಿಭಟನ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಪಕ್ಷವು ರಾಮ ಮಂದಿರ, ಶಬರಿಮಲೆ, ಹಿಂದುತ್ವದ ಪ್ರಚಾರ ಮಾಡಿ ಮತ ಗಳಿಕೆಗೆ ಪ್ರಯತ್ನಿಸುತ್ತಿದೆ. ಆದರೆ 5 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಅವರಿಗೆ ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿಯಿಲ್ಲ. ಜಿಲ್ಲೆಯ ಎರಡೂವರೆ ಲಕ್ಷ ಬೀಡಿ ಕಾರ್ಮಿಕರಿಗೆ ಮಾಲಕರು ಬಾಕಿ ಇರುವ ತುಟ್ಟಿ ಭತ್ತೆಯನ್ನಾಗಲೀ, ಕನಿಷ್ಠ ಕೂಲಿಯನ್ನಾಗಲಿ ಜಾರಿ ಮಾಡುತ್ತಿಲ್ಲ. ಆ ಬಗ್ಗೆ ಸಂಸದರು ಮಾತನಾಡುತ್ತಿಲ್ಲ. ಮರಳು ಕ್ಷಾಮದಿಂದ ಕಟ್ಟಡ ಕಾರ್ಮಿಕರಿಗೆ ಜಿಲ್ಲೆಯಲ್ಲಿ ಕೆಲಸವಿಲ್ಲ. ಮರಳು ಮಾಫಿಯಾ ಇದಕ್ಕೆ ಕಾರಣವೆಂದು ಸ್ಪಷ್ಟವಾಗಿದ್ದರೂ ಮರಳು ಕೊರತೆ ಪರಿಹರಿಸಲು ಅವರು ಕಾಳಜಿ ವಹಿಸಿಲ್ಲ. ಹೆದ್ದಾರಿಯಲ್ಲಿ ಮೇಲ್ಸೇತುವೆಗಳು, ಸರ್ವಿಸ್ ರಸ್ತೆಗಳು 8 ವರ್ಷಗಳಿಂದಲೂ ಪೂರ್ಣಗೊಳ್ಳದೆ ರಸ್ತೆ ಅಪಘಾತಗಳಿಗೆ ಕಾರಣವಾಗಿವೆ. ಆದರೆ ಗುತ್ತಿಗೆದಾರರು ಟೋಲ್‌ಗೇಟ್ ನಿರ್ಮಿಸಿ ಸುಂಕವಸೂಲಿ ಮಾಡುತ್ತಿದ್ದಾರೆ. ನಾಗರಿಕರು ಪ್ರತಿಭಟಿಸಿದರೂ ಸಂಸದರು ತಮ್ಮ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿ ಸಮಸ್ಯೆಯ ಬಗ್ಗೆ ಹಾರಿಕೆಯ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ಜಿಲ್ಲೆಯ ಪಕ್ಷ ಮುಖಂಡರಾದ ಯು.ಬಿ. ಲೋಕಯ್ಯ. ಕೃಷ್ಣಪ್ಪ ಸಾಲ್ಯಾನ್ ಮಾತನಾಡಿದರು. ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ವಾಸುದೇವ ಉಚ್ಚಿಲ್, ಜಯಂತಿ ಶೆಟ್ಟಿ, ರಾಬರ್ಟ್ ಡಿ’ಸೋಜಾ, ಸದಾಶಿವ ದಾಸ್, ದಯಾನಂದ ಶೆಟ್ಟಿ, ಜಯಂತ ನಾಯ್ಕ, ರಾಮಣ್ಣ ವಿಟ್ಲ ಭಾಗವಹಿಸಿದ್ದರು. ಕೆ. ಯಾದವ ಶೆಟ್ಟಿ ಸ್ವಾಗತಿಸಿದರು.