ಮಂಗಳೂರು: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣದ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿ ಕೊಂಡಿರುವ ಮಂಗಳೂರಿನಲ್ಲಿಯೂ ವಿಶೇಷ ನಿಗಾ ಇರಿಸಲಾಗಿದೆ. ನಗರದಲ್ಲಿ ನಡೆಯು ತ್ತಿರುವ ಫೀವರ್ ಸರ್ವೇಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕೆಲವು ದಿನಗಳಿಂದ ಹವಾಮಾನದಲ್ಲಿ ಬದಲಾವಣೆ ಯಾಗಿದ್ದು, ಬೆಳಗ್ಗೆ ತುಸು ಚಳಿ ಮತ್ತು ಮಂಜಿನಿಂದ ಕೂಡಿರುತ್ತಿದೆ. ಮಧ್ಯಾಹ್ನವಾದಂತೆ ಸೆಕೆ, ಉರಿ ಬಿಸಿಲು ಮತ್ತು ರಾತ್ರಿ ಕೆಲವು ಕಡೆ ತುಂತುರು ಮಳೆಯಾಗುತ್ತಿದೆ. ಇದರ ಪರಿಣಾಮ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಲ್ ಜ್ವರ ಹೆಚ್ಚಾಗುತ್ತಿದೆ. ಕೆಮ್ಮು, ಜ್ವರ, ಗಂಟಲು ನೋವು, ತಲೆ ನೋವು ಲಕ್ಷಣಗಳಿಂದ ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚಾಗಿದೆ.
ಕೋವಿಡ್ ಲಕ್ಷಣ ಇರುವವರಿಗೆ ಐಎಲ್‌ಐ, ತೀವ್ರ ಉಸಿರಾಟದ ತೊಂದರೆ (ಸಾರಿ) ಪ್ರಕರಣ ಇದ್ದರೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗು ವುದು. ಮಂಗಳೂರು ಪಾಲಿಕೆ ವ್ಯಾಪ್ತಿಯ 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮತ್ತು ಜಿಲ್ಲೆಯಾದ್ಯಂತ ಮನೆಮನೆ ಸರ್ವೇ ನಡೆಸಲಾಗುತ್ತಿದೆ. ಆಶಾ ಕಾರ್ಯ ಕರ್ತೆಯರು, ಮಲೇರಿಯಾ ನಿಯಂತ್ರಣ ಕಾರ್ಯಕರ್ತರು, ಆರೋಗ್ಯ ಸುರಕ್ಷೆ ಅಧಿಕಾರಿಗಳು ಮತ್ತು ಪಾಲಿಕೆ ವ್ಯಾಪ್ತಿಯ ಎಂಪಿಡಬ್ಲೂ$Â ಕಾರ್ಯ ಕರ್ತರು ಮನೆ ಮನೆ ಭೇಟಿ ನೀಡಿ ಜ್ವರ ಸಹಿತ ಕೋವಿಡ್ ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆ ಮತ್ತು ಹಿರಿಯ ನಾಗರಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಡೆಂಗ್ಯೂ ಮತ್ತಷ್ಟು ಹೆಚ್ಚಳ
ಕಳೆದ 3 ವರ್ಷಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಈ ವರ್ಷ ಅತೀ ಹೆಚ್ಚು ಡೆಂಗ್ಯೂ ಪ್ರಕರಣ ಕಂಡುಬಂದಿದೆ. 2020ರಲ್ಲಿ ದ.ಕ.ದಲ್ಲಿ 239 ಪ್ರಕರಣ ಇತ್ತು. 2023ರಲ್ಲಿ 490ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ನಗರ ಭಾಗದಲ್ಲೇ ಅತ್ಯಧಿಕ ಡೆಂಗ್ಯೂ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಒಟ್ಟು ಪ್ರಕರಣದಲ್ಲಿ ಶೇ. 60ರಷ್ಟು ಪ್ರಕರಣ ನಗರ ಭಾಗದ್ದಾಗಿದೆ.
ಮನೆ ಮನೆಗಳಲ್ಲಿ ಈಗಾಗಲೇ ಫೀವರ್ ಸರ್ವೇ ನಡೆಯುತ್ತಿದ್ದು, ಈ ಪ್ರಕ್ರಿಯೆ ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಜ್ವರ ಸಹಿತ ಕೋವಿಡ್ ಲಕ್ಷಣ ಇದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸುತ್ತಿದ್ದಾರೆ. ಗಡಿ ಭಾಗದ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತೇವೆ.
– ನವೀನ್ ಚಂದ್ರ ಕುಲಾಲ್,
ಜಿಲ್ಲಾ ಆಶ್ರಿತ ರೋಗ ವಾಹಕ
ನಿಯಂತ್ರಣ ಅಧಿಕಾರಿ