Advertisement

Mangaluru ದೂರುದಾರರಿಗೆ ಪೊಲೀಸ್‌ ಕಮಿಷನರ್‌ ಕಚೇರಿಯಿಂದ ಕರೆ!

12:59 AM Aug 08, 2023 | Team Udayavani |

ಮಂಗಳೂರು: “ಹಲೋ… ನೀವು ಪೊಲೀಸ್‌ ಠಾಣೆಗೆ ಹೋಗಿದ್ದೀರಾ… ನಿಮ್ಮ ದೂರಿಗೆ ಪೊಲೀಸರು ಹೇಗೆ ಸ್ಪಂದಿಸಿದರು… ಏನಾದರೂ ತೊಂದರೆ ಆಯಿತೆ… ತುಂಬಾ ಹೊತ್ತು ಕಾಯಿಸಿದರಾ… ನಮ್ಮಿಂದ ಏನಾದರೂ ಸಹಾಯ ಬೇಕೆ…?

Advertisement

ಸಾರ್ವಜನಿಕರು ಯಾವುದೇ ಠಾಣೆಗೆ ತೆರಳಿ ದೂರು ನೀಡಿದ ಸ್ವಲ್ಪ ಸಮಯದಲ್ಲೀ ಅವರಿಗೆ ನಗರ ಪೊಲೀಸ್‌ ಆಯುಕ್ತರ ಕಚೇರಿ ಯಿಂದ ಇಂತಹ ವಿಚಾರಣೆಯ ಕರೆ ಬರುತ್ತದೆ. ಇದು ಆಯುಕ್ತರು ತಮ್ಮ ಇಲಾಖೆಯನ್ನು ಚುರುಕುಗೊಳಿಸಲು ರೂಪಿಸಿರುವ ವಿನೂತನ ವ್ಯವಸ್ಥೆ.

ಲೋಪಗಳ ಮಾಹಿತಿ
ಠಾಣೆಯಲ್ಲಿ ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ಜನರು ಆ ಮಾಹಿತಿಯನ್ನು ಕರೆ ಮಾಡಿದ ಅಧಿಕಾರಿಗೆ ತಿಳಿಸುತ್ತಾರೆ. ಕೆಲಸ ಕಾರ್ಯ ವಿಳಂಬವಾಗಿದ್ದಲ್ಲಿ ಆ ಬಗ್ಗೆಯೂ ತಿಳಿಸುತ್ತಾರೆ. ಈ ವಿಚಾರವನ್ನು ತತ್‌ಕ್ಷಣ ಸಂಬಂಧಿತ ಠಾಣೆಗೆ ರವಾನಿಸಿ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡು ವಂತೆ ಸೂಚಿಸಲಾಗುತ್ತದೆ ಎಂದು ಕಮಿಷನರ್‌ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯು ಆರ್‌ ಕೋಡ್‌
ಜತೆ ಫೋನ್‌ ಕರೆ
ಈಗಾಗಲೇ ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ಇಲಾಖೆಯ ಇತರ ಕಚೇರಿಗಳಲ್ಲಿ ಕ್ಯುಆರ್‌ ಕೋಡ್‌ ಅಳವಡಿಸಲಾಗಿದ್ದು ಅದನ್ನು ಸ್ಕ್ಯಾನ್‌ ಮಾಡುವ ಮೂಲಕ ಸಾರ್ವ ಜನಿಕರು ತಮಗೆ ಕಚೇರಿ ಯಲ್ಲಿ ದೊರೆತ ಸ್ಪಂದನೆಯ ಕುರಿತು ಡಿಸಿಪಿ, ಕಮಿಷನರ್‌ ಅವರಿಗೆ ಮಾಹಿತಿ ನೀಡಬಹುದಾಗಿದೆ. ಇದೀಗ ಆಯುಕ್ತರ ಕಚೇರಿಯ ಅಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ನೇರವಾಗಿ ದೂರು ದಾರರಿಗೇ ಕರೆ ಮಾಡಿ ವಿಚಾರಿಸಲಾರಂಭಿಸಿದ್ದಾರೆ.

ದೂರುದಾರರಿಗೆ ಆಶ್ಚರ್ಯ
ಠಾಣೆಗೆ ತೆರಳಿ ವಾಪಸ್‌ ಬರುವಷ್ಟ ರಲ್ಲಿ ಅಥವಾ ಮರುದಿನ ಪೊಲೀಸ್‌ ಕಚೇರಿಯಿಂದಲೇ ಬರುವ ಕರೆ ದೂರುದಾರರಲ್ಲಿ ಆಶ್ಚರ್ಯ ಮೂಡಿಸಿದೆ. “ನಾನು ಠಾಣೆಗೆ ಹೋಗಿ ಬಂದ ಅನಂತರ ಆಯುಕ್ತರ ಕಚೇರಿಯಿಂದ ಕರೆ ಬಂತು. ಒಮ್ಮೆ ಆಶ್ಚರ್ಯವಾಯಿತು. ಅನಂತರ ಖುಷಿಯಾಯಿತು.

Advertisement

ಇದೊಂದು ಉತ್ತಮ ವ್ಯವಸ್ಥೆ. ಇದನ್ನು ದ.ಕ. ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ವಿಸ್ತರಿಸಬೇಕು’ ಎನ್ನುತ್ತಾರೆ ಮಂಗಳೂರಿನ ನಿವಾಸಿ ಗಿರೀಶ್‌.

ದಿನಕ್ಕೆ ಕನಿಷ್ಠ 60
ಮಂದಿಗೆ ಕರೆ
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 20 ಠಾಣೆಗಳಿದ್ದು ದಿನಕ್ಕೆ ಸರಾಸರಿ 100-158 ಮಂದಿ ಭೇಟಿ ನೀಡುತ್ತಾರೆ. ಈ ಪೈಕಿ ಕಮಿಷನರ್‌ ಕಚೇರಿಯಿಂದ ರ್‍ಯಾಂಡಮ್‌ ಆಗಿ ಕೆಲವರಿಗೆ (ಕನಿಷ್ಠ ಮೂವರಿಗೆ) ಕರೆ ಮಾಡಿ ವಿಚಾರಿಸಲಾಗುತ್ತದೆ. ಮಂಗಳೂರಿನಲ್ಲಿ ಎಪ್ರಿಲ್‌ನಲ್ಲಿ ಆರಂಭಿಸಲಾದ ಕ್ಯುಆರ್‌ ಕೋಡ್‌ ಫೀಡ್‌ಬ್ಯಾಕ್‌ ವ್ಯವಸ್ಥೆಯನ್ನು ಇದೀಗ “ಲೋಕ ಸ್ಪಂದನ’ ಹೆಸರಿನಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಅನುಷ್ಠಾನಗೊಳಿಸಲಾಗುತ್ತಿದೆ. ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಕ್ಯುಆರ್‌ ಕೋಡ್‌ ಮೂಲಕ ದಿನಕ್ಕೆ ಸರಾಸರಿ 30 ಮಂದಿ ಪ್ರತಿಕ್ರಿಯೆ ಕಳುಹಿಸುತ್ತಿದ್ದಾರೆ.

ಈಗಾಗಲೇ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಕ್ಯುಆರ್‌ ಕೋಡ್‌ ಮೂಲಕ ಸಾರ್ವಜನಿಕರಿಂದ ಫೀಡ್‌ಬ್ಯಾಕ್‌ ಪಡೆದುಕೊಳ್ಳ ಲಾಗುತ್ತಿದೆ. ಇದನ್ನು ಬಳಸದೆ ಇರುವವರಿಂದಲೂ ಮಾಹಿತಿ ಸಂಗ್ರಹಕ್ಕಾಗಿ ಕರೆ ಮಾಡುತ್ತಿ ದ್ದೇವೆ. ಇದಲ್ಲದೆ ಆಯುಕ್ತರ ಕಚೇರಿಯಿಂದ ಸಿಬಂದಿಯನ್ನು ಸಾರ್ವಜನಿಕರಂತೆ (ಡಿಕಾಯ್‌) ಠಾಣೆಗೆ ಕಳುಹಿಸಿ ನಿಗಾ ಇಡಲಾಗುತ್ತಿದೆ. ಹೀಗೆ ಎರಡು ಹಂತಗಳಲ್ಲಿ ಪ್ರತಿಕ್ರಿಯೆ ಪಡೆಯಲಾಗುತ್ತಿದೆ. ಸಾರ್ವಜನಿಕರಿಗೆ ಪೊಲೀಸರಿಂದ ಉತ್ತಮ ಸ್ಪಂದನೆ ಸಿಗಬೇಕು. ವಿಳಂಬವಾಗಬಾರದು. ವ್ಯವಸ್ಥೆ ಮೇಲಿನ ನಂಬಿಕೆ ಹೆಚ್ಚಾಗಬೇಕು ಎಂಬುದೇ ನಮ್ಮ ಉದ್ದೇಶ.
– ಕುಲದೀಪ್‌ ಕುಮಾರ್‌ ಆರ್‌. ಜೈನ್‌,
ಪೊಲೀಸ್‌ ಆಯುಕ್ತರು, ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next