Advertisement

Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ

12:43 PM Oct 25, 2024 | Team Udayavani |

ಮಹಾನಗರ: ಎಲ್ಲೆಡೆ ದೀಪಾವಳಿಗೆ ಸಡಗರದ ಸಿದ್ಧತೆ ನಡೆಯುತ್ತಿರುವಂತೆಯೇ ಮಂಗಳೂರಿನ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಸಾಮರ್ಥ್ಯದ ಮಕ್ಕಳು ಕೂಡಾ ಬೆಳಕಿನ ಹಬ್ಬಕ್ಕೆ ಬಣ್ಣ ತುಂಬಲು ಸಿದ್ಧರಾಗುತ್ತಿದ್ದಾರೆ.

Advertisement

ಮಂಗಳೂರಿನ ವಿಟಿ ರಸ್ತೆಯ ಸೇವಾ ಭಾರತಿ ಸಂಸ್ಥೆಯ ಅಂಗಸಂಸ್ಥೆ ಚೇತನಾ ಬಾಲವಿಕಾಸ ಕೇಂದ್ರದ ವಿಶೇಷ ಚೇತನ ವಿದ್ಯಾರ್ಥಿಗಳು ಹಣತೆಗಳಿಗೆ ಬಣ್ಣದ ಚಿತ್ತಾರ ನೀಡುವ ಮೂಲಕ ಬೆಳಕಿನ ಹಬ್ಬಕ್ಕೆ ಹೊಸ ಅರ್ಥ ಕಲ್ಪಿಸಿದ್ದಾರೆ. ಮಂಗಳೂರು ಆಸುಪಾಸಿನ 100ಕ್ಕೂ ಅಧಿಕ ವಿಶೇಷ ಚೇತನರಿಗೆ ಚೇತನಾ ಬಾಲವಿಕಾಸ ಕೇಂದ್ರ ಆಸರೆಯಾಗಿದೆ. ಇಲ್ಲಿನ 25 ವರ್ಷ ಮೇಲ್ಪಟ್ಟ ಸುಮಾರು 30ರಷ್ಟು ವಿಶೇಷ ಚೇತನ ಮಕ್ಕಳು ಅತ್ಯಂತ ತಾಳ್ಮೆಯಿಂದ ಶಿಸ್ತಿನಿಂದ ಹಣತೆಗಳಿಗೆ ನಾಜೂಕಾಗಿ ಬಣ್ಣ ಬಳಿಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಹೊಸ ಸಡಗರದಲ್ಲಿರುವ ಮಕ್ಕಳ ಉತ್ಪನ್ನಗಳಿಗೆ ಮಂಗಳೂರು ಮಾತ್ರವಲ್ಲ ದೇಶ, ವಿದೇಶಗಳಿಂದಲೂ ಬೇಡಿಕೆ ಬಂದಿದೆಯಂತೆ.

ಚೇತನಾ ಬಾಲ ವಿಕಾಸ ಸಂಸ್ಥೆಯ ಮಕ್ಕಳು ಕಳೆದ 10 ವರ್ಷಗಳಿಂದ ದೀಪಾವಳಿ ಹಬ್ಬವನ್ನು ಬಣ್ಣದ ಹಣತೆಯೊಂದಿಗೆ
ಸಂಭ್ರಮಿಸುತ್ತಿದ್ದಾರೆ. ಅವರಿಗೆ ಪೋಷಕರು, ಸಿಬ್ಬಂದಿ, ಸ್ವಯಂಸೇವಕರು ಬೆಂಬಲ ನೀಡುತ್ತಿದ್ದಾರೆ. ಕಳೆದ ವರ್ಷ 13 ಸಾವಿರ ಹಣತೆಗಳನ್ನು ಬಣ್ಣ ಹಚ್ಚಿ ಸಿದ್ಧಪಡಿಸಿದ್ದರು. ಈ ಬಾರಿ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಸಂಸ್ಥೆಯ ಸಿಬಂದಿ ಮೀನಾಕ್ಷಿ. ಮುಂಬೈ, ಚೆನ್ನೈ, ಪುಣೆ, ಬೆಂಗಳೂರು, ಮೈಸೂರಿಗೆ ಸಾವಿರಾರು ಹಣತೆಗಳನ್ನು ಕಳುಹಿಸಲಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರು.

ಮಮತೆಯ ಮಡಿಲಿಂದ ಬಣ್ಣಗಳ ಚಿತ್ತಾರ
ಚೇತನಾ ಬಾಲವಿಕಾಸ ಸಂಸ್ಥೆಯಲ್ಲಿ ವಿಶೇಷ ಪ್ರೀತಿ ಮಮತೆ ಮಕ್ಕಳಿಗೆ ನೀಡಲಾಗುತ್ತದೆ. ಹೀಗಾಗಿ ಯಾವುದೇ ಕೆಲಸಗಳನ್ನು ಅವರು ಮಾಡುತ್ತಾರೆ. ಮೂರು ತಿಂಗಳ ಹಿಂದೆಯೇ ಹಣತೆಗಳನ್ನು ಶೃಂಗರಿಸುವ ಕೆಲಸ ಆರಂಭಿಸಲಾಗಿದೆ. ವಿವಿಧ ರಾಜ್ಯಗಳಿಂದ ಹಣತೆಗೆ ಬೇಡಿಕೆ ಇದ್ದು, ಈ ಬಾರಿ 18 ಸಾವಿರ ಹಣತೆ ಸಿದ್ಧಪಡಿಸುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿ ಹಣತೆಗಳನ್ನು ಇಲ್ಲೇ ರಚಿಸುವ ಯೋಜನೆ ಇದೆ.
-ಸುಪ್ರೀತಾ, ಮುಖ್ಯಶಿಕ್ಷಕಿ ಚೇತನಾ, ಬಾಲ ವಿಕಾಸ ಕೇಂದ್ರ

Advertisement

25 ಶೈಲಿಯ ಹಣತೆಗಳಿಗೆ ಬಣ್ಣ
ಮುಂಬೈನಿಂದ ಮಣ್ಣಿನ ಹಣತೆಗಳನ್ನು ತಂದು ಅವುಗಳಿಗೆ ಬಣ್ಣ ಬಳಿದು ವಿವಿಧ ಚಿತ್ತಾರ ಮೂಡಿಸಲಾಗುತ್ತದೆ. ತಾವರೆ, ತುಳಸಿಕಟ್ಟೆ, ಮಾವು ಇತ್ಯಾದಿ ಶೈಲಿಯಲ್ಲಿ ಹಣತೆಗಳು ಇಲ್ಲಿವೆ. ಓರ್ವ ವಿಶೇಷ ವಿದ್ಯಾರ್ಥಿ ದಿನವೊಂದಕ್ಕೆ 25 ಹಣತೆಗಳನ್ನು ಶೃಂಗರಿಸಬಲ್ಲರು.

ಹಣತೆಗೆ ಬಣ್ಣ ಬಳಿಯುವುದು ವಿದ್ಯಾರ್ಥಿಗಳಿಗೆ ಒಂದು ಚಟುವಟಿಕೆಯಾದರೆ, ಇದರಿಂದ ಬರುವ ಆದಾಯದಲ್ಲಿ ಖರ್ಚು ವೆಚ್ಚ ತೆಗೆದು ಉಳಿದ ಹಣವನ್ನು ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ನೀಡಲಾಗುತ್ತದೆ. ಸಂಸ್ಥೆಯ ವಾರ್ಷಿಕೋತ್ಸವದಂದು ಬಹುಮಾನ ರೂಪದಲ್ಲಿ ವಿತರಿಸಲಾಗುತ್ತದೆ. ಇದನ್ನು ಪಡೆಯುವ ವಿದ್ಯಾರ್ಥಿಗಳ ಆನಂದ ಹೇಳಲು ಅಸಾಧ್ಯ ಅನ್ನುತ್ತಾರೆ ಸಿಬಂದಿ.

ಮಕ್ಕಳಿಗೆ ವರ್ಷವಿಡೀ ಚಟುವಟಿಕೆ
ದೀಪಾವಳಿ ಸಂದರ್ಭದಲ್ಲಿ ಹಣತೆಗಳಿಗೆ ಬಣ್ಣದ ಚಿತ್ತಾರ ಒಂದೆಡೆಯಾದರೆ, ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ.  ಸ್ಕ್ರೀನ್‌ ಪೈಂಟಿಂಗ್‌, ಪೇಪರ್‌, ಬಟ್ಟೆ ಬ್ಯಾಗ್‌ ತಯಾರಿಕೆ, ಮೆಡಿಕಲ್‌ಗ‌ಳಿಗೆ ಬೇಕಾಗುವ ಕವರ್‌ಗಳು, ಅಲಂಕಾರಿಕ ಹೂವುಗಳು, ಬಟ್ಟೆಯ ಮ್ಯಾಟ್‌ಗಳು, ಕ್ಯಾಂಡಲ್‌ ತಯಾರಿಕೆ ಹೀಗೆ ವಿವಿಧ ಚಟುವಟಿಕೆಗಳು ಭಿನ್ನ ಸಾಮರ್ಥ್ಯರನ್ನು ಕ್ರಿಯಾಶೀಲರನ್ನಾಗಿಸುತ್ತಿದೆ.

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next