Advertisement

Mangaluru: ಕಾಲೇಜಿನಲ್ಲಿ ಕುಸಿದು ಬಿದ್ದಿದ್ದ ಉಪನ್ಯಾಸಕಿ ಸಾ*ವು

07:42 AM Nov 14, 2024 | Team Udayavani |

ಮಂಗಳೂರು: ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಬುಧ ವಾರ ಮೃತಪಟ್ಟಿದ್ದಾರೆ.

Advertisement

ನಗರದ ಸಂತ ಅಲೋಶಿಯಸ್‌ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್‌(23) ಮೃತಪಟ್ಟವರು.

ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು.

ಅನಾಫಿಲ್ಯಾಕ್ಟಿಕ್‌ ರಿಯಾಕ್ಷನ್‌ ಗ್ಲೋರಿಯಾ ಅವರಿಗೆ ಫ‌ುಡ್‌ ಅಲರ್ಜಿ(ಅನಾಫಿಲ್ಯಾಕ್ಟಿಕ್‌ ರಿಯಾಕ್ಷನ್‌) ಸಮಸ್ಯೆ ಇತ್ತು. ಇದರಿಂದಾಗಿ ಈ ಹಿಂದೆಯೂ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಬಳಿಕ ಚೇತರಿಸಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಗ್ಲೋರಿಯಾ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.

ಅಂಗಾಂಗ ದಾನ
ಗ್ಲೋರಿಯಾ ರೋಡ್ರಿಗಸ್‌ ಅವರ ದೇಹದ ಅಂಗಾಂಗವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣು, ಹೃದಯ, ಚರ್ಮ, ಯಕೃತ್‌, ಎರಡು ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಲಾಗಿದೆ. ಯಕೃತ್‌(ಲಿವರ್‌) ಮಂಗಳೂರಿನ ಎಜೆ ಆಸ್ಪತ್ರೆಗೆ ನೀಡಲಾಗಿದೆ. ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರಗೆ ನೀಡಲಾಗಿದೆ. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಕಿಡ್ನಿಯನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ ಚರ್ಮ ಹಾಗೂ ಕಣ್ಣುಗಳನ್ನು ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಇಡಲಾಗಿದೆ.

Advertisement

ಅಪರೂಪದ ಕಾಯಿಲೆ
ಫಾದರ್‌ ಮುಲ್ಲರ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಉದಯ ಕುಮಾರ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಅನಾಫಿಲ್ಯಾಕ್ಟಿಕ್‌ ರಿಯಾಕ್ಷನ್‌ ಫುಡ್‌ ಅಲರ್ಜಿಯ ಅಂತಿಮ ಘಟ್ಟ . ಆಹಾರದ ಅಲರ್ಜಿಯಿಂದ ಸಾವು ಸಂಭವಿಸುವುದು ಅಪರೂಪದಲ್ಲಿ ಅಪರೂಪ. ಶೇ.50 ಜನರಲ್ಲಿ ಫುಡ್‌ ಅಲರ್ಜಿ ಇದ್ದು, ಆ ಬಗ್ಗೆ ಎಚ್ಚರ ವಹಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಅಲರ್ಜಿ ಇದ್ದಲ್ಲಿ ವೈದ್ಯರಿಂದ ಸಲಹೆ ಸೂಚನೆ ಪಡೆಯುವುದು ಉತ್ತಮ. ಗ್ಲೋರಿಯಾ ಸಾವು ಅನಿರೀಕ್ಷಿತವಾಗಿದ್ದು, ಸಾವಿನಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಪೋಷಕರು ಶ್ರೇಷ್ಠ ಕಾರ್ಯ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next