Advertisement

Mangaluru: ನಾಳೆಯಿಂದ ನೀತಿ ಸಂಹಿತೆ ಸಡಿಲಿಕೆ; ನೂತನ ಮೇಯರ್‌ ಆಡಳಿತ ಶುರು

03:36 PM Oct 28, 2024 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್‌ ಆಗಿ ಮನೋಜ್‌ ಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ದಿನವೇ ವಿಧಾನಪರಿಷತ್‌ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತಿ ಜಾರಿಯಾಗಿತ್ತು. ಇದರಿಂದ ಕಳೆದ ಸುಮಾರು ಒಂದು ತಿಂಗಳ ಕಾಲ ಜನಪ್ರತಿನಿಧಿಗಳ ಕಾರ್ಯಕಲಾಪಗಳಿಗೆ ದೊಡ್ಡ ಬ್ರೇಕ್‌ ಬಿದ್ದಿತ್ತು. ಅ.29 ರಿಂದ ನೀತಿ ಸಂಹಿತೆ ತೆರವಾಗಲಿದ್ದು, ನೂತನ ಮೇಯರ್‌ ಅವರ ಆಡಳಿತ ಆರಂಭಗೊಳ್ಳಲಿದೆ.

Advertisement

ನೀತಿ ಸಂಹಿತೆ ಕಾರಣಕ್ಕೆ ಪಾಲಿಕೆಯಲ್ಲಿರುವ ‘ಮೇಯರ್‌ ಕಚೇರಿ’ಗೆ ಚುನಾವಣಾಧಿಕಾರಿಗಳು ಬೀಗ ಹಾಕಿದ್ದರು. ಮನೋಜ್‌ ಕುಮಾರ್‌ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಕೆಲವು ನಿಮಿಷವಷ್ಟೇ ಚೇಂಬರ್‌ನಲ್ಲಿ ಕುಳಿತಿದ್ದರು. ಆಗಲೇ ನೀತಿ ಸಂಹಿತೆ ಮಾಹಿತಿ ಬಂದಿತ್ತು. ‘ಮೇಯರ್‌ ಕಾರು’ ಬಳಕೆಗೂ ಅವಕಾಶ ಸಿಕ್ಕಿರಲಿಲ್ಲ. ಮಂಗಳವಾರದಿಂದ ನೀತಿ ಸಂಹಿತೆ ತೆರವಾಗಲಿದ್ದು, ಪಾಲಿಕೆಯ ಆಡಳಿತಕ್ಕೆ ಮತ್ತೆ ಹುರುಪು ಬರಲಿದೆ.

ನೀತಿ ಸಂಹಿತೆ ತೆರವಾದ ಬಳಿಕ ಸ್ಥಾಯೀ ಸಮಿತಿ ಅಧ್ಯಕ್ಷರ ನೇಮಕ ಆಗಬೇಕು. ಸಮಿತಿಗಳಿಗೆ ಪ್ರತ್ಯೇಕವಾಗಿ ನೊಟೀಸ್‌ ನೀಡಿ ಸ್ಥಾಯೀ ಸಮಿತಿ ಅಧ್ಯಕ್ಷರ ನೇಮಕ ಮಾಡಬೇಕು. ಸ್ಥಾಯೀ ಸಮಿತಿ ಸದಸ್ಯರಿಗೆ ನೋಟೀಸ್‌ ನೀಡಿ 7 ದಿನಗಳ ಅವಧಿ ಬೇಕು. ಆ ಬಳಿಕವಷ್ಟೇ ಸ್ಥಾಯೀ ಸಮಿತಿಗೆ ಅಧ್ಯಕ್ಷರ ನೇಮಕವಾಗುತ್ತದೆ. ಅದಾದ ಅನಂತರ ನೂತನ ಮೇಯರ್‌ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಾಮಾನ್ಯ ಸಭೆ ನಡೆಸಲು ಅವಕಾಶ ಇರುತ್ತದೆ.

ಮಂಗಳೂರು ನಗರದಲ್ಲಿ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ರಸ್ತೆ ಗುಂಡಿಗಳು ಅಪಘಾತ, ಪ್ರಾಣಹಾನಿಗಳಿಗೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳಿಗೆ ಮುಂದಾಗಬೇಕಾಗಿದೆ. ಮಂಗಳೂರು ಮಹಾನಗರದ ತ್ಯಾಜ್ಯ ನಿರ್ವಹಣೆ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ನಿಷೇಧಿತ ಪ್ಲಾಸ್ಟಿಕ್‌ಗೆ ಕಡಿವಾಣ, ಪಾರ್ಕಿಂಗ್‌ ಸಮಸ್ಯೆ ಸಹಿತ ಹಲವು ವಿಚಾರಗಳ ಬಗ್ಗೆಯೂ ಮೇಯರ್‌ ಅವರು ಗಮನಹರಿಸಬೇಕಾದ ಅವಶ್ಯಕತೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ಹೊಸ ಮೇಯರ್‌: ಹಲವು ಸವಾಲು
ಫೆ.27ರವರೆಗೆ ಅಂದರೆ ಕೇವಲ ನಾಲ್ಕು ತಿಂಗಳ ಕಾಲ ಹೊಸ ಮೇಯರ್‌ ಆಡಳಿತಾವಧಿ ಇರಲಿದ್ದು, ಈ ಅಲ್ಪಾವಧಿಯಲ್ಲಿ ವಿವಿಧ ಯೋಜನೆ, ಕಾಮಗಾರಿಗಳ ಪ್ರಗತಿ ಪರಿಶೀಲನೆಯ ಮೂಲಕ ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸುವುದು ಅವರಿಗಿರುವ ದೊಡ್ಡ ಸವಾಲು. ನಗರದಲ್ಲಿ ಪ್ರಸ್ತುತ ಅಪೂರ್ಣ ಸ್ಥಿತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಮುಂಗಾರು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆ ಲಕ್ಷಣ ಇಲ್ಲ. ಗ್ಯಾಸ್‌ ಪೈಪ್‌ಲೈನ್‌ ಅಳವಡಿಕೆ, ಜಲಸಿರಿ ಯೋಜನೆ, ರಸ್ತೆಗಳ ಉನ್ನತೀಕರಣ, ಸ್ಮಾರ್ಟ್‌ಸಿಟಿ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ವೇಗ ನೀಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next