Advertisement

Mangaluru ಕರಾವಳಿಯ ಅಂತರ್ಜಲ ಪರಿಶೀಲನೆಗೆ ಸಮಿತಿ: ಸಚಿವ ಪ್ರಿಯಾಂಕ್‌ ಖರ್ಗೆ

12:00 AM Nov 16, 2023 | Team Udayavani |

ಮಂಗಳೂರು: ಕಳೆದ ಒಂದು ದಶಕದಲ್ಲಿ ಕರಾವಳಿ ಭಾಗ ದಲ್ಲಿ ಅಂತರ್ಜಲ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದರ ಬಗ್ಗೆ ಅಧ್ಯಯನ ಮಾಡಿ ಅಂತರ್ಜಲ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ವೈಜ್ಞಾನಿಕ ಸಮೀಕ್ಷೆ ನಡೆಸಲು ಇಸ್ರೋ ಸಹಿತ ತಜ್ಞರ ನೇತೃತ್ವದಲ್ಲಿ ವಾಟರ್‌ ಆಡಿಟ್‌ ಕಮಿಟಿ ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌, ದ.ಕ. ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆ ವತಿಯಿಂದ ನಗರದ ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಪಂಚಾಯತ್‌ರಾಜ್‌ ಪ್ರತಿನಿಧಿಗಳ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಬೇಕಾದಷ್ಟು ನೀರು ಇದ್ದ ಕರಾವಳಿಯಲ್ಲಿ ಈಗ ಕುಡಿಯುವ ನೀರಿನ ಕೊರತೆ ಕಂಡುಬರುತ್ತಿದೆ. ಹೀಗಾಗಿ ಅಂತರ್ಜಲದ ಬಗ್ಗೆ ಸ್ಥೂಲ ಅಧ್ಯಯನವನ್ನು ಕೆಲವೇ ತಿಂಗಳಲ್ಲಿ ನಡೆಸಿ ವರದಿ ಪಡೆದು ಕ್ರಮ ಕೈಗೊಳ್ಳ ಲಾಗುವುದು ಎಂದರು.

ಪಂಚಾಯತ್‌ಗೆ ಸಂಬಂಧಿಸಿ ಜನರ ಸಮಸ್ಯೆ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು “ಪಂಚಮಿತ್ರ’ ಕಾಲ್‌ ಸೆಂಟರ್‌ ಮುಂದಿನ ತಿಂಗಳು ಜಾರಿಗೆ ಬರಲಿದೆ. ಪಂಚಾಯತ್‌ಗಳು ಸರಕಾರದ ಅನುದಾನದ ಜತೆಗೆ ಸಂಪನ್ಮೂಲ ಸೃಷ್ಟಿಗೆ ಆದ್ಯತೆ ನೀಡ ಬೇಕಿದೆ.

ಪಂಚಾಯತ್‌ಗಳಲ್ಲಿ ತ್ಯಾಜ್ಯ ಸಂಗ್ರಹ-ಸಂಸ್ಕರಣೆಯನ್ನು ವಾಣಿಜ್ಯ ಮಾದರಿಯಲ್ಲಿ ರೂಪಿಸಿ ಸ್ವಸಹಾಯ ಸಂಘದ ಸಹಕಾರದೊಂದಿಗೆ ಪಂಚಾಯತ್‌-ಸ್ವಸಹಾಯ ಸಂಘಕ್ಕೆ ಲಾಭವಾಗುವ ವಿಶೇಷ ಪರಿಕಲ್ಪನೆ ಶೀಘ್ರ ಜಾರಿಯಾಗಲಿದೆ ಎಂದರು.

Advertisement

5 ವರ್ಷ ಅಧ್ಯಕ್ಷ ಸ್ಥಾನ
ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ಪಂಚಾಯತ್‌ರಾಜ್‌ ಅಧಿನಿಯಮದ 30 ವರ್ಷದ ಸಂಭ್ರಮದ ಬಗ್ಗೆ ಮಾತನಾಡಿದರು. ಆಡಳಿತ ವಿಕೇಂದ್ರೀಕರಣದ ಮೂಲಕ ಕಾಂಗ್ರೆಸ್‌ ಹೊಸ ನಾಯಕತ್ವ ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ. ಪಂಚಾ ಯತ್‌ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆ 5 ವರ್ಷ ಇರಬೇಕು ಹಾಗೂ ಮೀಸಲಾತಿ 2 ಬಾರಿಗೆ ಒಂದೇ ಇರಲಿ ಎಂದರು.

ಪಕ್ಷದ ಚಿಹ್ನೆಯಲ್ಲಿ ಪಂ. ಚುನಾವಣೆ
ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಪ್ರಸ್ತಾವನೆ ಗೈದರು. ಕೇರಳದಲ್ಲಿ ಇರುವಂತೆ ನಮ್ಮಲ್ಲಿಯೂ ಪಕ್ಷದ ಚಿಹ್ನೆಯಲ್ಲಿ ಗ್ರಾ.ಪಂ. ಚುನಾವಣೆಯನ್ನೂ ನಡೆಸಬೇಕಿದೆ. ಹಲವು ಗ್ರಾಮ ಸಭೆಗಳ ಬದಲು 1 ಸಭೆ ಮಾಡಿ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಬರುವಂತೆ ಮಾಡಬೇಕು. 25 ಎಕರೆ ಜಾಗವನ್ನು ಗ್ರಾ.ಪಂಗೆ ಮೀಸಲಿಡಬೇಕು. ವಸತಿ ಯೋಜನೆಗೆ 5 ಲಕ್ಷ ರೂ. ಸಹಾಯಧನ ನೀಡಬೇಕು. ಪಿಡಿಒಗಳಾಗಿ ಆಯಾ ಜಿಲ್ಲೆಯವರನ್ನೇ ನಿಯೋಜಿಸಬೇಕು. 3ರಿಂದ 5 ವರ್ಷ ಮಾತ್ರ ಒಂದೇ ಸ್ಥಳದಲ್ಲಿ ಇವರ ನಿಯೋಜನೆಯಾಗಲಿ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿ. ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ಬಿ. ರಮಾನಾಥ ರೈ ಅಭಿನಂದನ ಭಾಷಣ ಮಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್‌, ಪ್ರಮುಖರಾದ ಬಿ. ಇಬ್ರಾಹಿಂ, ಶಕುಂತಳಾ ಶೆಟ್ಟಿ, ಮಿಥುನ್‌ ರೈ, ಇನಾಯತ್‌ ಆಲಿ, ರಕ್ಷಿತ್‌ ಶಿವರಾಂ, ಕೃಷ್ಣಪ್ಪ, ಪ್ರವೀಣ್‌ಚಂದ್ರ ಆಳ್ವ, ಎಂ. ಶಶಿಧರ ಹೆಗ್ಡೆ, ಪದ್ಮರಾಜ್‌ ಆರ್‌., ಜಿ.ಎ. ಬಾವಾ, ಬಿ.ಎಚ್‌. ಖಾದರ್‌, ಅಶ್ವಿ‌ನ್‌ ಕುಮಾರ್‌, ಶಾಲೆಟ್‌ ಪಿಂಟೋ, ಲುಕ್ಮಾನ್‌, ಸುಹಾನ್‌ ಆಳ್ವ ಇದ್ದರು.

ರಾಜೀವ್‌ ಗಾಂಧಿ ಪಂಚಾಯತ್‌ರಾಜ್‌ ಸಂಘಟನೆ ದ.ಕ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ವಿವಿಧ ವಿ.ಸಭಾ ಕ್ಷೇತ್ರಗಳ ಪ್ರಮುಖರಾದ ಶಾರದಾ ಬಿಳಿನೆಲೆ, ಜೋಸೆಫ್‌ ಕೆ.ಜೆ.ರಾಯ್‌, ನವೀನ್‌ ರೈ, ಜಗದೀಶ್‌ ಕೊçಲ, ಹೈದರ್‌ ಕೈರಂಗಳ, ಹರಿಯಪ್ಪ, ರೇಖಾ ಶೆಟ್ಟಿ, ಮೊಹಮ್ಮದ್‌ ಬಡಗನ್ನೂರು, ಮಮತಾ ಗಟ್ಟಿ ವಿಚಾರ ಮಂಡಿಸಿದರು.

ಎಂ.ಎಸ್‌. ಮಹಮ್ಮದ್‌ ವಂದಿಸಿ ದರು. ಕೆ. ಸಾಹುಲ್‌ ಹಮೀದ್‌ ಮತ್ತು ಅಬ್ದುಲ್‌ ರಝಾಕ್‌ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

ಪಂಚತಂತ್ರ 2; ಗ್ರಾಮಸಭೆ ಆನ್‌ಲೈನ್‌
ಪ್ರಿಯಾಂಕ್‌ ಖರ್ಗೆ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಪಂಚತಂತ್ರ-2 ರೂಪಿಸಲಾಗಿದ್ದು, ಪ್ರಾಯೋಗಿಕವಾಗಿ ಜಾರಿಯಲ್ಲಿದೆ. ಗ್ರಾ.ಪಂ. ಸಭೆಯನ್ನು ಆನ್‌ಲೈನ್‌ ಮೂಲಕವೇ ಇದರಲ್ಲಿ ಮಾಡಿ ವರದಿ ಸಲ್ಲಿಸಿದರೆ ಅನುದಾನ ಕೂಡ ಬೇಗನೆ ಲಭಿಸಲಿದೆ. ಪಿಡಿಒಗಳ ಹಾಜರಾತಿ ಕೂಡ ಬಯೋಮೆಟ್ರಿಕ್‌ ಆಗಿರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next