Advertisement
ಪ್ರತಿ ಮೂರು ವರ್ಷಗಳಿಗೊಮ್ಮೆ ಏರಿಕೆ ಮಾಡಬೇಕಾದ ಆಸ್ತಿ ತೆರಿಗೆಯನ್ನು ಮಂಗಳೂರು ಪಾಲಿಕೆ ಇದೀಗ ಶೇ. 15ರಷ್ಟು ಏರಿಸಿದೆ. ಜತೆಗೆ ಘನತ್ಯಾಜ್ಯ ಕರ ಕೂಡ ಇದೇ ಪ್ರಮಾಣದಲ್ಲಿಏರಿಕೆ ಮಾಡಲಾಗಿದೆ. ಪರಿಣಾಮವಾಗಿ ಕೋವಿಡ್ -19 ಸಂಕಷ್ಟದಲ್ಲಿರುವ ಮಂಗಳೂರು ನಾಗರಿಕರಿಗೆ ತೆರಿಗೆ ಹೊರೆ ಏರಿಕೆಯಾದಂತಾಗಿದೆ.
ಮಂಗಳೂರು ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಜಾರಿಗೆ ಬಂದ ಬಳಿಕ 2008ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಶೇ. 15ರಷ್ಟು ಏರಿಕೆ ಮಾಡಬೇಕು ಎಂಬ ನಿಯಮವಿದೆ. ಒಂದು ವೇಳೆ ತೆರಿಗೆ ಏರಿಕೆ ಮಾಡದಿದ್ದರೆ ಸರಕಾರದಿಂದ ಬರುವ ಅನುದಾನಕ್ಕೆ ಹೊಡೆತ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ 2008, 2011, 2014 ಹಾಗೂ 2017ರಲ್ಲಿ ಆಸ್ತಿ ತೆರಿಗೆ ಶೇ. 15ರಷ್ಟು ಏರಿಕೆ ಕಂಡಿದೆ. ಇದರ ಪ್ರಕಾರ 2020ರ ತೆರಿಗೆ ಏರಿಕೆ ಸದ್ಯ ಮಾಡಲಾಗಿದೆ ಎಂಬುದು ಪಾಲಿಕೆ ಅಭಿಪ್ರಾಯ. ಆದರೆ, ಕೋವಿಡ್ -19 ಸಂಕಷ್ಟದ ಕಾಲದಲ್ಲಿ ನಿಯಮಾವಳಿಯನ್ನು ನೆಪವಾಗಿಸಿಕೊಂಡು ತೆರಿಗೆ ಏರಿಕೆ ಮಾಡಿರುವುದು ಎಷ್ಟು ಸರಿ? ಹಾಗೂ ಕೋವಿಡ್ -19 ಕಾರಣದಿಂದ ಸದ್ಯಕ್ಕೆ ತೆರಿಗೆ ಏರಿಕೆ ನೀತಿ ಕೈಬಿಡುವ ಬಗ್ಗೆ ಸರಕಾರದ ಗಮನಸೆಳೆಯಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
Related Articles
ಸರಕಾರದ ನಿಯಮಾವಳಿ ಪ್ರಕಾರ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಏರಿಕೆ ಮಾಡಲಾಗಿದೆ. ಇದನ್ನು ಕಡಿಮೆ ಮಾಡಲು ಸದ್ಯಕ್ಕೆ ಅವಕಾಶವಿಲ್ಲ. ಆದರೆ ಈಗಾಗಲೇ ಏರಿಕೆಯಲ್ಲಿರುವ ನೀರಿನ ತೆರಿಗೆ ಹಾಗೂ ಘನತ್ಯಾಜ್ಯ ಕರವನ್ನು ಇಳಿಕೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಮುಂದಿನ ಪಾಲಿಕೆ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
-ದಿವಾಕರ ಪಾಂಡೇಶ್ವರ
ಮೇಯರ್, ಮಂಗಳೂರು
Advertisement