Advertisement

ಲೋಕಸಭಾ ಫ‌ಲಿತಾಂಶ: ಪಾಲಿಕೆ ಚುನಾವಣೆ ಮೇಲೆ ಪರಿಣಾಮ!

07:06 PM May 23, 2019 | Sriram |

ಮಹಾನಗರ: ದ.ಕ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಮಹಾನಗರ ಪಾಲಿಕೆಯಲ್ಲಿಯೂ ರಾಜಕೀಯ ಲೆಕ್ಕಾಚಾರ ಗರಿಗೆದರಿದೆ. ದ.ಕ. ಕ್ಷೇತ್ರವು ಮತ್ತೆ ಭಾರೀ ಮತಗಳ ಅಂತರದಲ್ಲಿ ಬಿಜೆಪಿ ಪಾಲಾದ ಹಿನ್ನೆಲೆಯಲ್ಲಿ, ಪಾಲಿಕೆ ವ್ಯಾಪ್ತಿಯಲ್ಲಿ ಇಬ್ಬರು ಬಿಜೆಪಿ ಶಾಸಕರು ಈಗಾಗಲೇ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಬಿಜೆಪಿಗೆ ನಿರೀಕ್ಷೆ ಶುರುವಾಗಿದ್ದು, ಕಾಂಗ್ರೆಸ್‌ ಪಾಳಯದಲ್ಲಿ ಮಾತ್ರ ತಳಮಳ ಕಾಣಿಸಿಕೊಂಡಿದೆ.

Advertisement

ಇಲ್ಲಿಯವರೆಗೆ ಪಾಲಿಕೆ ಆಡಳಿತ ನಡೆಸಿದ ಕಾಂಗ್ರೆಸ್‌ ತನ್ನ ಆಡಳಿತ ಕಾಲದಲ್ಲಿ ಮಾಡಿದ ಕಾರ್ಯ ಗಳನ್ನು ಮುಂದಿಟ್ಟು ಮತದಾರರ ಬಳಿಗೆ ತೆರಳಲು ನಿರ್ಧರಿಸಿದ್ದು, ಬಿಜೆಪಿಯೂ ಆಡಳಿತ ಪಕ್ಷದ ವೈಫಲ್ಯಗಳ ಪಟ್ಟಿ ಮಾಡುತ್ತ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಚುನಾ ವಣೆ ಫಲಿತಾಂಶ ಇದೀಗ ದೊರಕಿದ್ದು, ಕುತೂಹಲ ಮನೆ ಮಾಡಿದೆ. ಲೋಕಸಭಾ ಚುನಾವಣೆಯ ಮೂಡ್‌ನ‌ಲ್ಲಿರುವ ಪಾಲಿಕೆಯ ಮಾಜಿ ಕಾರ್ಪೊರೇಟರ್‌ಗಳು ಇದೀಗ ಮೀಸಲಾತಿ ಬಂದ ತತ್‌ಕ್ಷಣವೇ ರಾಜಕೀಯ ಆಟ ಶುರು ಮಾಡಲು ಅಣಿಯಾಗಿದ್ದಾರೆ.

ಕೆಲವೇ ದಿನದಲ್ಲಿ ಮನಪಾ ಮೀಸಲಾತಿ ಪ್ರಕಟ ಗೊಳ್ಳುವ ನಿರೀಕ್ಷೆಯಿದ್ದು, ಮಳೆಗಾಲ ಕಳೆದ ಕೂಡಲೇ ಪಾಲಿಕೆಗೆ ಚುನಾವಣೆ ನಡೆಯಲಿದೆ.

2013 ಮಾರ್ಚ್‌ 7ರಂದು ಪಾಲಿಕೆ ಚುನಾವಣೆ ನಡೆದಿದ್ದು, ಮುಂದಿನ ಚುನಾವಣೆ 2019ರ ಮಾರ್ಚ್‌ ವೇಳೆಗೆ ನಡೆಯಬೇಕಿತ್ತು. ಆದರೆ, ಮೀಸಲಾ ತಿಯಲ್ಲಿ ಉಂಟಾದ ಆಕ್ಷೇಪದಿಂದಾಗಿ ಚುನಾ ವಣೆ ಮುಂದೂಡಿಕೆಯಾಗಿದ್ದು, ಸದ್ಯ ಆಡಳಿತಾಧಿಕಾರಿ ಅಧಿಕಾರ ನಡೆಸುತ್ತಿದ್ದಾರೆ.

ಮನಪಾ ಚುನಾವಣೆಯ ಅಖಾಡ ಮುಂದೆ ಸಿದ್ಧವಾಗಲಿದೆ. ಇದಕ್ಕಾಗಿ ರಾಜ ಕೀಯ ಚಟುವಟಿಕೆಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ವಾಗಲಿದೆ. ಪಾಲಿಕೆ ಮಾಜಿ ಕಾರ್ಪೊರೇಟರ್‌ಗಳು ಮತ್ತೆ ಬ್ಯುಸಿಯಾ ಗಲಿದ್ದಾರೆ. ಯಾವ ವಾರ್ಡ್‌ನಲ್ಲಿ ಯಾವ ಮೀಸ ಲಾತಿ ಬರಲಿದೆ? ಆ ಮೀಸಲಾತಿ ಪ್ರಕಾರ ಯಾರಿಗೆ ಸೀಟು? ಅದರಲ್ಲಿ ಯಾರಿಗೆ ಗೆಲುವಾಗಬಹುದು? ಯಾರಿಗೆ ಯಾವ ಕ್ಷೇತ್ರದಲ್ಲಿ ಕಣ್ಣಿದೆ? ಹೀಗೆ ಒಂದೊಂದು ರೀತಿಯ ರಾಜಕೀಯ ಚರ್ಚೆಗೆ ಇದೀಗ ವೇದಿಕೆ ಸಿದ್ಧವಾಗುತ್ತಿದೆ. ಈ ಹಿಂದೆ ಬಂದ ಮೀಸ ಲಾತಿ ಪ್ರಕಾರ ಬಹುತೇಕ ಹಾಲಿ ಸದ ಸ್ಯರು ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಂಡಿದ್ದರು. ಅದರಲ್ಲಿಯೂ ಬಿಜೆಪಿಯ ಮಾಜಿ ಕಾರ್ಪೊರೇಟರ್‌ಗಳ ಪೈಕಿ ಬೆರಳೆಣಿಕೆ ಜನರಿಗೆ ಮಾತ್ರ ಅದೇ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೀಸಲಾತಿಯನ್ನು ಸರಕಾರ ಪ್ರಕಟಿಸಿತ್ತು. ಜತೆಗೆ ಈ ಬಾರಿ ಮಹಿಳಾ ಮೀಸಲಾತಿಗೆ ವಿಶೇಷ ಒತ್ತು ನೀಡುವ ಹಿನ್ನೆಲೆಯಲ್ಲಿ ಮಹಿಳಾ ರಾಜಕೀಯ ಪಾಲಿಕೆಯಲ್ಲಿ ಮತ್ತೆ ಜೋರಾಗಲಿದೆ.

Advertisement

ಚರ್ಚೆ ಶುರುವಾಗಿದೆ
ಗುರುವಾರ ಪ್ರಕಟವಾದ ಲೋಕಸಭಾ ಫಲಿ ತಾಂಶ ಸದ್ಯ ಚರ್ಚೆಗೆ ಇನ್ನಷ್ಟು ರೂಪ ಒದಗಿಸಿದೆ. ಕೇಂದ್ರದ ಅಧಿಕಾರದಿಂದಾಗಿ ಯಾರಿಗೆ ಲಾಭ? ನಷ್ಟ? ಎಂಬ ಲೆಕ್ಕಾಚಾರ ಆರಂಭವಾಗಿದೆ. ಜತೆಗೆ, ಲೋಕ ಸಭಾ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ದಲ್ಲಿಯೂ ರಾಜಕೀಯ ಸ್ಥಿತ್ಯಂತರಗಳು ಸಂಭ ವಿಸುವ ಸಾಧ್ಯತೆ ಇರುವುದರಿಂದ ಅದರಿಂದ ಯಾರಿಗೆ ಲಾಭ? ನಷ್ಟ? ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.

ಪಾಲಿಕೆಯ ಕಳೆದ ಆಡಳಿತ ಅವಧಿಯಲ್ಲಿ ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್‌ 35 ಸ್ಥಾನಗಳನ್ನು ಪಡೆದು ಸ್ವಷ್ಟ ಬಹುಮತ ಪಡೆದುಕೊಂಡಿತ್ತು. ಉಳಿದಂತೆ ಬಿಜೆಪಿ 20, ಜೆಡಿಎಸ್‌ 2, ಸಿಪಿಎಂ 1, ಪಕ್ಷೇತರ 1, ಎಸ್‌ಡಿಪಿಐ 1 ಸದಸ್ಯರನ್ನು ಹೊಂದಿತ್ತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 38, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ಪಾಲಿಕೆಯ ವಾರ್ಡ್‌ಗಳಿವೆ.

ಪಾಲಿಕೆ ಎದುರಿಸಿದ ಚುನಾವಣೆಗಳು
ನಗರಸಭೆಯಿಂದ ನಗರಪಾಲಿಕೆಯಾಗಿ ಮಂಗಳೂರು ವಿಸ್ತಾರಗೊಂಡು ಮೊದಲ ಚುನಾವಣೆ ನಡೆದು 1984ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಆ ಬಳಿಕ 1990ರಲ್ಲಿ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಧಿಕಾರ ಪಡೆದಿತ್ತು. 1995ರಿಂದ 1997ರವರೆಗೆ ಮಂಗಳೂರು ಪಾಲಿಕೆ ಆಡಳಿತ ಆಡಳಿತಾಧಿಕಾರಿ ಕೈಯಲ್ಲಿತ್ತು. 1997 ಚುನಾವಣೆಯಲ್ಲಿ ಪೂರ್ಣ ಬಹುಮತ ಯಾರಿಗೂ ಸಿಗದಿದ್ದಾಗ (ಬಿಜೆಪಿ 24, ಜೆಡಿಎಸ್‌ 6, ಕಾಂಗ್ರೆಸ್‌ 30)ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. 2002ರಲ್ಲಿ ಬಿಜೆಪಿ 12, ಕಾಂಗ್ರೆಸ್‌ 40 ಸ್ಥಾನ ಪಡೆದ ಕಾರಣದಿಂದ ಕಾಂಗ್ರೆಸ್‌ ಮತ್ತೆ ಅಧಿಕಾರ ಪಡೆದುಕೊಂಡಿತ್ತು. ಆದರೆ 2007ರಲ್ಲಿ ಬಿಜೆಪಿ ಇಲ್ಲಿ ಜಯಿಸಿತ್ತು. ಬಿಜೆಪಿಗೆ 35, ಕಾಂಗ್ರೆಸ್‌ಗೆ 20 ಸ್ಥಾನ ದೊರಕಿತ್ತು. ವಿಪರ್ಯಾಸವೆಂದರೆ, ಈ ಅವಧಿಯ ಕೊನೆಯ ವರ್ಷ ಬಹುಮತವಿದ್ದರೂ ಬಿಜೆಪಿಯ ಲೋಪದಿಂದಾಗಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ಲಭಿಸಿತ್ತು. ಆದರೆ, 2007ರಲ್ಲಿ ಬಿಜೆಪಿ ಕೈಯಲ್ಲಿದ್ದ ಪಾಲಿಕೆಯನ್ನು 2013ರಲ್ಲಿ ಕಾಂಗ್ರೆಸ್‌ ತನ್ನ ಕೈವಶ ಮಾಡಿಕೊಂಡಿತ್ತು.

ಕಾಂಗ್ರೆಸ್‌ ಯೋಚನೆಯೇನು?
ಪಾಲಿಕೆಯಲ್ಲಿ 5 ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳು, ಈ ಹಿಂದಿನ ಸರಕಾರ (ಮುಖ್ಯಮಂತ್ರಿ ಸಿದ್ದರಾಮಯ್ಯ)ಮಂಗಳೂರಿಗೆ ನೀಡಿದ ಯೋಜನೆ ಸಹಿ ತ ಇನ್ನಿತರ ವಿಚಾರಗಳನ್ನು ಮುಂದಿಟ್ಟು ಕಾಂಗ್ರೆಸ್‌ ಮತ್ತೆ ಮಂಗಳೂರಿನ ಜನರಲ್ಲಿ ಮತ ಕೇಳಲು ನಿರ್ಧರಿಸಿದೆ. ತಮ್ಮ ಅವಧಿಯಲ್ಲಿ ಆಗಿರುವ ಸಾಧನೆಯನ್ನು ಬಣ್ಣಿಸಿ ಮತ್ತೆ ಪಾಲಿಕೆ ಅಧಿಕಾರ ಪಡೆಯಲು ಕಾಂಗ್ರೆಸ್‌ ಚಿಂತನೆ ನಡೆಸಿದೆ. ಆದರೆ, ಬಿಜೆಪಿಯು ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ಘೋಷಣೆ ಸಹಿ ತ ಕೇಂದ್ರದಿಂದ ಮಂಗಳೂರಿಗೆ ದೊರೆತ ಯೋಜನೆಗಳನ್ನು ಜನರ ಮುಂದಿಡಲು ನಿರ್ಧರಿಸಿದೆ. ಜತೆಗೆ 5 ವರ್ಷಗಳಲ್ಲಿ ಪಾಲಿಕೆಯಲ್ಲಿ ಕಾಂಗ್ರೆಸ್‌ ದುರಾಡಳಿತ ನಡೆಸಿದೆ ಎಂದು ಆರೋಪಿಸಿ ಪಟ್ಟಿಮಾಡಿ ಜನತೆಯ ಮುಂದಿಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next