Advertisement

Mangaluru: ದೂರು ಕೊಡಲು ಬರುವವರ ಕಳ್ಳರಂತೆ ನೋಡುವ ಮನಃಸ್ಥಿತಿ ಬದಲಿಸಿಕೊಳ್ಳಿ: ಗೃಹಸಚಿವ

02:28 AM Dec 01, 2024 | Team Udayavani |

ಮಂಗಳೂರು: ಪೊಲೀಸ್‌ ಠಾಣೆಗಳು ಜನಸ್ನೇಹಿಯಾಗಿರಬೇಕು. ದೂರು ಕೊಡಲು ಬರುವವರನ್ನು ಕೂಡ ಕಳ್ಳರಂತೆ ನೋಡುವ ಮನಃಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಗೃಹಸಚಿವ ಡಾ| ಜಿ. ಪರಮೇಶ್ವರ್‌ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Advertisement

ಪೊಲೀಸ್‌ ಲೇನ್‌ನಲ್ಲಿ ಶನಿವಾರ ಮಂಗಳೂರು ನಗರ ಮತ್ತು ಬೆಳ್ಳಾರೆ ಪೊಲೀಸ್‌ ನೂತನ ವಸತಿ ಸಮುಚ್ಚಯಗಳ ಉದ್ಘಾಟನೆ ಮತ್ತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಹಾಗೂ ಪಾಣೆಮಂಗಳೂರು ಸಂಚಾರ ಪೊಲೀಸ್‌ ಠಾಣೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ ತಪ್ಪು ಮಾಡಿದವರನ್ನು ಬಿಡಬೇಡಿ. ಆದರೆ ತೊಂದರೆಗೊಳಗಾಗಿ ಠಾಣೆಗೆ ದೂರು ಕೊಡಲು ಬರುವವರನ್ನು ಸರಿಯಾಗಿ ನಡೆಸಿಕೊಳ್ಳಿ. ಸಾರ್ವಜನಿಕರನ್ನು ಉಪಚರಿಸಲು ಈ ಹಿಂದೆ 1 ಲ.ರೂ. ನೀಡಲಾಗುತ್ತಿತ್ತು. ಈಗ ನೀಡುತ್ತಿಲ್ಲ,. ಮತ್ತೆ ನೀಡಲಾಗುವುದು ಎಂದರು.

ದೇಶದಲ್ಲೇ ಉತ್ತಮ ಪೊಲೀಸ್‌ ವ್ಯವಸ್ಥೆ ನಮ್ಮ ರಾಜ್ಯದ್ದು. ಪೊಲೀಸರೂ ಸ್ಮಾರ್ಟ್‌ ಆಗಿದ್ದಾರೆ. ಅಧುನಿಕತೆಗೆ ಪೂರಕವಾಗಿ ಇಲಾಖೆಯೂ ಬದಲಾಗುತ್ತಿದ್ದು ಅಗತ್ಯ ಸೌಕರ್ಯ ಗಳನ್ನು ಕಲ್ಪಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ಬಳಸಿ ಅಪರಾಧಿಗಳನ್ನು ಪತ್ತೆ ಮಾಡುವ ಹಂತಕ್ಕೆ ಪೊಲೀಸ್‌ ಇಲಾಖೆ ತಲುಪಿದೆ ಎಂದರು.

ಕೋಮುವಾದಿ ಶಕ್ತಿ ನಿಗ್ರಹ
ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳು ಬೆಳೆಯದಂತೆ ನೋಡಿಕೊಳ್ಳ ಬೇಕಿದೆ. “ಆ್ಯಂಟಿ ಕಮ್ಯುನಲ್‌ ವಿಂಗ್‌’ನ ಪರಿಣಾಮ ಜಿಲ್ಲೆಯಲ್ಲಿ ಶೇ.50ರಷ್ಟು ಶಾಂತಿ ನೆಲೆಸಿದೆ. ಮಂಗಳೂರು ನಗರ ಕೂಡ ಮುಂಬಯಿಗೆ ಸಮಾನವಾಗಿ ಬೆಳೆಯಬೇಕು. ದ.ಕ. ಜಿಲ್ಲೆಯಲ್ಲಿ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ವಿಶೇಷ ಆರ್ಥಿಕ ವಲಯ ಮಾಡುವಂತೆ ಪ್ರಣಾ ಳಿಕೆಯಲ್ಲಿ ಉಲ್ಲೇಖೀಸಿದ್ದೆ ಎಂದರು.

ಮಹಿಳಾ ಠಾಣೆಗೆ ಕೋಟಿ ರೂ.
ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿ, ಪುತ್ತೂರಿನಲ್ಲಿ ಮಹಿಳಾ ಪೊಲೀಸ್‌ ಠಾಣೆಯ ಕಟ್ಟಡಕ್ಕೆ 9 ಸೆಂಟ್ಸ್‌ ಜಾಗ ಮೀಸಲಿಟ್ಟಿದ್ದು, ಅದಕ್ಕೆ ಅನುದಾನ ನೀಡಬೇಕು. ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಬೇಕು. ಡಿಎಆರ್‌ ಘಟಕಕ್ಕೂ ಜಾಗ ಮೀಸಲಿ ಟ್ಟಿದ್ದು, ಸ್ಥಳಾಂತರಿಸಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಗೃಹಸಚಿವರು ಮಹಿಳಾ ಠಾಣೆಗೆ “ಬಿ’ ಕೆಟಗರಿಯ ನೂತನ ಕಟ್ಟಡಕ್ಕೆ 1 ಕೋ.ರೂ. ಘೋಷಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸಲಾಗುವುದು. ಎಸ್‌ಪಿ ಕಚೇರಿ ಸ್ಥಳಾಂತರವಾದರೆ ಅನನುಕೂಲೆ ಎಂಬುದಾಗಿ ಪೊಲೀಸ್‌ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಸದ್ಯ ಸ್ಥಳಾಂತರಿಸಲಾಗದು ಎಂದರು.

Advertisement

ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಮಂಗಳೂರಿನಲ್ಲಿ ಡ್ರಗ್ಸ್‌ ಮತ್ತು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಪಶ್ಚಿಮ ವಲಯ ಡಿಐಜಿಪಿ ಅಮಿತ್‌ ಸಿಂಗ್‌, ಎಸ್‌ಪಿ ಯತೀಶ್‌ ಎನ್‌., ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್‌, ರವಿಶಂಕರ್‌, ಕೋಸ್ಟ್‌ಗಾರ್ಡ್‌ ಕಮಾಂಡರ್‌ ಎಂ.ಎ. ಅಗರ್ವಾಲ್‌ ಉಪಸ್ಥಿತರಿದ್ದರು. ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರ ವಂದಿಸಿದರು. ಕಾರ್ಯ ಕ್ರಮ ನಿರೂಪಿಸಿದ ಬಂಟ್ವಾಳ ನಗರ ಠಾಣೆಯ ಪೊಲೀಸ್‌ ಸಿಬಂದಿ ವಿವೇಕ ಕೆ. ಅವರನ್ನು ಗೃಹಸಚಿವರು ಪ್ರಶಂಸಿಸಿದರು.

ಎಲ್ಲ ಪೊಲೀಸರಿಗೂ ವಸತಿ ಉದ್ದೇಶ
ಮಳೆ, ಚಳಿ, ಬಿಸಿಲೆನ್ನದೆ ದುಡಿಯುತ್ತಿರುವ ಪೊಲೀಸರನ್ನು ಗುರುತಿಸಬೇಕು. 2015 ರಲ್ಲಿ ಮೊದಲ ಬಾರಿ ಗೃಹ ಸಚಿವನಾಗಿದ್ದಾಗ ಪೊಲೀಸರ ವಸತಿ ಪರಿಸ್ಥಿತಿ ಯನ್ನು ಕಂಡಿದ್ದೆ. ಕೂಡಲೇ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿ “ಪೊಲೀಸ್‌ ಗೃಹ’ ಕಾರ್ಯಕ್ರಮ ಜಾರಿಗೆ ತಂದಿದ್ದೆವು. ಇದುವರೆಗೆ ಶೇ.45ರಷ್ಟು ಮಂದಿಗೆ ವಸತಿ ಒದಗಿಸಿದ್ದು, ಈ ಬಾರಿ 1,600 ಮನೆ ನಿರ್ಮಿಸಿದ್ದೇವೆ. ಮುಂದಿನ ವರ್ಷ 500ರಿಂದ 1,000 ಕೋ.ರೂ. ಒದಗಿಸಲಿದ್ದು, ಕೇಂದ್ರ ಸರಕಾರಕ್ಕೆ 5,000 ಕೋ.ರೂ. ಕೋರಲಾಗಿದೆ ಎಂದರು ಡಾ. ಜಿ. ಪರಮೇಶ್ವರ್‌.

ಡ್ರಗ್ಸ್‌ ತಡೆಗೆ ಕಠಿನ ಕ್ರಮ
ಪೊಲೀಸರು ಪ್ರತಿ ತಿಂಗಳು ಕಡ್ಡಾಯವಾಗಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಡ್ರಗ್ಸ್‌ ಕುರಿತು ಮಾಹಿತಿ ಪಡೆದು, ಕ್ರಮ ಕೈಗೊಳ್ಳಬೇಕು. ಯಾವುದೇ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್‌ ದಂಧೆ ನಡೆದರೆ ಅದಕ್ಕೆ ಆ ವ್ಯಾಪ್ತಿಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಡ್ರಗ್ಸ್‌ ನಿಯಂತ್ರಣಕ್ಕೆ ಪೊಲೀಸರು ಕೈಗೊಳ್ಳುವ ಕ್ರಮಕ್ಕೆ ಬೆಂಬಲ ನೀಡಲಾಗುವುದು. ಒಂದು ವರ್ಷದಲ್ಲಿ ಸುಮಾರು 250 ಕೋ.ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿ ನಾಶಪಡಿಸಿದ್ದು, ಪೆಡ್ಲರ್‌ಗಳ ಮೇಲೆ ಗೂಂಡಾ ಕಾಯಿದೆ ಹಾಕಲಾಗಿದೆ ಎಂದು ಡಾ| ಪರಮೇಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next