Advertisement

ಹಸಿ ಗೇರು ಬೀಜ ಬೇಡಿಕೆಯಷ್ಟು ಪೂರೈಕೆ ಇಲ್ಲ

10:08 AM Apr 06, 2019 | Naveen |

ಮಹಾನಗರ : ಚಾಂದ್ರಮಾನ ಯುಗಾದಿ ಹಿನ್ನೆಲೆಯಲ್ಲಿ ನಗರದ
ಮಾರುಕಟ್ಟೆಯಲ್ಲಿ ಈ ಹಿಂದಿನಂತೆ ಹೆಚ್ಚಿನ ಲವ ಲವಿಕೆ ಕಂಡು ಬರುತ್ತಿಲ್ಲ. ಈ ವರ್ಷ ಮಾರುಕಟ್ಟೆಯಲ್ಲಿ ಹಸಿ ಗೇರು ಬೀಜದ ತೀವ್ರ ಅಭಾವ ಕಂಡು ಬಂದಿದೆ. ಇದರ ಬೆಲೆ ಕೆ.ಜಿ. ಗೆ 250 ರೂ. ಗಳಷ್ಟಿದೆ. ಬೇಡಿಕೆ ಜಾಸ್ತಿ ಇದ್ದು ಪೂರೈಕೆ ಕಡಿಮೆ ಇದೆ.

Advertisement

ಹಸಿ ಗೇರು ಬೀಜವನ್ನು ಮರದಿಂದ ಕೊಯ್ದು, ಅದನ್ನು ಕತ್ತರಿಸಿ ಬೀಜ ಮತ್ತು ಸಿಪ್ಪೆಯನ್ನು ಬೇರ್ಪಡಿಸುವ ಕೆಲಸ ಬಹಳಷ್ಟು ತ್ರಾಸದಾಯಕವಾಗಿದ್ದು, ಇಂತಹ ಕೆಲಸ ಮಾಡುವವರು ಈಗ ಕಡಿಮೆ; ಗೇರು ಮರ ಹೊಂದಿದವರು ಮಾಡುವುದಿಲ್ಲ; ಮಾಡಿಸಲು ಕೂಲಿ ಆಳುಗಳು ಸಿಗುವುದಿಲ್ಲ; ಹಾಗಾಗಿ ಮಾರುಕಟ್ಟೆಗೆ ಹಸಿ ಗೇರು ಬೀಜ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗಿಲ್ಲ ಎಂದು ವರ್ತಕರು ಹೇಳುತ್ತಾರೆ.

ಯುಗಾದಿ ಆಚರಣೆಯ ಭೋಜನದಲ್ಲಿ ತೊಂಡೆ ಕಾಯಿ ಮತ್ತು ಹಸಿ ಗೇರು ಬೀಜ ಪಲ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಚಾಂದ್ರಮಾನ ಯುಗಾದಿ ಆಚರಿಸುವ ಬಹುತೇಕ ಮಂದಿ ಈ ಪಲ್ಯವನ್ನು ತಯಾರಿಸುತ್ತಾರೆ. ಈ ವರ್ಷ ಊರಿನ ತೊಂಡೆ ಕಾಯಿಗೆ ಕೊರತೆ ಇಲ್ಲ; ಅದು ಸಾಕಷ್ಟು ಲಭ್ಯದ್ದು, ಬೆಲೆ ಕೈಗೆಟಕುವ (ರೂ. 50) ದರದಲ್ಲಿದೆ. ಆದರೆ ಹಸಿ ಗೇರು ಬೀಜದ್ದೇ ಅಭಾವ ಎನ್ನುತ್ತಾರೆ ಮಂಗಳೂರಿನ ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್‌
ಡಿ’ಸೋಜಾ ವಾಮಂಜೂರು.

ದೀವಿ ಹಲಸು ಧಾರಾಳ
ಪೋಡಿ ತಯಾರಿಸಲು ಬೇಕಾದ ದೀವಿ ಹಲಸು ಧಾರಾಳವಾಗಿ ಪೂರೈಕೆ (ಬೆಲೆ 100 ರೂ.) ಆಗುತ್ತಿದೆ. ಅಲಸಂಡೆ ಕೂಡ ಸಾಕಷ್ಟಿದೆ. ಈಗ ಹಬ್ಬ ಆಚರಣೆಗೆ ಬೇಕಾದ ಇಂತಹ ತರಕಾರಿಗಳನ್ನು 2-
3 ದಿನ ಮುಂಚಿತವಾಗಿ ಖರೀದಿಸಿ ಕೊಂಡೊಯ್ಯುತ್ತಾರೆ. ಹಾಗಾಗಿ ಹಬ್ಬದ ಮುಂಚಿನ ದಿನ ಖರೀದಿಯ ಭರಾಟೆ ಕಂಡು ಬರುತ್ತಿಲ್ಲ ಎನ್ನುತ್ತಾರೆ ಅವರು. ಯುಗಾದಿ ಆಚರಣೆಯ ಇನ್ನೊಂದು ಸಿಹಿ ಖಾದ್ಯ ಕಡ್ಲೆ ಬೇಳೆ ಪಾಯಸ. ಇದರ ತಯಾರಿಗೆ ಬೇಕಾದ ವಸ್ತುಗಳೆಲ್ಲವೂ ಮಾರಕಟ್ಟೆಯಲ್ಲಿ ಲಭ್ಯವಿದ್ದು, ಯಾವುದೇ ಕೊರತೆ ಇಲ್ಲ.

ಕಾಟು ಮಾವು ದುಬಾರಿ
ಸಿಹಿ ಮಾವಿನ ಹಣ್ಣಿನ ಉಪ್ಪು ಕರಿ ಯುಗಾದಿ ಹಬ್ಬದ ವೈಶಿಷ್ಟ್ಯ . ಆದರೆ ಈ ವರ್ಷ ಅದಕ್ಕೆ ಬೇಕಾದ ಕಾಟು ಮಾವಿನ ಹಣ್ಣಿನ ಲಭ್ಯತೆ ಕಡಿಮೆಯಾಗಿದೆ. ಲಭ್ಯವಿದ್ದರೂ ಸ್ವಲ್ಪ ದುಬಾರಿಯಾಗಿದೆ. ಮಂಗಳೂರಿನ ಮಾರ್ಕೆಟ್‌ನಲ್ಲಿ ಅದರ ಬೆಲೆ 100ರಿಂದ 150 ರೂ. ನಷ್ಟಿದೆ. ಈಗ ಕಾಟು ಮಾವಿನ ಹಣ್ಣು ಸಾಕಷ್ಟು ಲಭ್ಯವಿಲ್ಲದ ಕಾರಣ ಇತರ ಮಾವಿನ ಹಣ್ಣುಗಳನ್ನು ಬಳಕೆ ಮಾಡುತ್ತಾರೆ. ಇತರ ಜಾತಿಯ ವಿವಿಧ ಮಾವಿನ ಹಣ್ಣುಗಳು ವಿಪುಲವಾಗಿ ಲಭ್ಯವಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next