ಮಂಗಳೂರು: ಗೋವಾದಿಂದ ಮಂಗಳೂರು ಮತ್ತು ಕೇರಳಕ್ಕೆ ಅಕ್ರಮವಾಗಿ ಕೊಕೇನ್ ಸಾಗಾಟದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಆರೋಪಿಗಳು ಸದಕತ್ ಯು ಅಲಿಯಾಸ್ ಶಾನ್ ನವಾಜ್ (31) ಮತ್ತು ಮೊಹಮ್ಮದ್ ಅಶ್ಫಾಕ್ ಅಲಿಯಾಸ್ ಅಶ್ಪಾ (25) ಎನ್ನುವವರಾಗಿದ್ದಾರೆ. ಇಬ್ಬರನ್ನು ಉಳ್ಳಾಲದ ಅಂಬ್ಲಮೊಗರು ಗ್ರಾಮದ ಎಲಿಯಾರ್‌ಪದವು ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಕೇನ್ ಅಕ್ರಮ ಮಾರಾಟ ಮತ್ತು ಸಾಗಣೆಯ ಬಗ್ಗೆ ಖಚಿತವಾದ ಗುಪ್ತಚರ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಗಳ ಬಳಿ 2,72,00,000 ರೂ. ಮೌಲ್ಯದ 35 ಗ್ರಾಂ ಕೊಕೇನ್, ಸ್ಕೂಟರ್, ಮೂರು ಮೊಬೈಲ್ ಫೋನ್, ಡಿಜಿಟಲ್ ತೂಕದ ಮಾಪಕ, 5,560 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಕೊಕೇನ್ ಸಂಗ್ರಹಣೆ ಮತ್ತು ವಿತರಣೆಯಲ್ಲಿ ತೊಡಗಿರುವ ದೊಡ್ಡ ಜಾಲದ ಭಾಗವಾಗಿದ್ದರು. ಗೋವಾದಿಂದ ಕೊಕೇನ್ ಖರೀದಿಸಿ ಕರ್ನಾಟಕ ಮತ್ತು ಕೇರಳದಲ್ಲಿ ಅಕ್ರಮ ಲಾಭ ಗಳಿಸಲು ಮಾರಾಟ ಮಾಡುತ್ತಿದ್ದರು. ಸದಕತ್ ಯು ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಲದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.