Advertisement

ಮಂಗಳೂರು ವಿಮಾನ ದುರಂತಕ್ಕೆ 13 ವರ್ಷ: ಪರಿಹಾರಕ್ಕಾಗಿ ಈಗಲೂ ಹೋರಾಟ

12:11 AM May 21, 2023 | Team Udayavani |

ಮಂಗಳೂರು: ದೇಶವನ್ನೇ ತಲ್ಲಣಗೊಳಿಸಿದ ಮಂಗಳೂರು ವಿಮಾನ ದುರಂತ ಸಂಭವಿಸಿ ಇದೀಗ 13 ವರ್ಷ ತುಂಬುತ್ತಿದೆ.

Advertisement

2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬಾೖಯಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಲ್ಯಾಂಡ್‌ ಆಗುವ ಹಂತದಲ್ಲಿ ನಿರ್ದಿಷ್ಟ ಮಿತಿಗಿಂತ ಸ್ವಲ್ಪ ಮೀಟರ್‌ ದೂರದಲ್ಲಿ ಇಳಿದ ಕಾರಣ ಹತೋಟಿ ತಪ್ಪಿ ಕೆಂಜಾರಿನ ಗುಡ್ಡದಿಂದ ಕೆಳ ಜಾರಿತ್ತು. ಅಗ್ನಿ ಆವರಿಸಿ ಅದರಲ್ಲಿದ್ದ 158 ಮಂದಿ ಮೃತಪಟ್ಟಿದ್ದರು. 8 ಮಂದಿಯಷ್ಟೇ ಬದುಕುಳಿದಿದ್ದರು.

ಊರಿಗೆ ಮರಳುವ ಖುಷಿಯಲ್ಲಿ ವಿಮಾನದಲ್ಲಿ ಬಂದು ಇನ್ನೇನು ಇಳಿಯಲು ಸಿದ್ಧತೆ ನಡೆಸುತ್ತಿದ್ದವರು, ನಸು ನಿದ್ದೆಯಲ್ಲಿದ್ದವರು ಭೀಕರ ಅಗ್ನಿಯಲ್ಲಿ ಸುಟ್ಟು ಕರಕಲಾದದ್ದು ಎಂದಿಗೂ ಮರೆಯಲಾಗದ್ದು.

ಈ ಬಗ್ಗೆ ಪರಿಹಾರ ಒದಗಿಸುವುದಕ್ಕಾಗಿ ಕಂಪನಿ ಮುಂಬೈನ ಕಾನೂನು ತಜ್ಞ ಎಚ್‌.ಡಿ. ನಾನಾವತಿ ಅವರ ನೇತೃತ್ವದ ಮುಲ್ಲ ಆ್ಯಂಡ್‌ ಮುಲ್ಲ ಸಂಸ್ಥೆಯನ್ನು ನೇಮಿಸಿತ್ತು. ಈ ಸಂಸ್ಥೆ ಸುಮಾರು 147 ಕುಟುಂಬಗಳಿಗೆ ಪರಿಹಾರ ಒದಗಿಸಿರುವುದಾಗಿ ಹೇಳಿಕೊಂಡಿತ್ತು. ಇದರಲ್ಲಿ ಗರಿಷ್ಠ ಎಂದರೆ 7.7 ಕೋಟಿ ರೂ. ಪಡೆದವರೂ ಇದ್ದರು. ಆದರೆ ಈ ಪರಿಹಾರವನ್ನು ಮೃತಪಟ್ಟವರ ಆರ್ಥಿಕ ಆದಾಯ, ಅವರ ವಯಸ್ಸು ಇದೆಲ್ಲವನ್ನೂ ಲೆಕ್ಕ ಹಾಕಿ ನೀಡಲಾಗಿತ್ತು.

ಪರಿಹಾರಕ್ಕಾಗಿ ಈಗಲೂ ಹೋರಾಟ
ಆದರೆ ಪರಿಹಾರದ ಮೊತ್ತದ ಬಗ್ಗೆ ಅನೇಕ ಕುಟುಂಬದವರು ಆಕ್ಷೇಪವೆತ್ತಿದ್ದರು. ವಾಯು ಅಪಘಾತದ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದವಾದ “ಮೋಂಟ್ರಿಯಲ್‌ ಕನ್ವೆನÒನ್‌’ ಪ್ರಕಾರ ಆಗಿನ ಲೆಕ್ಕಾಚಾರದಂತೆ 75 ಲಕ್ಷ ರೂ.ನಷ್ಟು ಮೊತ್ತವನ್ನು ಮೊದಲ ಹಂತದಲ್ಲಿ ಎಲ್ಲ ಸಂತ್ರಸ್ತ ಕುಟುಂಬದವರಿಗೂ ನೀಡಬೇಕು ಎಂದು ಕುಟುಂಬ
ದವರು ಕೇರಳದಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದರು. ಇದು ಸುಪ್ರೀಂ ಕೋರ್ಟ್‌ ವರೆಗೂ ತಲಪಿತು. ಇನ್ನೂ ಸುಮಾರು 45 ಕುಟುಂಬದವರು ಕಾನೂನು ಹೋರಾಟದಲ್ಲೇ ಇದ್ದಾರೆ. ಈ ನಡುವೆ ಏರ್‌ಇಂಡಿಯಾವನ್ನು ಟಾಟಾ ಸಮೂಹ ಖರೀದಿಸಿದ್ದು, ಮಾಲಕತ್ವ ಬದಲಾಗಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ, ಹಾಗಾಗಿ ಪರಿಹಾರದ ಅರ್ಜಿಗಳನ್ನು ರದ್ದುಪಡಿಸುವಂತೆ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

Advertisement

ಇಂದು ಶ್ರದ್ಧಾಂಜಲಿ
ಬಜಪೆ ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್‌ ನಿರ್ಮಿಸಲಾಗಿದೆ. ಮೇ 22ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಡಳಿತ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next