ಮಂಗಳೂರು: ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೋರ್ವರಿಂದ 50 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ಅ.11ರಂದು ಅಪರಾಹ್ನ ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ಅತನನ್ನು ಮಹಾರಾಷ್ಟ್ರದ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ವಿನಯ ಕುಮಾರ ಎಂದು ಪರಿಚಯಿಸಿಕೊಂಡಿದ್ದ. ಕಿರುಕುಳದ ಬಗ್ಗೆ ನಿಮ್ಮ ಮೇಲೆ ದೂರು ದಾಖಲಾಗಿದ್ದು ಠಾಣೆಗೆ ಬರಬೇಕು ಎಂದು ತಿಳಿಸಿದ. ಆಗ ದೂರುದಾರರು ತಾನು ಠಾಣೆಗೆ ಬರುವುದಿಲ್ಲ ಎಂದಾಗ, ಮೇಲಧಿಕಾರಿಗಳು ಕರೆ ಮಾಡುತ್ತಾರೆ ಎಂದ. ಬಳಿಕ ಆಕಾಶ ಕುಲ್ಲಹಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ತಾನು ಸಿಬಿಐನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ. ನರೇಶ್ ಗೋಯೆಲ್ ಎಂಬವರ ಮನೆಯನ್ನು ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ.
ಅದರಲ್ಲಿ 20 ಜನರು ಒಟ್ಟು 2 ಕೋ.ರೂ.ಗಳನ್ನು ನಿಮ್ಮ ಮುಂಬಯಿಯ ಖಾತೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆ ಬಗ್ಗೆ ಮನಿ ಲ್ಯಾಂಡರಿಂಗ್ ಪ್ರಕರಣ ಕೂಡ ನಿಮ್ಮ ಮೇಲೆ ದಾಖಲಾಗಿದೆ. ಹಾಗಾಗಿ ಸಿಬಿಐನವರು ಬಂಧಿಸುತ್ತಾರೆ. ನಿಮ್ಮ ದಾಖಲಾತಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಬೇಕು. ನಿಮಗೆ ಬರಲು ಅಸಾಧ್ಯವಾದರೆ ನಾನೇ ಆನ್‌ಲೈನ್ ಮೂಲಕ ತನಿಖೆ ಮಾಡುತ್ತೇನೆ ಎಂದು ದೂರುದಾರರಿಗೆ ಹೇಳಿದ.
ಮರುದಿನ ಮತ್ತೆ ಕರೆ ಮಾಡಿದ ಆಕಾಶ ಕುಲ್ಲಹಾರಿ ಬ್ಯಾಂಕ್ ಖಾತೆ ವಿವರಗಳನ್ನು ಕೇಳಿದ. ದೂರುದಾರರು ಎಲ್ಲ ವಿವರಗಳನ್ನು ನೀಡಿದ್ದರು. ಆಗ ಕರೆ ಮಾಡಿ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣವನ್ನು ಆರ್‌ಬಿಐಗೆ ವರ್ಗಾಯಿಸಬೇಕಾಗಿದೆ. ಆದರೆ ಆ ರೀತಿ ವರ್ಗಾಯಿಸಿದರೆ ನಿಮ್ಮ ಮೇಲೆ ಸಂದೇಹ ಬರುತ್ತದೆ. ಹಾಗಾಗಿ ಶಿವಾನಿ ಎಂಟರ್‌ಪ್ರೈಸಸ್‌ನ ಖಾತೆಗೆ ವರ್ಗಾವಣೆ ಮಾಡಿ ಎಂದು ಬ್ಯಾಂಕ್ ಖಾತೆ ಸಂಖ್ಯೆ ನೀಡಿದ.
ದೂರುದಾರರು ಅ. 19ರಂದು ಅವರ ಖಾತೆಯಿಂದ 50 ಲಕ್ಷ ರೂ. ಹಣವನ್ನು ಆಕಾಶ ಕುಲ್ಲಹಾರಿ ನೀಡಿದ ಖಾತೆಗೆ ವರ್ಗಾವಣೆ ಮಾಡಿದ್ದರು. ಹಣ ವರ್ಗಾವಣೆಯ ರಶೀದಿಯನ್ನು ದೂರುದಾರರು ಆಕಾಶ ಕಲ್ಲಹಾರಿಗೆ ವಾಟ್ಸ್‌ಆ್ಯಪ್‌ಮೂಲಕ ಕಳುಹಿಸಿದ್ದರು. ಆಗ ನಿಮ್ಮ ಹಣವನ್ನು ಮೂರು ದಿನಗಳ ಅನಂತರ ಮರುಪಾವತಿ ಮಾಡುತ್ತೇನೆಂದು ತಿಳಿಸಿದ.
ಅ. 23ರಂದು ದೂರುದಾರರು ಆಕಾಶ ಕುಲ್ಲಹಾರಿಗೆ ಕರೆ ಮಾಡಿ ಹಣದ ಬಗ್ಗೆ ವಿಚಾರಿಸಿದಾಗ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇನೆ. ಆದರೆ ನೀವು ಬೇರೊಂದು ಬ್ಯಾಂಕ್ ಖಾತೆಗೆ ಕೆಲವು ಮೊತ್ತವನ್ನು ವರ್ಗಾವಣೆ ಮಾಡಬೇಕೆಂದು ತಿಳಿಸಿದ. ಆ ಸಂದರ್ಭದಲ್ಲಿ ದೂರುದಾರರಿಗೆ ಸಂದೇಹ ಉಂಟಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.