Advertisement

‘ಡ್ಯಾಡಿ ಇಲ್ಲಿಯೇ ಇದ್ದುಬಿಡು’ಎಂದ ಮಗುವೇ ಈಗಿಲ್ಲ !

04:30 AM Jun 01, 2018 | Team Udayavani |

ಮಂಗಳೂರು: ಶಕ್ತಿನಗರದ ಅಪಾರ್ಟ್‌ಮೆಂಟ್‌ ನ 8ನೇ ಮಹಡಿಯಿಂದ ಕೆಳಗೆ ಬಿದ್ದು ಐದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬುಧ ವಾರ ಸಂಭವಿಸಿದೆ. ಶಕ್ತಿನಗರದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ ‘ಕ್ಲಾಸಿಕ್‌ ಸಫಾಯರ್‌’ ಹೆಸರಿನ ಅಪಾರ್ಟ್‌ ಮೆಂಟ್‌ ನ 8ನೇ ಮಹಡಿಯ ಫ್ಲ್ಯಾಟ್‌ ನಲ್ಲಿ ಬಾಡಿಗೆಗೆ ವಾಸವಾಗಿದ್ದ ವಿಲ್ಸನ್‌ ಸೆಬಾಸ್ಟಿಯನ್‌ ಡಿ’ಸೋಜಾ ಮತ್ತು ಅಲಿಶಾ ಡಿ’ಸೋಜಾ ದಂಪತಿಯ ಏಕೈಕ ಪುತ್ರಿ ಶಾನೆಲ್‌ ಜೆನಿಶಿಯಾ ಡಿ’ಸೋಜಾ ಮೃತ ಬಾಲಕಿ. ಮನೆಗೆ ಸರಿಯಾದ ಸುರಕ್ಷತಾ ಕ್ರಮಗಳನ್ನು ಅಳವಡಿಸದ ಕಾರಣ ಮಗು ವರಾಂಡದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Advertisement

ಅಮ್ಮನನ್ನು ಅರಸುತ್ತ …
ವಿಲ್ಸನ್‌ ಸೆಬಾಸ್ಟಿಯನ್‌ ದುಬಾೖಯಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಅಲಿಶಾ ಮತ್ತು ಪುತ್ರಿ ಶಾನೆಲ್‌ ಜೆನಿಶಿಯಾ ಈ ಫ್ಲ್ಯಾಟ್‌ ನಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ 8.45ರ ವೇಳೆಗೆ ಶಾನೆಲ್‌ ಮಲಗಿದ್ದಾಗ ಅಲಿಶಾ ಉಪಾಹಾರಕ್ಕಾಗಿ ತಿಂಡಿ ತರ‌ಲು ಸಮೀಪದ ಹೊಟೇಲ್‌ಗೆ ತೆರಳಿದ್ದರು. ಇದೇ ವೇಳೆ ಶಾನೆಲ್‌ ಗೆ ಎಚ್ಚರವಾಗಿದ್ದು, ತಾಯಿಯನ್ನು ಕಾಣದೆ ವರಾಂಡದ ಗ್ರಿಲ್ಸ್‌ನ ಮೇಲೆ ಹತ್ತಿ Slider ಕಿಟಿಕಿಯ ಮೂಲಕ ಹೊರಗೆ ಇಣುಕಿದಳು. ಅಷ್ಟರಲ್ಲಿ ಆಯತಪ್ಪಿ ನೇರವಾಗಿ 2ನೇ ಅಂತಸ್ತಿನಲ್ಲಿರುವ ಖಾಲಿ ವರಾಂಡದ ಮೇಲೆ ಬಿದ್ದ ಪರಿಣಾಮ ತಲೆಗೆ ಮತ್ತು ಎದೆಯ ಭಾಗಕ್ಕೆ ತೀವ್ರ ಗಾಯಗಳಾದವು. ಬಿದ್ದ ಶಬ್ದ ಕೇಳಿದ ಎರಡನೇ ಮಹಡಿಯ ನಿವಾಸಿ, ವಿದ್ಯಾರ್ಥಿ ನಾಸಿರ್‌ ಅವರು ಮಗುವನ್ನು ಎತ್ತಿಕೊಂಡು ಅಕ್ಕಪಕ್ಕದವರ ಸಹಾಯದಿಂದ ಕೂಡಲೇ ಖಾಸಗಿ ಆಸ್ಪತ್ರೆಗೆ ಧಾವಿಸಿದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಬುಧವಾರ ಸಂಜೆ 5ರ ವೇಳೆಗೆ ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿ ಫ್ಲ್ಯಾಟ್‌ ನ ಮಾಲಕಿ ವೀಣಾ ಎಲಿಸಾ ಸಲ್ದಾನ್ಹಾ ಹಾಗೂ ಅದರ ಪವರ್‌ ಆಫ್‌ ಅಟಾರ್ನಿ (ಜಿ.ಪಿ.ಎ.) ಹೊಂದಿರುವ ವಲೇರಿಯನ್‌ ಮೊಂತೇರೊ ಅವರ ವಿರುದ್ಧ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ. ಫ್ಲ್ಯಾಟ್‌ ಮಾಲಕರು ಫ್ಲ್ಯಾಟ್‌ ಅನ್ನು ಬಾಡಿಗೆಗೆ ನೀಡುವಾಗ ಬೆಡ್‌ ರೂಂನ ವರಾಂಡದ ಕಿಟಿಕಿಗೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ಸರಳುಗಳನ್ನು ಅಳವಡಿಸದೆ ನಿರ್ಲಕ್ಷ್ಯ ತೋರಿರುವುದು ಈ ಘಟನೆಗೆ ಕಾರಣ ಎಂದು ಪೊಲೀಸರು ದೂರಿನಲ್ಲಿ ವಿವರಿಸಿದ್ದಾರೆ.


ವಿಲ್ಸನ್‌ ಸೆಬಾಸ್ಟಿಯನ್‌ ಅವರು ಮೂಲತಃ ನಗರದ ಪಡೀಲ್‌ ನಿವಾಸಿ. 13 ವರ್ಷಗಳಿಂದ ದುಬಾೖಯ ಯುಎಇ ಎಕ್ಸ್‌ಚೇಂಜ್‌ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, 2010ರ ಅಕ್ಟೋಬರ್‌ 10ರಂದು ಅಲಿಶಾ ಜತೆ ವಿವಾಹವಾಗಿದ್ದರು. 2012ರ ಡಿ. 12ರಂದು ದಂಪತಿಗೆ ಮಗುವಾಗಿತ್ತು. 2017ರ ಡಿಸೆಂಬರ್‌ನಲ್ಲಿ ಪುತ್ರಿ ಶಾನೆಲ್‌ ಜೆನಿಶಿಯಾಳ 5ನೇ ಜನ್ಮದಿನ ಆಚರಿಸಲಾಗಿತ್ತು. ಈ ಸಮಾರಂಭಕ್ಕಾಗಿಯೇ ವಿಲ್ಸನ್‌ ಅವರು ಡಿ. 23ರಂದು ದುಬಾೖಯಿಂದ ಊರಿಗೆ ಬಂದಿದ್ದು, 2018ರ ಜನವರಿ 3ರಂದು ಹಿಂದಿರುಗಿದ್ದರು. ಘಟನೆ ಮಾಹಿತಿ ಅರಿತ ವಿಲ್ಸನ್‌ ಅವರು ಬುಧವಾರ ಮಧ್ಯಾಹ್ನವೇ ದುಬಾೖಯಿಂದ ಹೊರಟು ಮಂಗಳೂರಿಗೆ ತಲುಪುವಷ್ಟರಲ್ಲಿ ಪುತ್ರಿ ಸಾವನ್ನಪ್ಪಿದ್ದಳು.

ಪಡೀಲ್‌ನಲ್ಲಿ ತಾಯಿ ಮತ್ತು ಮಗು ಇಬ್ಬರೇ ವಾಸವಾಗಿದ್ದು, ಪುತ್ರಿಗೆ ಎರಡು ವರ್ಷಗಳಾದ ಬಳಿಕ ವಿಲ್ಸನ್‌ ಅವರು ಇಬ್ಬರನ್ನೂ ದುಬಾೖಗೆ ಕರೆಸಿಕೊಂಡಿದ್ದರು. ಒಂದು ವರ್ಷ ಅಲ್ಲಿದ್ದ ಅಲಿಶಾ ಪುತ್ರಿ ಜತೆಗೆ ಊರಿಗೆ ಮರಳಿದ್ದರು. ಸುಸಜ್ಜಿತ ವ್ಯವಸ್ಥೆ ಇದೆ ಎಂಬ ಕಾರಣಕ್ಕಾಗಿ ಶಕ್ತಿನಗರದ ಈ ಫ್ಲ್ಯಾಟ್‌ ನಲ್ಲಿ ವಾಸವಾಗಿದ್ದರು ಎನ್ನುತ್ತಾರೆ ಅವರ ಸಂಬಂಧಿ ಹೆನ್ರಿ ಡಿ’ಸೋಜಾ. ಮೇ 29ರಂದು ನಗರದಲ್ಲಿ ಧಾರಾಕಾರ ಮಳೆ ಬಂದ ಹಿನ್ನೆಲೆಯಲ್ಲಿ ಅಲಿಶಾ ಅವರು ಮನೆಯಿಂದ ಹೊರಬಂದಿರಲಿಲ್ಲ. ಹಾಗಾಗಿ ಪುತ್ರಿ ಏಳುವಷ್ಟರಲ್ಲಿ ತಿಂಡಿ ತಂದು ಬಿಡುವ ಎಂದು ಫ್ಲ್ಯಾಟ್‌ ಕೆಳಗಿರುವ ಹೊಟೇಲ್‌ ಗೆ ತೆರಳಿದ್ದರು ಎಂದವರು ತಿಳಿಸಿದರು.

ಡ್ಯಾಡಿ ಇಲ್ಲಿಯೇ ಇದ್ದು ಬಿಡು!
ಡ್ಯಾಡಿ, ನೀನು ವಿದೇಶಕ್ಕೆ ಹೋಗುವುದು ಬೇಡ. ಮಮ್ಮಿ ಜತೆ ಇಲ್ಲಿಯೇ ಇರೋಣ ಎಂದು ತಾನು ಇತ್ತೀಚೆಗೆ ಊರಿಗೆ ಬಂದಾಗಲೆಲ್ಲ ಹೇಳುತ್ತಿದ್ದಳು ಎಂದು ವಿಲ್ಸನ್‌ ಪುತ್ರಿಯ ಮಾತುಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆೆ.

Advertisement

ಮಳೆ ಬರುತ್ತದೆ, ಹುಷಾರ್‌
‘ಮಂಗಳವಾರ ರಾತ್ರಿ 11.30ಕ್ಕೆ ನಾನು ಪತ್ನಿ ಅಲಿಶಾಗೆ ಫೋನ್‌ ಮಾಡಿದ್ದೆ. ಮಲಗಿದ್ದ ಆಕೆ ಎದ್ದು ಹೊರಗೆ ಮಳೆ ಸುರಿಯುತ್ತಿರುವುದರ ಬಗ್ಗೆ ವಿವರಿಸಿದ್ದಳು. ವೀಡಿಯೋ ಕಾಲ್‌ ಮಾಡಿದ್ದರಿಂದ ಶಾನೆಲ್‌ ಮಲಗಿದ್ದನ್ನು ಕಂಡದ್ದೇ ಕೊನೆ. ಮಳೆಯ ಕಾರಣ ಮಗುವನ್ನು ಹೊರಗೆಲ್ಲೂ ಕರೆದೊಯ್ಯಬೇಡ, ಜಾಗ್ರತೆ’ ಎಂದು ಹೇಳಿದ್ದೆ ಎಂದು ವಿಲ್ಸನ್‌ ವಿವರಿಸಿದಾಗ ದುಃಖ ತಡೆದುಕೊಳ್ಳಲಾಗುತ್ತಿರಲಿಲ್ಲ.

ಇನ್ನು ಯುಕೆಜಿ
ಶಾನೆಲ್‌ ಜೆನಿಶಿಯಾ ಶಕ್ತಿನಗರದ ಹೀರಾ ಇಂಟರ್‌ ನ್ಯಾಶನಲ್‌ ಸ್ಕೂಲ್‌ನಲ್ಲಿ ಎಲ್‌ಕೆಜಿ ತರಗತಿ ಮುಗಿಸಿದ್ದು, ಇನ್ನು ಯುಕೆಜಿ ತರಗತಿಗೆ ಹೋಗುವ‌ಳಿದ್ದಳು. ಜೂ. 4ರಂದು ತರಗತಿ ಆರಂಭವಾಗಲಿದ್ದು, ಶುಲ್ಕ ಪಾವತಿಯೂ ಆಗಿತ್ತು.

ಪಾಲಿಕೆಗೆ ಸುರಕ್ಷತೆ ಜವಾಬ್ದಾರಿ ಇಲ್ಲ
ಅಪಾರ್ಟ್‌ಮೆಂಟ್‌ ನ ಒಳಗಿನ ಭದ್ರತೆಗೆ ಸಂಬಂಧಿಸಿ ನಮಗೆ ಜವಾಬ್ದಾರಿ ಇಲ್ಲ. ಕಟ್ಟಡದ ಎತ್ತರ ಮತ್ತು ಅದರ ಸೆಟ್‌ ಬ್ಯಾಕ್‌, ರಸ್ತೆ ಸಂಪರ್ಕ ಮಾತ್ರ ಮನಪಾ ವ್ಯಾಪ್ತಿಗೆ ಬರುತ್ತದೆ. ಅದರಲ್ಲೇನಾದರೂ ಉಲ್ಲಂಘನೆಯಾದರೆ ಪಾಲಿಕೆ ಗಮನಿಸುತ್ತದೆ.
– ಜಯರಾಜ್‌, ಜಂಟಿ ನಿರ್ದೇಶಕರು, ಮನಪಾ

ಗ್ರಿಲ್ಸ್‌ – ಮಾನದಂಡವಿಲ್ಲ: ಕ್ರೆಡಾಯ್‌
ಅಪಾರ್ಟ್‌ಮೆಂಟ್‌ಗಳ ಬಾಲ್ಕನಿ/ ವರಾಂಡಾದ ಗ್ರಿಲ್ಸ್‌ಗಳು ಎಷ್ಟು ಎತ್ತರದಲ್ಲಿ ಇರಬೇಕು ಎನ್ನುವ ಬಗ್ಗೆ ನಿರ್ದಿಷ್ಟ ನಿಯಮಾವಳಿ ಇಲ್ಲ. ಸಾಮಾನ್ಯವಾಗಿ ನಾವು 4 ಅಡಿ ಎತ್ತರದ ಗ್ರಿಲ್ಸ್‌ ಹಾಕಿ ಕೊಡುತ್ತೇವೆ. ಅಗತ್ಯವಿದ್ದರೆ ಹೆಚ್ಚು ಎತ್ತರಕ್ಕೆ ಗ್ರಿಲ್ಸ್‌ ಹಾಕಿಸುವ ಜವಾಬ್ದಾರಿ ಫ್ಲ್ಯಾಟ್‌ ಮಾಲಕರದ್ದು. ಫ್ಲ್ಯಾಟ್‌ ಮಾರಾಟವಾದ ಬಳಿಕ ಕಟ್ಟಡ ನಿರ್ಮಾಪಕರಿಗೆ ಜವಾಬ್ದಾರಿ ಇರುವುದಿಲ್ಲ. ಆ ಬಳಿಕ ಅಪಾರ್ಟ್‌ಮೆಂಟ್‌ ಅಸೋಸಿಯೇಶನಿನವರು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಅಸೋಸಿಯೇಶನಿನ ಮಾಸಿಕ ಸಭೆಗಳಲ್ಲಿ ಭದ್ರತಾ ವಿಷಯಗಳ ಕುರಿತಂತೆ ಚರ್ಚಿಸಿ ಸೂಕ್ತ ಜಾಗೃತಿ ಮೂಡಿಸಬೇಕು. ನೋಟಿಸ್‌ ಬೋರ್ಡ್‌ನಲ್ಲಿ ಈ ಬಗ್ಗೆ ಪ್ರಕಟಿಸಬೇಕು.
– ಪುಷ್ಪರಾಜ್‌ ಜೈನ್‌, ಕ್ರೆಡಾಯ್‌ ರಾಜ್ಯ ಉಪಾಧ್ಯಕ್ಷ

ಮಕ್ಕಳ ಸುರಕ್ಷೆಗೆ ಹೆಚ್ಚು ಗಮನ
ಫ್ಲ್ಯಾಟ್‌ ಗಳಲ್ಲಿ ಮಕ್ಕಳ ಸುರಕ್ಷೆಗೆ ಬಗ್ಗೆ ಫ್ಲ್ಯಾಟ್‌ ನಿವಾಸಿಗಳು ಹೆಚ್ಚು ಜಾಗ್ರತೆ ವಹಿಸಬೇಕು. ಗ್ರಿಲ್ಸ್‌ಗಳನ್ನು ಮನೆ ಮಾಲಕರೇ ಹಾಕಿಸಿ ಮಕ್ಕಳ ರಕ್ಷಣೆ ಕುರಿತಂತೆ ಹೆಚ್ಚು ನಿಗಾ ವಹಿಸಬೇಕು. ಚಿಕ್ಕ ಮಕ್ಕಳಿಗೆ ಅಪಾಯದ ಬಗ್ಗೆ ಅರಿವು ಇರುವುದಿಲ್ಲ. ಹಾಗಾಗಿ ಮುಂಜಾಗ್ರತೆಯನ್ನು ಹೆತ್ತವರೇ ವಹಿಸಬೇಕು.
– ಪಾವ್ಲ್ ಡಿ’ಸೋಜಾ, ಪಡೀಲ್‌ ನಿವಾಸಿ

ಹೀಗೆ ಎಚ್ಚರ ವಹಿಸಿ
– ಅಪಾರ್ಟ್‌ಮೆಂಟ್‌ ನಲ್ಲಿ  ವಾಸಿಸುವವರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಿ.
– ಮಹಡಿಗಳಲ್ಲಿ ಇರುವವರು ಕಿಟಿಕಿ-ಬಾಗಿಲು , ಬಾಲ್ಕನಿಗೆ ಮಕ್ಕಳು ಹೋದಾಗ ನಿಗಾವಹಿಸಿ.
– ಬಾಲ್ಕನಿಗೆ ಗ್ರಿಲ್‌ ಅಥವಾ Slide ಡೋರ್‌ ಅಳವಡಿಸದಿದ್ದರೆ ಅಲ್ಲಿ  ವಾಸ ಅಪಾಯಕಾರಿ.
– ಫ್ಲ್ಯಾಟ್‌ ನಲ್ಲಿ ವರಾಂಡ ಓಪನ್‌ ಇದ್ದರೆ ಅಲ್ಲಿ ಮಕ್ಕಳು ಓಡಾಡುವಾಗ ಗಮನಹರಿಸಿ.
– ಬೆಡ್‌ರೂಂ, ರೀಡಿಂಗ್‌ ರೂಂ, ಇತರ ಕೋಣೆಯಲ್ಲಿ ಸರಳು ಅಳವಡಿಸದ ಕಿಟಿಕಿ ಇದ್ದರೆ ಅಪಾಯ ಖಚಿತ.
– ಲಿಫ್ಟ್‌ನಲ್ಲಿ ಸಣ್ಣ ಮಕ್ಕಳನ್ನು ಆಡಲು ಅಥವಾ ಒಂಟಿಯಾಗಿ ಹೋಗುವುದಕ್ಕೆ ಅವಕಾಶ ಕೊಡಬೇಡಿ. 
– ಮಕ್ಕಳನ್ನಷ್ಟೇ ಬಿಟ್ಟು ಹೊರ ಹೋಗಬೇಡಿ.
– ಮಕ್ಕಳನ್ನು ಬಾಲ್ಕನಿ, ವರಾಂಡಾ ಅಥವಾ ಗ್ಲಾಸ್‌ ಅಳವಡಿಸಿರುವ ಕಿಟಿಕಿಯಿಂದ ಇಣುಕಲು ಬಿಡಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next