Advertisement

ಮಂಗಳೂರು: ಗೋ ಅಕ್ರಮ ವಧೆ ಪ್ರಕರಣ, ಆಸ್ತಿ ಮುಟ್ಟುಗೋಲು

09:43 AM Nov 03, 2022 | Team Udayavani |

ಮಂಗಳೂರು: ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020ರ ಕಲಂ 8(4) ಹಾಗೂ 8(5)ರದಂತೆ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಗೋವು ಅಕ್ರಮ ವಧೆ ಪ್ರಕರಣದಲ್ಲಿ ವಧಾ ಸ್ಥಳದ ಮಾಲಕ ಯಾಕೂಬ್‌ ಹೆಸರಿನಲ್ಲಿ ಅಡ್ಕೂರು ಗ್ರಾಮದ ಅದ್ಯಪಾಡಿಯಲ್ಲಿ ಡೋರ್‌ ನಂ.1-337 (ಸ.ನಂ.33/6)ರ 15 ಸೆಂಟ್ಸ್‌ ಜಮೀನನ್ನು ಸರಕಾರದ ವಶಕ್ಕೆ ಪಡೆದು ಮುಟ್ಟುಗೋಲು ಹಾಕುವಂತೆ ಸಹಾಯಕ ಆಯುಕ್ತ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮದನಮೋಹನ್‌ ಸಿ. ಆದೇಶ ಹೊರಡಿಸಿದ್ದಾರೆ.

Advertisement

ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾದ ವಾಹನ ಹಾಗೂ ಇತರ ಸೊತ್ತುಗಳನ್ನು ಸಕ್ಷಮ ಪ್ರಾಧಿಕಾರಿಗಳಿಂದ ಮೌಲ್ಯಮಾಪನ ಮಾಡಿಸಿ, ಅಂದಾಜು ಮೌಲ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ದೂರುದಾರರಾದ ಕಂಕನಾಡಿ ನಗರ ಠಾಣಾ ಉಪನಿರೀಕ್ಷಕರಿಗೆ ಸೂಚಿಸಿದ್ದಾರೆ.

ಪ್ರಕರಣದಲ್ಲಿ 3ನೇ ಸಿಜೆಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆ ಮುಕ್ತಾಯವಾದ ಅನಂತರ ಅಂತಿಮ ವರದಿ ಹಾಗೂ 3ನೇ ಸಿಜೆಎಂ ನ್ಯಾಯಾಲಯದ ಅಂತಿಮ ಆದೇಶ ಪ್ರತಿಯನ್ನು ಎಸಿ ಕೋರ್ಟ್‌ಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.

ಮಂಗಳೂರು ತಾಲೂಕು ತಹಶೀಲ್ದಾರ್‌ ಜಮೀನಿಗೆ ಸಂಬಂಧಪಟ್ಟಂತೆ ಪಹಣಿ ಪತ್ರದ ಕಲಂ 11ರಲ್ಲಿ ಮುಂದಿನ ಆದೇಶದ ವರೆಗೆ ನ್ಯಾಯಾಲಯದಿಂದ ಜಪ್ತಿ ಆಗಿರುವ ಬಗ್ಗೆ ನಮೂದು ಮಾಡುವಂತೆ ಹಾಗೂ ಪಂಚಾಯತ್‌ ದಾಖಲೆಗಳಲ್ಲೂ ಈ ಬಗ್ಗೆ ನಮೂದು ಮಾಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಸೋತ ಬಳಿಕ ಕೊಹ್ಲಿ ವಿರುದ್ಧ ‘ಮೋಸದಾಟ’ದ ಆರೋಪ ಮಾಡಿದ ಬಾಂಗ್ಲಾ ಆಟಗಾರರು

Advertisement

“ಗೋಹಂತಕರಿಗೆ ಸ್ಪಷ್ಟ ಸಂದೇಶ ರವಾನೆ’
ನಗರದಲ್ಲಿ ಅಕ್ರಮ ಗೋಹತ್ಯೆ ಮಾಡುವ ವ್ಯಕ್ತಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಗೋಹಂತಕರಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ಬಳಿಕವೂ ಅಕ್ರಮವಾಗಿ ಗೋವಧೆ, ಗೋ ಸಾಗಾಟ ನಡೆಸುತ್ತಿರುವುದು ಮುಂದುವರಿದ ಹಿನ್ನೆಲೆಯಲ್ಲಿ ವಿರುದ್ಧ ಕಾನೂನು ಕ್ರಮ ಜರಗಿಸಲಾಗಿದೆ. ಈ ಹಿಂದೆಯೇ ಎಚ್ಚರಿಕೆ ನೀಡಿದಂತೆ ಗೋಹತ್ಯೆ ನಡೆಸುವವರ ಆಸ್ತಿ ಮುಟ್ಟುಗೋಲು ಹಾಕುವ ಪ್ರಕ್ರಿಯೆ ನಡೆದು ಅಧಿಕೃತ ಆದೇಶ ಬಂದಿದೆ. ಗೋವು ನಮ್ಮ ನಂಬಿಕೆಯ ಭಾಗವಾಗಿದೆ. ಕಾನೂನು ಗಾಳಿಗೆ ತೂರಿ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಸುವವರಿಗೆ ಮುಂದೆಯೂ ಶಿಕ್ಷೆ ಕಾದಿದೆ. ಗೋಹಂತಕರಿಗೆ ನಗರದಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶ ರವಾನಿಸಲಾಗಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರಕರಣದ ವಿವರ
ಕಂಕನಾಡಿ ಠಾಣೆಯಲ್ಲಿ ಅ. 29ರಂದು ಅಕ್ರಮ ಗೋ ಸಾಗಾಟದ 7 ಮಂದಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಆದ್ಯಪಾಡಿಯಲ್ಲಿ ಯಾಕೂಬ್‌ಗ ಸೇರಿದ ಅಕ್ರಮ ಕಸಾಯಿಖಾನೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದರಂತೆ ಆರೋಪಿಯನ್ನು ಬಂಧಿಸಿದ್ದರು. ಅಕ್ರಮ ಕಸಾಯಿಖಾನೆ ಹೊಂದಿದ್ದ ಆರೋಪದಲ್ಲಿ ಕಾಟಿಪಳ್ಳದ ಹಕೀಂ, ಅರ್ಕುಳದ ಬಾತೀಶ್‌ ಹಾಗೂ ಗಂಜಿಮಠದ ಯೂಸುಫ್ ಎಂಬವರ ಆಸ್ತಿ ಮುಟ್ಟುಗೋಲಿಗೆ ಅ. 15ರಂದು ಸಹಾಯಕ ಕಮಿಷನರ್‌ ಆದೇಶ ಹೊರಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next