ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವ ನಿಧಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 12.61 ಕೋ.ರೂ. ಬ್ಯಾಂಕ್ ಸಾಲ ವಿತರಿಸಲಾಗಿದ್ದು, ಜನವರಿ 2ನೇ ವಾರದಲ್ಲಿ ಮಂಗಳೂರಿನಲ್ಲಿ 10 ಸಾವಿರ ಮಂದಿ ಫಲಾನುಭವಿಗಳ ಉಪಸ್ಥಿತಿಯಲ್ಲಿ ಸ್ವ ನಿಧಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದ.ಕ. ಜಿಲ್ಲಾಡಳಿತ, ಮಂಗಳೂರು ಪಾಲಿಕೆ ಆಶ್ರಯದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಮಂಗಳೂರು ಪುರಭವನದಲ್ಲಿ ಸೋಮವಾರ ಆಯೋಜಿಸಲಾದ ಸ್ವನಿಧಿ ಸಮೃದ್ಧಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿಯವರೆಗೆ 8,851 ಫಲಾನು ಭವಿಗಳು ಸ್ವನಿಧಿ ಯೋಜನೆಯ ಲಾಭ ಪಡೆದಿದ್ದಾರೆ. ಪ್ರಥಮ ಹಂತದಲ್ಲಿ 10 ಸಾವಿರ ರೂ.ಗಳಂತೆ ಒಟ್ಟು 6,538 ಫಲಾನುಭವಿಗಳಿಗೆ 6.54 ಕೋ.ರೂ., ದ್ವಿತೀಯ ಹಂತ 20 ಸಾವಿರ ರೂ.ಗಳಂತೆ 1,829 ಫಲಾನುಭವಿಗಳಿಗೆ 3.66 ಕೋ.ರೂ. ಹಾಗೂ ತೃತೀಯ ಹಂತದ 50 ಸಾವಿರ ರೂ. ಗಳಂತೆ 484 ಫಲಾನುಭವಿಗಳಿಗೆ 2.41 ಕೋ.ರೂ ಬ್ಯಾಂಕ್ ಸಾಲ ವಿತರಣೆಯಾಗಿದೆ ಎಂದರು.
ಪ್ರಧಾನಿ ಕಾರ್ಯಕ್ರಮಗಳ ಬಗ್ಗೆ ಜನಮಾನಸಕ್ಕೆ ತಿಳಿಸುವ ನಿಟ್ಟಿನಲ್ಲಿ ಭಾರತ ವಿಕಸಿತ ಯಾತ್ರೆ ಅನುಷ್ಠಾನಕ್ಕೆ ಬಂದಿದ್ದು, ಸಾಮಾನ್ಯ ಜನರಿಗೆ ಕೇಂದ್ರದ ಯೋಜನೆಯನ್ನು ಮನೆಬಾಗಿಲಿಗೆ ತಲುಪಿಸುವ ಕಾರ್ಯ ನಡೆಯಲಿದೆ. ಜಿಲ್ಲೆಯಾದ್ಯಂತ ಈ ಯಾತ್ರೆ ಸಂಚರಿಸಲಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸ್ವ ನಿಧಿ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮತ್ತಷ್ಟು ಮಂದಿಗೆ ಇದರ ಲಾಭ ಸಿಗುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ| ವೈ. ಭರತ್ ಶೆಟ್ಟಿ, ಉಪಮೇಯರ್ ಸುನೀತ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ, ಪಾಲಿಕೆಯ ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಲೋಹಿತ್ ಅಮೀನ್, ವರುಣ್ ಚೌಟ, ಭರತ್ ಕುಮಾರ್, ಗಣೇಶ್ ಸಹಿತ ಮನಪಾ ಸದಸ್ಯರು, ಉಪಆಯುಕ್ತ ರವಿಕುಮಾರ್, ಪ್ರಮುಖ ರಾದ ಕವಿತಾ, ಪ್ರದೀಪ್ ಡಿ’ಸೋಜಾ, ಮಾಲಿನಿ ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ನಿರೂಪಿಸಿದರು.