Advertisement

ಮಂಗಳೂರು: ಆರ್‌ಟಿಒ ಇಲ್ಲದೆ ಇಂದಿಗೆ 3 ವರ್ಷ!

11:58 AM Aug 31, 2018 | |

ಮಂಗಳೂರು: ರಾಜ್ಯದ ಎರಡನೇ ಅತಿ ದೊಡ್ಡ ಸಾರಿಗೆ ಕಚೇರಿಯಾದ ಮಂಗಳೂರು ಕಚೇರಿಯು ಸಾರಥಿಯೇ ಇಲ್ಲದೆ ಇಂದಿಗೆ (ಆ.31) ಮೂರು ವರ್ಷ ಪೂರ್ಣಗೊಳಿಸಿದೆ. ಇಲ್ಲಿ ಆರ್‌ಟಿಒ ಆಗಿದ್ದ ಎ.ಎ. ಖಾನ್‌ ಅವರು 2015ರ ಆ.31ರಂದು ನಿವೃತ್ತರಾಗಿದ್ದರು.ಬಳಿಕ ನೇಮಕವಾಗಿಯೇ ಇಲ್ಲ. ಇದುವರೆಗೆ ಎಂಟು ಮಂದಿ ಪ್ರಭಾರ ಆರ್‌ಟಿಒ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Advertisement

2015ರಲ್ಲಿ ತೆರವಾದ ಆರ್‌ಟಿಒ ಸ್ಥಾನಕ್ಕೆ ಸೆಪ್ಟಂಬರ್‌ನಲ್ಲಿ ಮೊದಲ ಒಂದು ವಾರ ಸುರೇಂದ್ರಪ್ಪ, ಬಳಿಕ 10 ದಿನ ಜಿ.ಎಸ್‌. ಹೆಗಡೆ, ಸೆ. 17ರಿಂದ ಅ.31ರ ತನಕ ಫೆಲಿಕ್ಸ್‌ ಹಾಗೂ ನ.1ರಿಂದ 2016 ಸೆ.19ರ ವರೆಗೆ ಜಿ.ಎಸ್‌. ಹೆಗಡೆ ಸೇವೆ ಸಲ್ಲಿಸಿದ್ದರು. ಅಲ್ಲಿಂದ ಅ.24ರ ವರೆಗೆ ಪಾಷಾ, ಅ.26ರಿಂದ 2017ರ ಮಾ. 17ರ ವರೆಗೆ ರಮೇಶ್‌ ವರ್ಣೇಕರ್‌, ಮಾ.21ರಿಂದ 2018ರ ಎ.16ರ ವರೆಗೆ ಜಿ.ಎಸ್‌. ಹೆಗಡೆ, ಅಲ್ಲಿಂದ ಮೇ 15ರ ವರೆಗೆ ಸಿ.ಡಿ. ನಾಯ್ಕ, ಮೇ 16ರಿಂದ ಆ.2ರ ವರೆಗೆ ಜಾನ್‌ ಮಿಸ್ಕಿತ್‌ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ರಮೇಶ್‌ ವರ್ಣೇಕರ್‌ ಸೇವೆಯಲ್ಲಿದ್ದಾರೆ. ಇವರೆಲ್ಲರೂ ಪ್ರಭಾರಿಗಳಾಗಿ ಆರ್‌ಟಿಒ ಮತ್ತು ಎಆರ್‌ಟಿಒ ಹುದ್ದೆಗಳೆರಡರ ಹೊಣೆಯ ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿಲ್ಲ. ಇದರ ಪರಿಣಾಮ ಕ್ಲಪ್ತ ಕಾಲದಲ್ಲಿ ಸಂಬಂಧಿತ ಸೇವೆಗಳನ್ನು ಒದಗಿಸಲು ಅಸಾಧ್ಯವಾಗಿದೆ. 

ಅರ್ಧಕ್ಕರ್ಧ ಸಿಬಂದಿ ಇಲ್ಲ!
ಆರ್‌ಟಿಒ ಮಾತ್ರ ಅಲ್ಲ, ಇತರ ಸಿಬಂದಿ ಕೊರತೆಯನ್ನು ನೀಗಿಸಲೂ ಸರಕಾರ ಗಮನ ಹರಿಸಿಲ್ಲ. ಮಂಗಳೂರು ಸಾರಿಗೆ ಪ್ರಾಧಿಕಾರದಲ್ಲಿ ಒಟ್ಟು ಮಂಜೂ ರಾಗಿರುವ ಹುದ್ದೆಗಳ ಸಂಖ್ಯೆ 97. ಆದರೆ ಇರುವ ಸಿಬಂದಿ ಕೇವಲ 36. ಪ್ರತೀ ವರ್ಷ ಐದಾರು ಮಂದಿ ನಿವೃತ್ತರಾಗುತ್ತಾರೆ. ಹೊಸಬರ ನೇಮಕವಾಗಿಲ್ಲ. ಮತ್ತೂಂದೆಡೆ ಸ್ಮಾರ್ಟ್‌ ಕಾರ್ಡ್‌, ಕಂಪ್ಯೂಟರ್‌, ಪ್ರಿಂಟರ್‌ ಅಭಾವವೂ ಕಾಡುತ್ತಿದೆ. 

ಆರ್‌ಟಿಒ ಹಾಗೂ ಸಿಬಂದಿ ಕೊರತೆಯಿಂದಾಗಿ ಸಮರ್ಪಕವಾಗಿ ಸೇವೆ ಸಿಗುತ್ತಿಲ್ಲ, ವಾರಗಟ್ಟಲೆ ಕಾಯಬೇಕಿದೆ. ವಾಹನ 4, ಸಾರಥಿ 4 ಬಂದರೂ ಜಾರಿಗೆ ಸಿಬಂದಿಯಿಲ್ಲ. ಇರುವವರಿಗೂ ಸಾಫ್ಟ್ವೇರ್‌ ಅಪ್‌ಡೇಟ್‌ ಮಾಹಿತಿ ಇಲ್ಲದೆ ವಿಳಂಬವಾಗುತ್ತಿದೆ ಎನ್ನುತ್ತಾರೆ ವಾಹನ ಚಾಲಕ ಕಿರಣ್‌. 

ಎಲ್ಲ  ಆರ್‌ಟಿಒದಲ್ಲೂ ಪ್ರಭಾರ!
ಚಿಕ್ಕಮಗಳೂರು, ಶಿವಮೊಗ್ಗ, ಕಾರವಾರ, ಉಡುಪಿ, ಪುತ್ತೂರು, ಚಿತ್ರದುರ್ಗ, ದಾವಣಗೆರೆ, ತರೀಕೆರೆ ಗಳಲ್ಲೂ ಪ್ರಭಾರರೇ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಸಾಫ್ಟ್ವೇರ್‌ ಎಡವಟ್ಟು; ಗೊಂದಲ
ಆರ್‌ಟಿಎ ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಹಾಗೂ ಪೇಪರ್‌ಲೆಸ್‌ ಮಾಡಲು “ವಾಹನ-4′ ಹಾಗೂ “ಸಾರಥಿ 4′ ಸಾಫ್ಟ್ ವೇರ್‌ ದೇಶಾದ್ಯಂತ ಅನುಷ್ಠಾನಕ್ಕೆ ತರಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಇದು ಯಶಸ್ವಿಯಾಗಿದೆ. ಆದರೆ ಸಾಫ್ಟ್ವೇರ್‌ ಅಳವಡಿಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಮಂಗಳೂರಿನಲ್ಲಿ ಹಲವು ತಿಂಗಳಿಂದ ಚಾಲನಾ ಪರವಾನಿಗೆಯೇ ಸಿಗುತ್ತಿಲ್ಲ. ಪರವಾನಿಗೆ ನವೀಕರಣವೂ ಆಗು ತ್ತಿಲ್ಲ. ಪರವಾನಿಗೆ ಮುದ್ರಣವೂ ಆಗುತ್ತಿಲ್ಲ. ಸದ್ಯ ಸುಧಾರಣೆ ಆಗುತ್ತಿದ್ದರೂ ಸಂಪೂರ್ಣ ಬಗೆಹರಿಯಲು ಇನ್ನಷ್ಟು ದಿನ ಕಾಯಬೇಕಿದೆ.

ಸೂಕ್ತ ಕ್ರಮ
ಸಾರಿಗೆ ಇಲಾಖೆಯ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ  ಸೂಕ್ತ ಕ್ರಮ ಕೈಗೊಳ್ಳಲಿದೆ. ಸದ್ಯ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಅಧಿಕಾರಿ ಗಳಿಗೆ ಪ್ರಭಾರ ಹುದ್ದೆಯನ್ನು ನೀಡಲಾಗಿದೆ.
ಯು.ಟಿ. ಖಾದರ್‌,  ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next