Advertisement

14 ವರ್ಷಗಳ ಬಳಿಕ ಮಕ್ಕಳ ಸೇರಿದ ತಾಯಿ !

03:57 PM Feb 17, 2020 | Naveen |

ಮಂಗಳೂರು: ತಾಯಿಯೊಬ್ಬಳು 14 ವರ್ಷಗಳ ಬಳಿಕ ತನ್ನ ಮಕ್ಕಳನ್ನು ಸೇರಿಕೊಂಡ ಅಪೂರ್ವ ಮನ ಮಿಡಿಯುವ ಕ್ಷಣ ಶನಿವಾರ ಮಂಗಳೂರಿನಲ್ಲಿ ನಡೆಯಿತು. ಮಂಗಳೂರಿನ ಸಮಾಜ ಸೇವಾ ಸಂಸ್ಥೆ ವೈಟ್‌ ಡೊವ್ಸ್‌ ಮುಖ್ಯಸ್ಥರಾದ ಕೋರಿನ್‌ ರಸ್ಕಿನ್ಹಾ ಮೊದಲಾದವರು ಇದಕ್ಕೆ ಸಾಕ್ಷಿಯಾದರು. ತಮಿಳು ನಾಡಿನ ಕೊರ್ಟಂಪೇಟೆಯ ಲೂರ್ದ್ ಮೇರಿ 14 ವರ್ಷಗಳ ಆಶ್ರಮವಾಸದ ಬಳಿಕ ತನ್ನ ಕುಟುಂಬದ ಸದಸ್ಯರನ್ನು ಸೇರಿದ ಮಹಿಳೆ.

Advertisement

ಘಟನೆಯ ಹಿನ್ನೆಲೆ
ಲೂರ್ದ್ ಮೇರಿ 14 ವರ್ಷಗಳ ಹಿಂದೆ ತಮಿಳುನಾಡಿನ ತನ್ನ ಹುಟ್ಟೂರಿನಿಂದ ನಾಪತ್ತೆಯಾಗಿದ್ದರು. 10 ವರ್ಷ ಗಳ ಹಿಂದೆ ಮಂಗಳೂರಿನಲ್ಲಿದ್ದ ಆಕೆ ಯನ್ನು ಪಾಂಡೇಶ್ವರ ಪೊಲೀಸರು ವೈಟ್‌ ಡೋವ್ಸ್‌ಗೆ ಸೇರಿಸಿದ್ದರು. ಮಂಗಳೂರಿಗೆ ಬರುವುದಕ್ಕೆ ಮುಂಚಿನ 4 ವರ್ಷ ಕಾಲ ಆಕೆ ಎಲ್ಲಿದ್ದರು ಎಂಬ ವಿಚಾರ ತಿಳಿದು ಬಂದಿಲ್ಲ. ಆಕೆಗೆ ತಮಿಳು ಭಾಷೆ ಮಾತ್ರ ಗೊತ್ತಿದ್ದು, ತನ್ನ ಹೆಸರು ಲೂರ್ದ್ ಮೇರಿ ಎಂದು ತಿಳಿಸಿದ್ದರು. ಆಶ್ರಮದಲ್ಲಿ ಇರುವವ ರಿಗೆ ತಮಿಳು ಗೊತ್ತಿಲ್ಲದ ಕಾರಣ ಆಕೆಯ ಜತೆ ಹೆಚ್ಚು ಮಾತನಾಡಲು ಯಾರೂ ಮುಂದಾಗಿರಲಿಲ್ಲ. ವೈಟ್‌ ಡೊವ್ಸ್‌ನಲ್ಲಿ ಆಶ್ರಮವಾಸಿ ಆಗಿ ಸೇರಿದ ಅವರಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಇತ್ತೀಚೆಗೆ ಒಂದು ವಾರದ ಹಿಂದೆ ತಮಿಳುನಾಡಿನ ಕ್ರೈಸ್ತ ಧರ್ಮಗುರು ವಂ| ಜಾನ್‌ ಲೆವಿಸ್‌ ಅವರು ವೈಟ್‌ ಡೊವ್ಸ್‌ಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಆಶ್ರಮದ ಮ್ಯಾನೇಜರ್‌ ಜೆರಾಲ್ಡ್‌ ಫೆರ್ನಾಂಡಿಸ್‌ ಅವರು ಆಶ್ರಮದಲ್ಲಿ ಇರುವ ತಮಿಳು ನಿವಾಸಿಗಳ ಜತೆ ತಮಿಳು ಭಾಷೆಯಲ್ಲಿ ಮಾತನಾಡಿ ಅವರ ಕುಟುಂಬಗಳ ಬಗ್ಗೆ ತಿಳಿದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಸಂದರ್ಭದಲ್ಲಿ ಲೂರ್ದ್ ಮೇರಿ ತಾನು ಹುಟ್ಟಿ ಬೆಳೆದ ಊರು ತಮಿಳುನಾಡಿನ ಕೊರ್ಟಂಪೇಟೆ ಎಂದು ವಂ| ಜಾನ್‌ ಗೆ ತಿಳಿಸಿದ್ದರು.

ಫಾ| ಜಾನ್‌ ಲೆವಿಸ್‌ ಅವರು ಕೊರ್ಟಂಪೇಟೆಯ ಚರ್ಚ್‌ನ ಧರ್ಮಗುರುಗಳನ್ನು ಸಂಪರ್ಕಿಸಿ ಮಂಗಳೂರಿನಲ್ಲಿ ಪತ್ತೆಯಾದ ಲೂರ್ದ್ ಮೇರಿ ಅವರ ಬಗ್ಗೆ ಚರ್ಚ್‌ನಲ್ಲಿ ಘೋಷಿಸುವ ವ್ಯವಸ್ಥೆ ಮಾಡಿದ್ದರು. ಆಗ ಮೇರಿ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದ ವ್ಯಕ್ತಿಯೊಬ್ಬರು ಕೊಯಮತ್ತೂರಿನಲ್ಲಿ ಪ್ಯಾರಾ ಮೆಡಿಕಲ್‌ ಕೋರ್ಸು ಕಲಿಯುತ್ತಿರುವ ಮೇರಿ ಅವರ ಪುತ್ರಿ ಜ್ಞಾನ ಅಂತೋನಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಆಕೆ ತನ್ನ ಹಿರಿಯ ಸಹೋದರ ವೃತ್ತಿಯಲ್ಲಿ ಚಾಲಕ ಆಗಿರುವ ಕುಳಂದೈಯಾಸು ಅವರನ್ನು ಸಂಪರ್ಕಿಸಿ ತಮ್ಮ ತಾಯಿ ಜೀವಂತ ಇರುವುದಾಗಿ ತಿಳಿಸಿದ್ದಳು.

ಪುತ್ರ ಕುಳಂದೈಯಾಸು ಅವರಿಗೆ 9 ವರ್ಷ ಪ್ರಾಯವಾದಾಗ ತಾಯಿ ಮೇರಿ ಕಾಣೆಯಾಗಿದ್ದರು. ತೃತೀಯ ಮಗು (ಪುತ್ರಿ) ರಾಕಿಯೆಲ್‌ ಲಿಸಿಯಾ ಈಗ ವಸತಿ ಶಾಲೆಯೊಂದರಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಹುಟ್ಟಿದ ಕೆಲವೇ ತಿಂಗಳಲ್ಲಿ ಮೇರಿ ನಾಪತ್ತೆಯಾಗಿದ್ದರು. ಪತ್ನಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ ಪತಿ ಜಾನ್ಸನ್‌ ಕೆಲವು ವರ್ಷಗಳ ಬಳಿಕ ಸಾವನ್ನಪ್ಪಿದ್ದರು. ಅವರು ಸಾಯುವ ವೇಳೆಗೆ ಪಡಿತರ ಚೀಟಿಯಿಂದ ಆಕೆಯ ಹೆಸರನ್ನು ತೆಗೆದು ಹಾಕಲಾಗಿತ್ತು. ಶನಿವಾರ ಮಕ್ಕಳು ಮಂಗಳೂರಿನಿಂದ ಆಕೆಯನ್ನು ಕರೆದೊಯ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next