Advertisement

ಪೀಠದಿಂದ ಮಾರ್ಗದರ್ಶನವಾಗಲಿ: ಬಲ್ಯೊಟ್ಟು ಶ್ರೀ

12:59 AM Jan 13, 2020 | Sriram |

ಉಳ್ಳಾಲ: ನಾರಾಯಣ ಗುರುಗಳು ಅಸ್ಪೃಶ್ಯತೆ ನಿವಾರಣೆಯೊಂ ದಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದರು. ಇಂದಿಗೂ ಶಿವಗಿರಿಯಲ್ಲಿ ಆಡಂಬರಕ್ಕೆ ಮಹತ್ವ ನೀಡದೆ ಶಿಕ್ಷಣ, ವಿಜ್ಞಾನ ಸಂಬಂಧಿ ಕಾರ್ಯಗಳು ನಡೆಯುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಗೊಳ್ಳಲಿರುವ ನಾರಾಯಣ ಗುರು ಅಧ್ಯಯನ ಪೀಠವು ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಕೇಂದ್ರವಾಗಲಿ ಎಂದು ಬಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ರವಿವಾರ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಇದೊಂದು ಮಹತ್ವಪೂರ್ಣ ಶಿಲಾನ್ಯಾಸ. ನಾರಾಯಣಗುರುಗಳ ಚಿಂತನೆ, ಭಾವೀ ಭಾರತದ ಕಲ್ಪನೆಯನ್ನು ಯುವ ಜನಾಂಗಕ್ಕೆ ಅದರಲ್ಲೂ ಕರ್ನಾಟಕದ ಜನರಿಗೆ ಮಾರ್ಗದರ್ಶನ ನೀಡುವಂತಹ ಈ ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳಲ್ಲಿ ಎಲ್ಲರೂ ಕೈ  ಜೋಡಿಸಬೇಕಾಗಿದೆ ಎಂದರು. ನಾರಾಯಣ ಗುರುಗಳು ತಮ್ಮ ಜೀವಿತಾವಧಿಯಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದರು, ವೈದಿಕ ಪರಂಪರೆಯನ್ನಲ್ಲ. ಇಂದಿಗೂ ಅವರ ಚಿಂತನೆಯಂತೆ ಶಿವಗಿರಿಯಲ್ಲಿ ಜನರ ಮನಪರಿವರ್ತನೆಯ, ಜ್ಞಾನ ಹಂಚುವ ಕಾರ್ಯ ನಡೆಯುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌, ಶಾಸಕ ಯು.ಟಿ. ಖಾದರ್‌ ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮಾಜಿ ಸಚಿವ ರಮಾನಾಥ ರೈ, ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಅಖೀಲ ಭಾರತ ಬಿಲ್ಲವ ಯೂನಿಯನ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಕೊಣಾಜೆ ಪಂ. ಅಧ್ಯಕ್ಷ ನಝರ್‌ ಷಾ ಪಟ್ಟೋರಿ, ಮಾಜಿ ಶಾಸಕ ವಿನಯ ಕುಮಾರ್‌ ಸೊರಕೆ, ಪದ್ಮನಾಭ ಕೋಟ್ಯಾನ್‌, ಸಂತೋಷ್‌, ಮಲಾರ್‌ ಜಯರಾಮ ರೈ, ರೋಹಿಣಿ, ಮರಿಯಾ ಡಿ’ಕೋಸ್ಟಾ, ಮೋಹನ್‌ ಕುಮಾರ್‌, ಪಿ.ವಿ. ಮೋಹನ್‌ ಉಪಸ್ಥಿತರಿದ್ದರು.
ಮಂಗಳೂರು ವಿವಿ ಕುಲಸಚಿವ ಪ್ರೊ| ಎ.ಎಂ. ಖಾನ್‌ ಸ್ವಾಗತಿಸಿದರು. ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯೋಜಕ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದರು.

ಸರಕಾರದಿಂದ ಕೋಟಿ ರೂ. ಅನುದಾನ: ಕೋಟ
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದ ಅಸಮಾನತೆಯನ್ನು ದೂರ ಮಾಡಲು ಕ್ರಾಂತಿಕಾರಿಯಾಗಿ ಹೋರಾಡಿದವರು ನಾರಾಯಣ ಗುರುಗಳು. ಅಂತಹ ಮಹಾತ್ಮರ ಹೆಸರಿನಲ್ಲಿ ಸ್ಥಾಪನೆಗೊಳ್ಳಲಿರುವ ಅಧ್ಯಯನ ಪೀಠದ ಮೂಲಕ ಅವರ ಆಶಯಗಳು ಈಡೇರಲಿ. ಅಧ್ಯಯನ ಪೀಠದ ಕಟ್ಟಡಕ್ಕೆ ಸರಕಾರದ ವತಿಯಿಂದ ಒಂದು ಕೋಟಿ ರೂ. ಅನುದಾನವನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next