Advertisement
ಮಂಗಳೂರು ವಿ.ವಿ.ಯ ಅಂತಿಮ ಪದವಿ ಫಲಿತಾಂಶ ಕಳೆದ ರವಿವಾರ ಮತ್ತು ಸೋಮವಾರ ಪ್ರಕಟಿಸಲಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಕೆಲವೇ ವಿದ್ಯಾರ್ಥಿಗಳು ಫಲಿತಾಂಶ ಪಡೆದರೆ, ಬಹುತೇಕರಿಗೆ ಫಲಿತಾಂಶ ಲಭ್ಯವಾಗಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು. ವಿ.ವಿ. ಸಂಬಂಧಪಟ್ಟವರು ಸಮಸ್ಯೆ ನಿವಾರಣೆಗೆ ಪ್ರಯತ್ನ ಪಡುತ್ತಿದ್ದು, ಈಗಾಗಲೇ ಶೇ. 99ರಷ್ಟು ನಿವಾರಣೆಯಾಗಿದೆ. ವಿದ್ಯಾರ್ಥಿಗಳ ಗೊಂದಲ ಪರಿಹರಿಸಿ ಫಲಿತಾಂಶ ಒದಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ. ಎಲ್. ಧರ್ಮ ತಿಳಿಸಿದ್ದಾರೆ.
ಫಲಿತಾಂಶ ಪ್ರಕಟನೆಯಲ್ಲಿ ಉಂಟಾದ ಗೊಂದಲದ ಕಾರಣ ದಿಂದಾಗಿ ಸ್ನಾತಕೋತ್ತರ ಪದವಿಗಳಿಗೆ ದಾಖಲಾತಿ ಪ್ರಕ್ರಿಯೆಯನ್ನು ವಿವಿ ಮುಂದೂಡಿದೆ. ಸ್ನಾತಕೋತ್ತರ ಪದವಿ ಸೇರ್ಪಡೆಗೆ ದಾಖಲಾತಿ ಪ್ರಕ್ರಿಯೆಗೆ ಕೊನೆಯ ದಿನಾಂಕವನ್ನು ನ. 21ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಸರ್ವರ್ ಸಮಸ್ಯೆ ಯಿಂದಾಗಿ ಬಹುತೇಕ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯ ವಾಗದ ಕಾರಣ ನ. 30ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಿಸಲಾಗಿದೆ. ಮಂಗಳೂರು ವಿ.ವಿ.ಯ ಸ್ನಾತಕೋತ್ತರ ವಿಭಾಗಗಳು/ವಿ.ವಿ. ಕಾಲೇಜು ಮಂಗಳೂರು/ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು/ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪಕಾಲೇಜು ಮಡಿಕೇರಿ/ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ಹಾಗೂ ಮಂಗಳೂರು ವಿವಿಯ ಸಂಯೋಜಿತ ಕಾಲೇಜುಗಳು ಮತ್ತು ಸರಕಾರಿ ಕಾಲೇಜುಗಳಲ್ಲಿ ನಡೆಸಲ್ಪಡುವ ವಿವಿಧ ಸ್ನಾತ ಕೋತ್ತರ ಕಾರ್ಯಕ್ರಮಗಳ ಪ್ರವೇಶಾತಿಗೆ ನ. 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
Related Articles
Advertisement