Advertisement
ಮಂಗಳೂರು ಘಟನೆ ಬಗ್ಗೆ ರಾಜ್ಯದಲ್ಲಷ್ಟೇ ಅಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಘಟನೆಯ ತನಿಖೆಯನ್ನು ಮಂಗಳೂರು ಪೊಲೀಸರು ಮತ್ತಷ್ಟು ಚುರುಕು ಗೊಳಿಸಿದ್ದಾರೆ. ಗಲಭೆ ಸಂಬಂಧ ಪ್ರಾಥಮಿಕ ಹಂತದಲ್ಲಿ ಹಲವು ಮಂದಿಯನ್ನು ವಶಕ್ಕೆ ತೆಗೆದು ಕೊಂಡು ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಅಧಿಕೃತವಾಗಿ ಇದುವರೆಗೆ ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಘಟನೆ ನಡೆದ ದಿನ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ಮಂದಿಯನ್ನು ಬಂಧಿಸಲಾಗಿತ್ತು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಾರ್ವಜನಿಕರಿಂದ ಲಭ್ಯವಾದ ಮತ್ತು ಪೊಲೀಸ್ ಇಲಾಖೆ ಚಿತ್ರೀಕರಿಸಿಕೊಂಡ ವೀಡಿಯೋಗಳಲ್ಲಿ ಸೆರೆಯಾಗಿರುವ ಆರೋಪಿಗಳ ಗುರುತನ್ನು ಪತ್ತೆ ಹಚ್ಚುವ ಕೆಲಸಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದ್ದು, ಅನಂತರವೇ ಬಂಧನ ಪ್ರಕ್ರಿಯೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಗಲಭೆಯಲ್ಲಿ ಗುರುತಿಸಿಕೊಂಡಿದ್ದ ಹಲವರ ಗುರುತು ಪತ್ತೆಯಾಗಿದ್ದು, ಆ ಪೈಕಿ ಹೆಚ್ಚಿನವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅಂಥವರ ಪತ್ತೆ ಮತ್ತು ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
Advertisement
“ವಾಹನ ವಶಪಡಿಸಿಲ್ಲ’ಗಲಭೆ ವೇಳೆ ಕಲ್ಲುಗಳ ಸಾಗಾಟಕ್ಕೆ ಬಳಸಲಾಗಿತ್ತು ಎನ್ನಲಾಗಿದ್ದ ರಿಕ್ಷಾ ಟೆಂಪೋವನ್ನು ಇದುವರೆಗೆ ಪೊಲೀಸರು ವಶಕ್ಕೆ ಪಡೆದುಕೊಂಡಿಲ್ಲ. ಗುರುವಾರ ಹೊಸ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸ್ ಆಯುಕ್ತರ ಸಭೆ
ಈ ನಡುವೆ ನಗರ ಪೊಲೀಸ್ ಆಯುಕ್ತ ಡಾ| ಹರ್ಷ ಕೆಲವು ಮುಸ್ಲಿಂ ಸಮುದಾಯದ ಮುಖಂಡರ ಜತೆಗೆ ಗುರುವಾರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ಸೇರಿದಂತೆ ಹಲವು ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಆರೋಪಿಗಳ ಪತ್ತೆಗೆ ಈಗಾಗಲೇ ಎಸಿಪಿ, ಇನ್‌ಸ್ಪೆಕ್ಟರ್‌ಗಳು, ಸಬ್‌ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಒಟ್ಟು 10 ತಂಡಗಳನ್ನು ರಚಿಸಿ ಕಾರ್ಯನಿರ್ವಹಿಸುತ್ತಿದ್ದು, ಸಿಐಡಿ ತಂಡ ಇವರ ಸಹಕಾರ ಪಡೆದುಕೊಳ್ಳುವ ಸಾಧ್ಯತೆಯಿದೆ. ಹಿಂಸಾತ್ಮಕ ಪ್ರತಿಭಟನೆಯ ಮಾಜಿಸ್ಟೀರಿಯಲ್ ತನಿಖೆಗಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ನೇಮಕ ಮಾಡಿದ್ದು, ತನಿಖಾ ತಂಡ ನಾಳೆ ತನಿಖೆ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಕುಮಾರ್ ನೇತೃತ್ವದ ಸಿಐಡಿ ತಂಡ
ಮಂಗಳೂರು ಹಿಂಸಾಚಾರದ ತನಿಖೆಗೆ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಾಪುರ್‌ವಾಲ ನೇತೃತ್ವದ ತಂಡ ಗುರುವಾರ ಮಂಗಳೂರಿಗೆ ಆಗಮಿಸಿದೆ. ತಂಡದಲ್ಲಿ ಐವರು ಸಿಐಡಿ ಅಧಿಕಾರಿಗಳಿದ್ದು, ಶುಕ್ರವಾರದಿಂದ ತನಿಖೆ ಆರಂಭಿಸಲಿದ್ದಾರೆಂದು ಮೂಲಗಳು ತಿಳಿಸಿವೆ.