Advertisement

ಮಂಗಳೂರು ವಿಶ್ವವಿದ್ಯಾನಿಲಯ: ಪರೀಕ್ಷಾ ಶುಲ್ಕ ಕಡಿತ ಮಾಡಿದ ಎಂ.ಯು ಲಿಂಕ್ಸ್‌ ಸಾಫ್ಟ್ ವೇರ್‌!

02:26 AM Mar 31, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಪರೀಕ್ಷೆಗಳಿಗೆ ಸಂಬಂಧಿಸಿ ಹೊಸ ಸಾಫ್ಟ್ ವೇರನ್ನು
ಮಂಗಳೂರು ವಿ.ವಿ.ಯೇ ಅಭಿವೃದ್ಧಿಪಡಿಸಿದೆ.ಇದರಿಂದ ವಿ.ವಿ.ಗೆ ಹಣ ಉಳಿತಾಯವಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಕಡಿತ ಮಾಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಈ ವರ್ಷದಿಂದಲೇ ತಲಾ 50 ರೂ.ಗಳಂತೆ ಪರೀಕ್ಷಾ ಶುಲ್ಕ ಕಡಿಮೆ ಮಾಡಲು ನಿರ್ಧರಿಸಿದೆ. ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಲಾಭವಾಗಿದೆ. ಪರೀಕ್ಷಾ ಶುಲ್ಕ ಕಡಿತ ಬಗ್ಗೆ ಶುಲ್ಕ ಸಮಿತಿ ತೀರ್ಮಾನ ಕೈಗೊಂಡು, ವಿ.ವಿ. ಸಿಂಡಿಕೇಟ್‌ ಇದಕ್ಕೆ ಒಪ್ಪಿಗೆ ಸೂಚಿಸಿತ್ತು.

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು 2015ರಿಂದ 2020ರವರೆಗೆ ಪರೀಕ್ಷೆ ಪ್ರಾರಂಭದಿಂದ ಕೊನೆಯವರೆಗೆ ಎಲ್ಲಾ ಕೆಲಸಗಳನ್ನು ಹೊರಗುತ್ತಿಗೆ ನೀಡಲಾಗಿತ್ತು. 2020ರಲ್ಲಿ ಗುತ್ತಿಗೆ ಅವಧಿ ಪೂರ್ಣ ಗೊಂಡ ನಂತರ ಪರೀಕ್ಷೆಯಲ್ಲಿ ಹೊಸತನ ಪರಿಚಯಿಸಲಾಗಿದೆ. ಅದರಂತೆ ರಾಜ್ಯದಲ್ಲಿಯೇ ಮೊದಲ ಬಾರಿ ಆತ್ಮನಿರ್ಭರ ಕಲ್ಪನೆಯಂತೆ ಮಂಗಳೂರು ವಿ.ವಿ.ಯೇ ಪರೀಕ್ಷಾ ಸಾಪ್ಟ್ ವೇರ್‌ ಸಿದ್ದಪಡಿಸಿದೆ ಎನ್ನುತ್ತಾರೆ ಸಿಂಡಿಕೇಟ್‌ ಸದಸ್ಯ ರಮೇಶ್‌ ಅವರು.

ಉಚಿತವಾಗಿ ದೊರೆತ
ಸಾಪ್ಟ್ ವೇರ್‌!
ಮಂಗಳೂರು ವಿ.ವಿ.ಯ ಸಿಂಡಿಕೇಟ್‌ ಒಪ್ಪಿಗೆಯ ಮೇರೆಗೆ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್‌ ಮಂಗಳೂರು ಕಾಲೇಜಿನ ಪ್ರಾಂಶುಪಾಲರಾದ ಹರೀಶ್‌ ಶೆಟ್ಟಿ ಅವರು “ಎಂ.ಯು ಲಿಂಕ್ಸ್‌’ ಸಾಪ್ಟ್ ವೇರ್‌ ಸಿದ್ದಪಡಿಸಿ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಸಾಪ್ಟ್ ವೇರ್‌ ಮಾಡಿಕೊಡಲು 2.50 ಕೋ.ರೂ. ಖರ್ಚಾಗುತ್ತದೆ. ಆದರೆ ಹರೀಶ್‌ ಶೆಟ್ಟಿ ಅವರು ಉಚಿತವಾಗಿ ಇದನ್ನು ವಿ.ವಿ.ಗೆ ಮಾಡಿಕೊಟ್ಟಿದ್ದಾರೆ.

ಪ್ರಸ್ತುತ ಇರುವ ವಿದ್ಯಾರ್ಥಿಗಳ ಎಲ್ಲ ವಿವರಗಳು “ಎಂ.ಯು ಲಿಂಕ್ಸ್‌’ ನಲ್ಲಿ ಸಂಗ್ರಹಿಸಿಡಲಾಗಿದೆ. ಆದರೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಬಳಿಕ ಸೇರಿದ ವಿದ್ಯಾರ್ಥಿಗಳ ಪರೀಕ್ಷಾ ವಿವರ ಹೊಸದಾಗಿ ಆರಂಭಿಸಲಾದ ಯುಯುಸಿ ಎಂಎಸ್‌ (ಸಮಗ್ರ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣ ವ್ಯವಸ್ಥೆ) ಸಾಫ್ಟ್ ವೇರ್‌ನಲ್ಲಿ ಇರಲಿದೆ.

Advertisement

ಇದನ್ನೂ ಓದಿ:ವಿಧಾನ ಮಂಡಲ ಅಧಿವೇಶನ ಅನಿರ್ಧಿಷ್ಠಾವಧಿಗೆ ಮುಂದೂಡಿಕೆ

ಇತರ ವಿವಿಗೂ ಎಂ.ಯು ಲಿಂಕ್ಸ್‌!
ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿ.ವಿ.ಯೇ ಪರೀಕ್ಷಾ ಸಾಪ್ಟ್ ವೇರ್‌  ಮಾಡಿ ಅದರಿಂದ ಲಾಭ ಮಾಡಿಕೊಂಡ ವಿಚಾರ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ ಚರ್ಚೆಯಾಗಿದೆ. ಹಾಗೂ ಖಾಸಗಿ ಏಜೆನ್ಸಿ ಮೂಲಕ ಪರೀಕ್ಷಾ ಸಾಪ್ಟ್ ವೇರ್‌ ಮಾಡಿರುವ ಕೆಲವು ವಿ.ವಿ.ಗಳಲ್ಲಿಯೂ ಎಂ.ಯು ಲಿಂಕ್ಸ್‌ ಮಾದರಿ ಸಾಪ್ಟ್ ವೇರ್‌ ಜಾರಿಗೆ ಒಲವು ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಯುಯುಸಿಎಂಎಸ್‌ ಸಾಪ್ಟ್ ವೇರ್‌ ರಚನೆ ಸಂದರ್ಭದಲ್ಲಿಯೂ ಎಂ.ಯು ಲಿಂಕ್ಸ್‌ನ ಅಂಶಗಳನ್ನೇ ಸ್ವೀಕರಿಸಲಾಗುತ್ತಿದೆ.

ಆತ್ಮನಿರ್ಭರ ಪರಿಕಲ್ಪನೆ ಜಾರಿ
ಮಂಗಳೂರು ವಿ.ವಿ.ಯೇ ಮೊದಲ ಬಾರಿಗೆ ಆತ್ಮನಿರ್ಭರ ಪರಿಕಲ್ಪನೆಯಲ್ಲಿ ಎಂ.ಯು ಲಿಂಕ್ಸ್‌ ಸಾಪ್ಟ್ ವೇರ್‌ ಸಿದ್ಧಪಡಿಸಿ ಪರೀಕ್ಷೆಯನ್ನು ನಡೆಸಿದೆ. ಇದರಿಂದ ಲಾಭದಾಯಕವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದಲ್ಲಿ ಕಡಿತ ಮಾಡುವ ಮಹತ್ವದ ನಿರ್ಧಾರವನ್ನು ವಿ.ವಿ. ಸಿಂಡಿಕೇಟ್‌ ಕೈಗೊಂಡಿದೆ. ಎಂ.ಯು.ಲಿಂಕ್ಸ್‌ ಯಶಸ್ಸಿನ ಹಿನ್ನೆಲೆಯಲ್ಲಿ ರಾಜ್ಯದ ಇತರ ವಿವಿಯಲ್ಲಿಯೂ ಇದೇ ಮಾದರಿ ಅನುಷ್ಠಾನದ ಬಗ್ಗೆ ಆಸಕ್ತಿ ಕೇಳಿಬಂದಿದೆ.
– ಪ್ರೊ| ಪಿ.ಎಲ್‌. ಧರ್ಮ,
ಕುಲಸಚಿವರು (ಪರೀಕ್ಷಾಂಗ), ಮಂಗಳೂರು ವಿವಿ

ಅಂಕಪಟ್ಟಿ ಪ್ರಿಂಟ್‌ ವಿ.ವಿ.ಯಲ್ಲಿ !
ಇದೇ ಮೊದಲ ಬಾರಿಗೆ ಅಂಕಪಟ್ಟಿಯನ್ನು ಕೂಡ ಮಂಗಳೂರು ವಿ.ವಿ.ಯೇ ಪ್ರಿಂಟ್‌ ಮಾಡಿದೆ. ಇಲ್ಲಿಯವರೆಗೆ ಏಜೆನ್ಸಿ ಮುಖಾಂತರ ಪ್ರಿಂಟ್‌ ಮಾಡಲಾಗುತ್ತಿತ್ತು. ಎನ್‌ಇಪಿ ಪೂರ್ಣಮಟ್ಟದಲ್ಲಿ ಜಾರಿಯಾದ ಬಳಿಕ ಅಂಕಪಟ್ಟಿ ಪ್ರಿಂಟ್‌ ಮಾಡುವ ಪ್ರಕ್ರಿಯೆ ಸ್ಥಗಿತವಾಗಲಿದೆ. ಸಾಫ್ಟ್ ಕಾಪಿಯಲ್ಲಿ ಸಿಗಲಿದೆ!

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next