Advertisement

ಮಂಗಳೂರು ವಿ.ವಿ. ಕಾಲೇಜಿನಲ್ಲಿ ಗುಂಪು ಘರ್ಷಣೆ

02:42 AM Jun 11, 2022 | Team Udayavani |

ಮಂಗಳೂರು: ಹಿಜಾಬ್‌ ವಿವಾದ, ಸಾವರ್ಕರ್‌ ಫೋಟೊ ವಿವಾದದ ಬಳಿಕ ಮಂಗಳೂರು ವಿ.ವಿ. ಘಟಕ ಕಾಲೇಜು ಶುಕ್ರವಾರ ಗುಂಪು ಘರ್ಷಣೆಗೆ ಸಾಕ್ಷಿಯಾಯಿತು.

Advertisement

ಶುಕ್ರವಾರ ಭೋಜನ ವಿರಾಮದ ವೇಳೆ ಈ ಘಟನೆ ಸಂಭವಿಸಿದೆ. ಲಭ್ಯ ಮಾಹಿತಿಯಂತೆ ಊಟ ಮಾಡಿ ಕೈತೊಳೆಯುವ ವೇಳೆ ಕೆಲವು ವಿದ್ಯಾರ್ಥಿಗಳು ಕೆಲವು ದಿನ ಹಿಂದೆ ತರಗತಿಯಲ್ಲಿ ಸಾವರ್ಕರ್‌ ಫೊಟೊ ಹಾಕಿದ್ದನ್ನು ಆಕ್ಷೇಪಿಸಿದ್ದಾರೆ. ಇದೇ ವಿಚಾರಕ್ಕೆ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲಪಿದೆ.

ಊಟದ ತಟ್ಟೆಯಲ್ಲೇ ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಪರಿಸ್ಥಿತಿ ಉಲ್ಬಣಗೊಳ್ಳುವ ಮೊದಲು ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ತರಗತಿಯಲ್ಲಿ ಸಾವರ್ಕರ್‌ ಫೋಟೊವನ್ನು ವಿದ್ಯಾರ್ಥಿಗಳು ಹಾಕಿದ್ದರು. ಆ ಬಳಿಕ ಅದನ್ನು ಗಮನಿಸಿದ್ದ ಪ್ರಾಂಶುಪಾಲರು ತೆಗೆಸಿದ್ದರು.

ಸಾವರ್ಕರ್‌ ಚಿತ್ರ ಹಾಕಿದ್ದನ್ನು ಪ್ರಾಂಶುಪಾಲರಿಗೆ ದೂರು ನೀಡಿ ತೆಗೆಸಿದ್ದಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಶುಕ್ರವಾರ ಹಲ್ಲೆ ನಡೆಸಲಾಗಿದೆ ಎಂದು ಖಂಡಿಸಿ ವಿದ್ಯಾರ್ಥಿಗಳ ಗುಂಪು ಶುಕ್ರವಾರ ಸಂಜೆ ಹಂಪನಕಟ್ಟೆಯ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿತು.

Advertisement

ಹಲ್ಲೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕಠಿನ ಕ್ರಮಕ್ಕೆ ಒತ್ತಾಯಿಸಲಾಯಿತು.

ಹಿಜಾಬ್‌ ವಿಚಾರ, ಪತ್ರ
ವಿ.ವಿ. ಕಾಲೇಜಿನ ಹಿಜಾಬ್‌ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೀಡಿದ ನೋಟಿಸ್‌ಗೆ ಉತ್ತರ ಬಾರದೆ ಇರುವ ಹಿನ್ನೆಲೆಯಲ್ಲಿ ಮುಂದೆ ಏನು ಕ್ರಮ ಕೈಗೊಳ್ಳಬಹುದು ಎಂದು ಕೋರಿ ಪ್ರಾಂಶುಪಾಲರು ವಿ.ವಿ. ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದಾರೆ.

ಕಾಲೇಜಿನ ಶಿಸ್ತು ಉಲ್ಲಂಘಿಸಿ ಮೂವರು ವಿದ್ಯಾರ್ಥಿನಿಯರು ಇತ್ತೀಚೆಗೆ ಹಿಜಾಬ್‌ಗ ಅವಕಾಶ ನೀಡದೆ ಇರುವುದನ್ನು ಪ್ರಶ್ನಿಸಿದ್ದರು. ಅಲ್ಲದೆ ಈ ವಿದ್ಯಾರ್ಥಿನಿಯರು ಕೆಲವು ವಾರಗಳಿಂದ ತರಗತಿಗೂ ಹಾಜರಾಗದೆ ಇರುವುದರಿಂದ ಪ್ರಾಂಶುಪಾಲರು ಈ ವಿದ್ಯಾರ್ಥಿನಿಯರಿಗೆ ನೋಟಿಸ್‌ ನೀಡಿದ್ದರು. ಜೂ.9ರಂದು ಉತ್ತರ ನೀಡಲು ಕೊನೆಯ ದಿನವಾಗಿತ್ತು. ಆದರೆ ಉತ್ತರ ಇನ್ನೂ ಬಾರದೆ ಇರುವುದರಿಂದ ಮುಂದಿನ ಕ್ರಮಕ್ಕಾಗಿ ವಿ.ವಿ.ಯಿಂದ ಸೂಕ್ತ ನಿರ್ದೇಶನ ಕೋರಿ ಪತ್ರ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next