ಬೆಂಗಳೂರು: ಕರಾವಳಿ ಹಾಗೂ ಕೊಡಗು ಭಾಗದ ಪ್ರಾದೇಶಿಕ ಇತಿಹಾಸ, ಪರಂಪರೆ ಕುರಿತ ಪಠ್ಯವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಸೇರಿಸುವ ವಿಚಾರದಲ್ಲಿ ಆಗಿರುವ ಲೋಪವನ್ನು ಸರಿಪಡಿಸಲಾಗುವುದು ಹಾಗೂ ಆ ಲೋಪಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಶೂನ್ಯವೇಳೆಯಲ್ಲಿ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ವಿಷಯ ಪ್ರಸ್ತಾವಿಸಿ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ಬಂದ ಬಳಿಕ ಆಯಾ ಪ್ರಾದೇಶಿಕ ಇತಿಹಾಸ, ಪರಂಪರೆಯ ಬಗ್ಗೆ ಕಲಿಯಲು ಅವಕಾಶವಿದೆ. ಆದರೆ ಮಂಗಳೂರು ವಿವಿಯಲ್ಲಿ ಈ ಪಠ್ಯಕ್ರಮ ಸಿದ್ಧವಾಗಿಲ್ಲ. ಆದ್ದರಿಂದ ಅಲ್ಲಿನ ವಿದ್ಯಾರ್ಥಿಗಳು ಕರಾವಳಿ ಮತ್ತು ಕೊಡಗು ಭಾಗದ ಇತಿಹಾಸ, ಪರಂಪರೆ ಕಲಿಯುವುದರಿಂದ ವಂಚಿತರಾಗಿದ್ದಾರೆ. ಉನ್ನತ ಶಿಕ್ಷಣ ಪರಿಷತ್‌ನ ಸಮಿತಿಯು ಪಠ್ಯಕ್ರಮವನ್ನು ಸಿದ್ಧಗೊಳಿಸುತ್ತದೆ. ಆ ಸಮಿತಿಯ ಸಭೆಗೆ ವಿವಿಯಿಂದ ಪ್ರತಿನಿಧಿ ಕಳಿಸಿಲ್ಲ. ಹಾಗಾಗಿ ಇಲ್ಲಿಯ ವರೆಗೆ ಪಠ್ಯಕ್ರಮ ಸಿದ್ಧಪಡಿಸಿಲ್ಲ. ವಿವಿ ಮಾಡಿದ ನಿರ್ಲಕ್ಷ್ಯದಿಂದಾಗಿ ಪ್ರಾದೇಶಿಕ ಇತಿಹಾಸ ಕೈಬಿಡಲಾಗಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ರಘುಪತಿ ಭಟ್, ಒಬ್ಬ ಉಪನ್ಯಾಸಕನ ನಿರ್ಲಕ್ಷ್ಯದಿಂದ ಈ ಸಮಸ್ಯೆ ಆಗಿದೆ. ಬಹಳ ಮುಖ್ಯವಾದ ವಿಷಯವಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಪರಿಷತ್‌ನಿಂದ ಯಾವುದೇ ಪಠ್ಯಕ್ರಮ ನೀಡುವುದಿಲ್ಲ. ಚೌಕಟ್ಟು ಮಾತ್ರ ನಾವು ಕೊಡುತ್ತೇವೆ. ಪಠ್ಯಕ್ರಮ ರಚಿಸುವ ಅದನ್ನು ಅನುಮೋದಿಸಿ ಅಳಡಿಸಿಕೊಳ್ಳುವ ಕೆಲಸ ವಿವಿ ಮಟ್ಟದಲ್ಲೇ ಆಗುತ್ತದೆ ಎಂದರು.
ಇದಕ್ಕೆ ಅಸಮಧಾನಗೊಂಡ ಖಾದರ್, ಮಂಗಳೂರು ವಿವಿ ನಿಮ್ಮ ಅಧೀನದಲ್ಲಿ ಬರುವುದಿಲ್ಲವಾ? ತಪ್ಪು ಮಾಡಿದ್ದು ಯಾಕೆ ಎಂದು ವಿವಿ ಕುಲಪತಿಯನ್ನು ಕೇಳಿ. ಕುಲಪತಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ಎಂದು ಆಗ್ರಹಿಸಿದರು.