Advertisement

ಒಂದೆಡೆ ಪರೀಕ್ಷೆ; ಮತ್ತೊಂದೆಡೆ ತರಗತಿ; ಅತಿಥಿ ಉಪನ್ಯಾಸಕರ ತ್ರಿಶಂಕು ಸ್ಥಿತಿ

12:50 AM Aug 30, 2022 | Team Udayavani |

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪದವಿ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿರುವ ಮಧ್ಯೆಯೇ ಎನ್‌ಇಪಿಗೆ ದಾಖಲಾತಿ ಪಡೆದ ಹೊಸ ವಿದ್ಯಾರ್ಥಿಗಳ ತರಗತಿ ಆರಂಭವೂ ನಡೆಯುತ್ತಿದ್ದು, ಕಾಲೇಜು ಗಳಲ್ಲಿ ಅನಿಶ್ಚಿತತೆ ಹುಟ್ಟುಹಾಕಿದೆ.

Advertisement

ಆ. 17ರಂದೇ ಕಾಲೇಜುಗಳನ್ನು ಆರಂಭಿಸುವಂತೆ ಈ ಹಿಂದೆ ವಿ.ವಿ. ನಿರ್ದೇಶನ ನೀಡಿತ್ತು. ಆದರೆ 2021-22ರ ಶೈಕ್ಷ ಣಿಕ ಚಟುವಟಿಕೆ ಪೂರ್ಣವಾಗದ ಹಿನ್ನೆಲೆಯಲ್ಲಿ ಆರಂಭವನ್ನು ಸೆ. 1ಕ್ಕೆ ಮುಂದೂಡಲಾಗಿತ್ತು. ಸೆಪ್ಟಂಬರ್‌ ಮೊದಲ ವಾರದಿಂದ 6ನೇ ಸೆಮಿಸ್ಟರ್‌ ಸಹಿತ ಪದವಿಯ ವಿವಿಧ ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಯಲಿರುವುದು ಹೊಸ ತರಗತಿಗಳ ಆರಂಭಕ್ಕೆ ಸವಾಲಾಗಿದೆ.

ಪರೀಕ್ಷೆ, ಮೌಲ್ಯಮಾಪನ ಸಂದರ್ಭ ಪ್ರಾಧ್ಯಾಪಕರು ಮತ್ತು ತರಗತಿ ಕೊಠಡಿಗಳ ಅಗತ್ಯ ಇದೆ. ಅ. 3ರ ವರೆಗೆ ಪರೀಕ್ಷೆ ನಡೆಯ ಲಿದೆ. ಅದುವರೆಗೆ ಹೊಸ ವಿದ್ಯಾರ್ಥಿ ಗಳಿಗೆ ಪೂರ್ಣ ತರಗತಿ ಆರಂಭಿಸಲು ಕೆಲವೆಡೆಗಳಲ್ಲಿ ಕೊಠಡಿ, ಪ್ರಾಧ್ಯಾಪಕರ ಕೊರತೆ ಎದುರಾಗಲಿದೆ.

ಆನ್‌ಲೈನ್‌ ತರಗತಿಗೆ ಒಲವು!
ಪರೀಕ್ಷೆ ಮತ್ತು ತರಗತಿಯನ್ನು ಒಂದೇ ಸಮಯದಲ್ಲಿ ನಡೆಸುವುದು ಕಷ್ಟ ಎಂಬುದನ್ನು ಕೆಲವು ಕಾಲೇಜಿನವರು ವಿ.ವಿ.ಯ ಗಮನಕ್ಕೆ ತಂದಿದ್ದಾರೆ. ಪರೀಕ್ಷೆ ಮುಗಿಯುವ ವರೆಗೆ ಆನ್‌ಲೈನ್‌ ತರಗತಿಗೆ ಅನುಮತಿ ನೀಡುವಂತೆ ವಿ.ವಿ.ಯಿಂದ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯುವ ಸಾಧ್ಯತೆಯಿದೆ.

ತರಗತಿ ಮುಂದೂಡಿಕೆಗೆ ಅತೃಪ್ತಿ
ಈ ಮಧ್ಯೆ ಒಂದೊಂದೇ ಕಾರಣ ನೀಡುತ್ತ ಕಾಲೇಜು ಆರಂಭವನ್ನು ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಮುಂದಿನ ಪರೀಕ್ಷೆ-ಫಲಿತಾಂಶ ವಿಳಂಬವಾಗಿ ಅವರಿಗೆ ಉದ್ಯೋಗಕ್ಕೆ ಸಮಸ್ಯೆಯಾಗಲಿದೆ. ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆಗೆ ತೊಡಕಾಗುತ್ತದೆ. ಹೀಗಾಗಿ ಕಾಲೇಜಿ ನವರು ಸಹಕಾರ ಮನೋಭಾವದಿಂದ ತರಗತಿ ನಡೆಸಿದರೆ ಉತ್ತಮ ಎಂಬ ಅಭಿಪ್ರಾಯ ಕೆಲವು ಪ್ರಾಧ್ಯಾಪಕರಿಂದ ಕೇಳಿಬಂದಿದೆ.

Advertisement

ಹಾಸ್ಟೆಲ್‌ ಇಲ್ಲ !
ಪರೀಕ್ಷೆ ಮುಗಿಯದೆ 6ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಹಾಸ್ಟೆಲ್‌ ತೆರವು ಮಾಡುವುದಿಲ್ಲ. ಇದರಿಂದಾಗಿ ಹೊಸ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಪ್ರವೇಶಕ್ಕೆ ಅವಕಾಶ ಸಿಗುವುದಿಲ್ಲ. ಇಲಾಖೆಯ ಮಾಹಿತಿ ಪ್ರಕಾರ ಹೊಸ ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕರಿಸಿ ಸೇರ್ಪಡೆ ನಿಗದಿಯಾಗುವುದೇ ಸೆ. 26ಕ್ಕೆ. ಹೊಸ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಕರ್ಯ ಗಗನ ಕುಸುಮ!

ಅತಿಥಿ ಉಪನ್ಯಾಸಕರ ತ್ರಿಶಂಕು ಸ್ಥಿತಿ
ಸರಕಾರದ ಆದೇಶ ಪ್ರಕಾರ ಆ. 31ರ ವರೆಗೆ ಮಾತ್ರ ಅತಿಥಿ ಉಪನ್ಯಾಸಕರು ಈ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸ ಬಹುದು. ಸೆಪ್ಟಂಬರ್‌ ಬಳಿಕ ಅವರ ಹೊಣೆ ಮುಂದುವರಿಯುತ್ತದೆಯೇ ಎಂಬ ಬಗ್ಗೆ ಖಚಿತತೆ ಇಲ್ಲ. ಒಂದೆಡೆ ಕಾಲೇಜಿನಲ್ಲಿ ಪರೀಕ್ಷೆ- ಮೌಲ್ಯಮಾಪನ ಹಾಗೂ ಇನ್ನೊಂದೆಡೆ ಕಾಲೇಜು ಆರಂಭ ಆಗುವ ಒತ್ತಡದ ಸಮಯದಲ್ಲಿಯೇ ಅತಿಥಿ ಉಪನ್ಯಾಸಕರು ಇಲ್ಲವಾದರೆ ಸಮಸ್ಯೆ ಜಟಿಲವಾಗುವ ಸಾಧ್ಯತೆಯಿದೆ.

ಸೆ. 1ರಂದೇ ಕಾಲೇಜು ಆರಂಭಿಸುವಂತೆ ಸರಕಾರ ಸೂಚಿಸಿದೆ. ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಸ್ಯೆಯಾಗಲಿದೆ. ಹೀಗಾಗಿ ಎಲ್ಲ ವಿಧದಲ್ಲೂ ಹೊಂದಾಣಿಕೆ ಮಾಡಿ ಕೊಂಡು ವಿದ್ಯಾರ್ಥಿಗಳ ಆಗಮನಕ್ಕೆ ಸಿದ್ಧತೆ ಕೈಗೊಳ್ಳಲಾಗುವುದು.
– ಡಾ| ಕಿಶೋರ್‌ ಕುಮಾರ್‌, ಕುಲಸಚಿವರು (ಆಡಳಿತ), ಮಂ.ವಿ.ವಿ.

 

Advertisement

Udayavani is now on Telegram. Click here to join our channel and stay updated with the latest news.

Next