ಮಂಗಳೂರು ವಿಶ್ವವಿದ್ಯಾನಿಲಯ ಜಾರಿಗೊಳಿಸಿರುವ ಪಿಎಚ್‌ಡಿ ಹೊಸ ನೀತಿಯನ್ವಯ “ಅವಧಿ ಪಾಲನೆ’ ಇನ್ನು ಮುಂದೆ ಕಡ್ಡಾಯವಾಗಿರುತ್ತದೆ.
Advertisement
ಈ ಹಿಂದೆ ಸಂಶೋಧನಾ ವಿದ್ಯಾರ್ಥಿ 10 ವರ್ಷ ಕಳೆದು ಪಿಎಚ್‌ಡಿ ಮಂಡನೆ ಮಾಡದಿದ್ದರೂ, ವಿ.ವಿ., ಕುಲಪತಿ, ಮಾರ್ಗ ದರ್ಶಕರು ಅನುಮತಿ ನೀಡಿದರೆ ಪಿಎಚ್‌ಡಿ ಸಂಶೋಧನೆ ಮುಂದುವರಿಸಲು ಅವಕಾಶ ಸಿಗುತ್ತಿತ್ತು. ಆದರೆ, ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ. ಹೊಸ ನೀತಿಯ ಪ್ರಕಾರ, ಪೂರ್ಣಕಾಲಿಕ ಸಂಶೋಧನಾರ್ಥಿ 3 ವರ್ಷ ಹಾಗೂ 2 ವರ್ಷದ ಅವಧಿ ವಿಸ್ತರಣೆ ಸೇರಿ ಒಟ್ಟು 5 ವರ್ಷವನ್ನು ಮಾತ್ರ ಬಳಸಬಹುದು. ಅರೆಕಾಲಿಕ ಸಂಶೋಧನಾರ್ಥಿ ಒಟ್ಟು 6 ವರ್ಷವನ್ನು ಬಳಸಿಕೊಳ್ಳಲು ಮತ್ತು ಕೇವಲ ವಿಶೇಷ ಸಂದರ್ಭದಲ್ಲಿ ಮಾತ್ರ 1 ವರ್ಷದ ಅವಧಿ ವಿಸ್ತರಣೆ ಅನ್ವಯವಾಗುತ್ತದೆ. ಆದರೆ, ವಿಶೇಷ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಮಾತ್ರ 2 ವರ್ಷ ಅಧಿಕ ಅವಧಿ ವಿಸ್ತರಣೆ ಅನುಕೂಲ ಒದಗಿಸಲಾಗಿದೆ.
ಹಿರಿಯ ಉಪನ್ಯಾಸಕರು ನಿವೃತ್ತಿ ಯಾಗಲು 2 ವರ್ಷ ಇರುವ ಸಂದರ್ಭದಲ್ಲಿ ಪಿಎಚ್‌ಡಿಗೆ ಮಾರ್ಗದರ್ಶಕರಾಗಿ ಬರುವುದರಿಂದ ಕೆಲವು ವಿದ್ಯಾರ್ಥಿಗಳ ಪಿಎಚ್‌ಡಿ ಪೂರ್ಣಗೊಳಿಸಲು ಸಮಸ್ಯೆಗಳಾಗುತ್ತಿವೆ. ಯಾಕೆಂದರೆ, ಮಾರ್ಗದರ್ಶಕರು ಬದಲಾದ ಬಳಿಕ ಮತ್ತೆ ಹೊಸ ಮಾರ್ಗದರ್ಶಕರು ದೊರಕಿ ಪ್ರಬಂಧ ಮಂಡನೆ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ನಿವೃತ್ತರಾಗಲು 2 ವರ್ಷ ಇರುವವರಿಗೆ ಮಾರ್ಗದರ್ಶಕ ಅವಕಾಶ ನೀಡದಿರಲು ವಿ.ವಿ. ತೀರ್ಮಾನಿಸಿದೆ.
Related Articles
Advertisement
18 ವಿದ್ಯಾರ್ಥಿಗಳ ಪಿಎಚ್‌ಡಿ ಬಾಕಿ; 3 ಪಟ್ಟು ದಂಡದ ಜತೆಗೆ ವಿಶೇಷ ಅನುಮತಿ
ಮಂಗಳೂರು ವಿ.ವಿ.ಯ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಸಂಶೋಧನಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡು ಸಂಶೋಧನೆ ಮುಂದುವರಿಕೆಗೆ/ ನಿಗದಿತ ಸಮಯದಲ್ಲಿ ಪ್ರಬಂಧ ಮಂಡನೆಗೆ ಅಸಾಧ್ಯವಾಗಿರುವ 18 ಮಂದಿ ಸಂಶೋಧನಾ ವಿದ್ಯಾರ್ಥಿಗಳು ಅನುಮತಿ ಸಿಗದೆ ಸಂಕಷ್ಟದಲ್ಲಿದ್ದರು. ಇವರಲ್ಲಿ 2005ರಲ್ಲಿ ನೋಂದಣಿ ಮಾಡಿದ ಓರ್ವ ವಿದ್ಯಾರ್ಥಿಯಿದ್ದರೆ 2010-11ರಲ್ಲಿ ನೋಂದಣಿ ಮಾಡಿದ ಕೆಲವು ವಿದ್ಯಾರ್ಥಿಗಳಿದ್ದಾರೆ. ಉಳಿದವರು ಆಬಳಿಕ ನೋಂದಣಿ ಮಾಡಿದವರು. ಈ ಎಲ್ಲ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ “ಮುಂದೆ ಇಂತಹ ಪ್ರಕರಣಕ್ಕೆ ಅನುಮತಿ ನೀಡುವುದಿಲ್ಲ’ ಎಂಬ ಷರತ್ತಿನ “ವಿಶೇಷ ಪ್ರಕರಣ’ ಎಂದು ಪರಿಗಣಿಸಿ ವಿ.ವಿ. ಸಿಂಡಿಕೇಟ್, ಶೈಕ್ಷಣಿಕ ಮಂಡಳಿ ಸಭೆ ತೀರ್ಮಾನದಂತೆ ಅವರಿಗೆ 2 ವರ್ಷದ ವಿಸ್ತರಣೆ ಒದಗಿಸಲಾಗಿದೆ. ಅವರು ಸಾಮಾನ್ಯ ಶುಲ್ಕದ ಜತೆಗೆ 3 ಪಟ್ಟು ದಂಡ ಶುಲ್ಕ ಪಾವತಿಸಬೇಕಾಗಿದೆ. ಪಿಎಚ್‌ಡಿಗೆ ಅವಧಿ ವಿಸ್ತರಣೆ ಇಲ್ಲ’
ಪಿಎಚ್‌ಡಿಯ ಅವಧಿ ನಿಗದಿ ಮಾಡುವ ಮಹತ್ವದ ತೀರ್ಮಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕೈಗೊಂಡಿದೆ. ಸಂಶೋಧನಾ ವಿದ್ಯಾರ್ಥಿಗೆ ನೀಡಿದ ಅವಧಿಯನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ. ಹೊಸ ವಿದ್ಯಾರ್ಥಿಗಳ ದಾಖಲಾತಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
-ಪ್ರೊ| ಪಿ.ಎಲ್. ಧರ್ಮ, ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿ.ವಿ. -ದಿನೇಶ್ ಇರಾ